ತುಮಕೂರು: ರಾಜ್ಯ ಸರ್ಕಾರದ ಬಳಿ 19.39 ಲಕ್ಷ ಎಕರೆ ಗೋಮಾಳ ಜಮೀನು ಲಭ್ಯವಿದೆ, ಈ ಜಮೀನನ್ನು ರಾಜ್ಯ ಸರ್ಕಾರ ಖಾಸಗಿ ಸಂಘ, ಸಂಸ್ಥೆ, ಧಾರ್ಮಿಕ ಕೇಂದ್ರ ಟ್ರಸ್ಟ್ ಇತ್ಯಾದಿ ಹಾಗೂ ಬೃಹತ್ ಉದ್ಯಮಿಗಳಿಗೆ ಗೋಮಾಳ ಸರ್ಕಾರಿ ಭೂಮಿಯನ್ನು ಗುತ್ತಿಗೆ ಭೋಗ್ಯಕ್ಕೆ ನೀಡಲು ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿರುವುದು ಖಂಡನೀಯವೆಂದು ಭಾರತ ಕಮ್ಯುನಿಸ್ಟ್ ಪಕ್ಷ ತುಮಕೂರು ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ರಾಜ್ಯಾದ್ಯಂತ ಈ ಹಿಂದೆಯೇ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರು ತಾವು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯ ಹಕ್ಕು ಪತ್ರ ಕೋರಿ ಫಾರ್ಮ್ ನಂಬರ್ 50, 53, ಮತ್ತು 57 ರಲ್ಲಿ ಅಕ್ರಮ- ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗಳಿಗೆ ಇನ್ನೂ ಮಂಜೂರಾತಿ ಕೊಟ್ಟಿಲ್ಲ, ಹೀಗಿರುವಾಗ ಇಂತಹ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಪರಿಗಣಿಸಿ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಿದಲ್ಲಿ ಲಕ್ಷಾಂತರ ಕುಟುಂಬಗಳು ಭೂ ರಹಿತವಾಗಿ ಬೀದಿ ಪಾಲಾಗಲಿದ್ದಾರೆ, ಇದು ಸಾಮಾಜಿಕ ಸಂಘರ್ಷಕ್ಕೂ ಕಾರಣವಾಗಲಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ನಿವೇಶನ ರಹಿತ ಸಮೀಕ್ಷೆ ನಡೆಸಿದ್ದು, ಅದರಂತೆ ಲಕ್ಷಾಂತರ ಕುಟುಂಬಗಳು ಸ್ವಂತ ವಾಸದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರಿಗೆಲ್ಲಾ ಇದುವರೆಗೂ ನಿವೇಶನ ಸಿಕ್ಕಿಲ್ಲ, ರಾಜ್ಯದ ಬಹುತೇತ ಗ್ರಾಮ ಪಂಚಾಯ್ತಿಗಳು ನಿವೇಶನಕ್ಕಾಗಿ ಭೂಮಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿವೆ, ನಿವೇಶನ ನೀಡಲು ಅಗತ್ಯ ಸರ್ಕಾರಿ ಭೂಮಿ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳುತ್ತಿದ್ದು ಅದಕ್ಕೆ ಪರಿಭಾವಿತ ಅರಣ್ಯ ಕಾರಣ ನೀಡಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಭೂಮಿ ನೀಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವಾಗುತ್ತದೆ ಎಂದರು.
ಸಿಪಿಐ ಮುಖಂಡ ಕಂಬೇಗೌಡ ಮಾತನಾಡಿ ರಾಜ್ಯದಲ್ಲಿ ಸರ್ಕಾರದ ಭೂ ಸ್ವಾಧೀನ ಕ್ರಮದಿಂದ ಭೂಮಿ ಕಳೆದುಕೊಂಡ ಭೂ ಸಂತ್ರಸ್ಥರಿಗೆ ಬದಲಿ ಭೂಮಿ ನೀಡುವ ನೂರಾರು ಪುನರ್ ವಸತಿ ಯೋಜನೆಗಳ ಪ್ರಕ್ರಿಯೆ ಪೂರ್ಣಗೊಳ್ಳದೆ ಭೂ ಲಭ್ಯತೆಯ ಅನುಮೋದನೆ ರಾಜ್ಯ ಸರ್ಕಾರವನ್ನು ಎದುರು ನೋಡುತ್ತಿವೆ, ಈ ಹಂತದಲ್ಲಿ ಖಾಸಗಿ ಸಂಘ ಸಂಸ್ಥೆಗಳಿಗೆ ಭೂಮಿ ನೀಡಲು ಉದ್ದೇಶಿಸಿರುವುದು ಅಕ್ರಮ ಆದ್ಯತೆಯಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಪರವಾಗಿ ತುಮಕೂರು ತಹಶೀಲ್ದಾರ್ ಮೋಹನ್ ಅವರು ಸಿಪಿಐ ಕಾರ್ಯಕರ್ತರ ಮನವಿ ಸ್ವೀಕರಿಸಿದರು. ಈ ವೇಳೆ ಸಿಪಿಐ ಸಂಘಟನೆಯ ಕಾಂತರಾಜು, ರಮೇಶ್, ರಾಮಸ್ವಾಮಿ, ದೊಡ್ಡತಾಯಮ್ಮ, ರವಿಕುಮಾರ್, ಉದಯ್, ವೆಂಕಟೇಶ್, ಮಾರುತಿ ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.