ಪಾವಗಡ: ವಿದ್ಯುತ್ ಕಣ್ಣಾಮುಚ್ಚಾಲೆ ಜೊತೆಗೆ ಲೋಡ್ ಶೆಡ್ಡಿಂಗ್ ನಲ್ಲಿ ಕತ್ತರಿಯಿಂದ ಬೆಳೆಯೆಲ್ಲ ನಾಶವಾಗುತ್ತಿದೆ ಎಂದು ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ವಿದ್ಯುತ್ ಸ್ಟೇಷನ್ ವ್ಯಾಪ್ತಿಯ ರೈತರು ಅಲವತ್ತು ಕೊಂಡಿದ್ದಾರೆ.
ಸರ್ಕಾರ ಹೇಳಿರುವ ನಿಯಮದ ಪ್ರಕಾರ ದಿನಕ್ಕೆ 7 ತಾಸು ವಿದ್ಯುತ್ ನೀಡಬೇಕು, ಆದರೆ ಲಿಂಗದಹಳ್ಳಿ ಸ್ಟೇಷನ್ ನಲ್ಲಿ ಮಾತ್ರ ಮೂರು ತಾಸು ವಿದ್ಯುತ್ ನೀಡಿ ಅಧಿಕಾರಿಗಳು ಕೈ ತೊಳೆದುಕೊಳ್ಳುದ್ದಾರೆ, ಅದರಲ್ಲೂ ಅರ್ಧ ತಾಸು ಹೆಚ್ಚುವರಿ ಕರೆಂಟ್ ಕಟ್ ಮಾಡಿ ಕಣ್ಣಾಮುಚ್ಚಾಲೆ ಆಟ ಆಡ್ತಾರೆ, ಅಧಿಕಾರಿಗಳನ್ನು ಕೇಳಿದ್ರೆ ಎಲ್‌ಸಿ ತಗೋಬೇಕು ಎಂಬ ಸಬೂಬು ಹೇಳಿ ದಿನ ಕಳೆಯುತ್ತಾರೆ ಎಂದು ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಈ ಲಿಂಗದಹಳ್ಳಿ ಸ್ಟೇಷನ್ ವ್ಯಾಪ್ತಿಯ ರೈತರು ಈಗಾಗಲೇ ಜಮೀನಿನಲ್ಲಿ ಶೇಂಗಾ, ಭತ್ತ, ಅಡಿಕೆ ತೋಟ, ತರಕಾರಿಯಂತಹ ಬೆಳೆಯಿಟ್ಟು ಸಮರ್ಪಕ ನೀರಿಲ್ಲದೆ ಬೆಳೆನಾಶವಾಗಿ ಕೈ ಸುಟ್ಟುಕೊಂಡು ಸಾಲಗಾರರಾಗಿ ವಿಷ ಕುಡಿಯುವ ಪರಿಸ್ಥಿತಿಗೆ ಬಂದು ತಲುಪುತ್ತಿದ್ದಾರೆ, ಯಾಕೆಂದರೆ ಇಲ್ಲಿನ ರೈತ ಇಡಿ ಬದುಕನ್ನ ಕೃಷಿ ಮೇಲೆ ಅವಲಂಬಿತವಾಗಿರುವುದರಿಂದ ಹೀಗೆ ಯಾವಾಗಂದ್ರೆ ಆವಾಗ ಕರೆಂಟ್ ಕೈಕೊಟ್ಟರೆ ತಾನು ಕನಸ್ಸು ಹೊತ್ತು ಹಗಲು ರಾತ್ರಿ ಭೂಮಿ ಹಸನು ಮಾಡಿ ಬಿತ್ತಿದ ಬೀಜ ಬೆಳೆಯಾಗಿ ಜೀವ ಪಡೆಯುವ ಮುನ್ನವೇ ಕಣ್ಣ ಮುಂದೆಯೇ ಒಣಗುವುದನ್ನ ಕಂಡ ರೈತನ ಬದುಕಿನಲ್ಲಿ ಬರ ಸಿಡಿಲು ಬಡಿದಂತಾಗುತ್ತಿದೆ. ಪರಿಣಾಮ ಹೆಂಡತಿ ಮಕ್ಕಳು ಕುಟುಂಬವನ್ನ ಪೋಷಿಸಲಾಗದೆ, ಸಾಲಕ್ಕೆ ಬಡ್ಡಿ ತೆರಲಾಗದೆ ಪ್ರತಿದಿನವೂ ಆತಂಕದಲ್ಲೆ ಬದುಕು ದೂಡುವಂತಾಗಿದೆ ಎನ್ನುತ್ತಾರೆ ರೈತ ಚಿದಾನಂದರೆಡ್ಡಿ.
ಪಕ್ಕದ ಶೈಲಾಪುರ ಸ್ಟೇಷನ್ ನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡ್ತಿದ್ದಾರೆ, ಆದರೆ ಲಿಂಗದಹಳ್ಳಿ ಸ್ಟೇಷನ್ ನಲ್ಲೇಕೆ ವಿದ್ಯುತ್ ಕಡಿತ ಮಾಡಿ ರೈತನ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಇಲಾಖಾಧಿಕಾರಿಗಳಿಗೆ ಇಲ್ಲಿನ ರೈತರು ಹಿಡಿಶಾಪ ಹಾಕ್ತಿದ್ದಾರೆ.
ಈ ಭಾಗದ ಹೊಟ್ಟೆಬೊಮ್ಮನಹಳ್ಳಿ ಚಿದಾನಂದರೆಡ್ಡಿಯವರ ಜಮೀನಿನಲ್ಲಿ ಬೆಳೆಯಲಾದ ಟೊಮೋಟ ಸಮರ್ಪಕ ನೀರಿಲ್ಲದೆ ಒಣಗುತ್ತಿರುವ ದೃಶ್ಯ ಕಂಡರೆ ತಿಳಿಯುತ್ತೆ ವಿದ್ಯುತ್ ಯಾವ ರೀತಿ ಪೂರೈಕೆಯಾಗ್ತಿದೆ ಎಂದು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗದಹಳ್ಳಿ ವಿದ್ಯುತ್ ಸ್ಟೇಷನ್ ಜೆಇ ರಾಮಾಂಜಿನಪ್ಪ ಅವರನ್ನು ಕೇಳಿದ್ರೆ ಎಂಟು ಸಾಮಾರ್ಥ್ಯದ ಎಂಎ ಶಕ್ತಿ ಪರಿವರ್ತಕಗಳಿದ್ದವು, ಈಗ ಒಂದು ಎಂಟು ಎಂಎ ಪರಿವರ್ತಕದೊಂದಿಗೆ 6.3 ಎಂಎ ಶಕ್ತಿಪರಿವರ್ತಕ ಅಷ್ಟೇ ಇದೆ ನಾನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೀನಿ ಎನ್ನುತ್ತಾರೆ.
ಹಾಗಾದರೆ ಮೇಲಾಧಿಕಾರಿ ಎಇಇ ಅವರಿಗೆ ಇಲ್ಲಿನ ಮಾಹಿತಿಯಿದ್ದರು ಯಾಕೆ ಜಾಣ ಕುರುಡುತನ ತೋರುತ್ತಿದ್ದಾರೆ, ಕರೆಂಟ್ ಪ್ರಾಬ್ಲಂ ಆದರೆ ಮಾತ್ರ ಅಧಿಕಾರಿಗಳ ಪೋನ್ ಗಳು ಸ್ಚಿಚ್ ಆಫ್ ಆಗುತ್ತವೆ, ಯಾರಿಗೂ ಸಿಕ್ಕುವುದಿಲ್ಲ, ನಾವು ಯಾರ ಬಳಿ ಹೇಳಬೇಕು ನಮ್ಮ ಸಮಸ್ಯೆಯನ್ನ, ಒಂದು ವೇಳೆ ಫೋನ್ ಸಂಪರ್ಕಕ್ಕೆ ಸಿಕ್ಕಿದರೆ ಅದು ಇದು ಕಥೆ ಹೇಳಿ ಜಾರಿಕೊಳ್ತಾರೆ ಎಂದು ರೈತ ಗೋವಿಂದಪ್ಪ ಅಲವತ್ತುಕೊಂಡರು.
ಇಡೀ ನಾಡಿಗೆ ಅನ್ನ ಕೊಡುವ ಅನ್ನದಾತ ಸಾಲಸೋಲ ಮಾಡಿ ಬೆಳೆ ಇಡ್ತಾನೆ, ಆದರೆ ಆತ ಇಟ್ಟ ಫಸಲು ನೀರಿಲ್ಲದೆ ನಾಶವಾದರೆ ಆತನ ಪಾಡೇನು, ಜೊತೆಗೆ ಮಧ್ಯರಾತ್ರಿ ಕೊಡೋ ಕರೆಂಟಿನಿಂದ ನೀರಾಯಿಸಲು ಜಮೀನಿಗೆ ಹೋಗುತ್ತಾನೆ, ಹಾವು ಚೇಳು ಕರಡಿ ಕಾಟದಿಂದ ಪ್ರತಿದಿನವೂ ಪ್ರಾಣ ಭಯದಲ್ಲೆ ನೀರು ಹಾಯಿಸುತ್ತಾನೆ, ಸ್ವಲ್ಪ ಹಣೆ ಬರಹ ಕೆಟ್ಟರೂ ಆತ ಕಾಣದ ಲೋಕಕ್ಕೆ ಹೋಗುತ್ತಾನೆ, ಆತನನ್ನೆ ನಂಬಿ ಬದುಕುತ್ತಿರುವ ಆತನ ಕುಟುಂಬದ ಭವಿಷ್ಯದ ಪರಿಸ್ಥಿತಿಯೇನು ಎಂದು ಅಧಿಕಾರಿ ವರ್ಗ ಒಮ್ಮೆಯಾದರೂ ಯೋಚನೆ ಮಾಡಿದೆಯಾ, ಇದೊಂದು ರೀತಿ ದೀಪದ ಬುಡದಲ್ಲಿ ಕತ್ತಲು ಎಂಬಂತಾಗಿದೆ ಈ ಸ್ಟೇಷನ್ ವ್ಯಾಪ್ತಿಯ ರೈತರ ಗೋಳಿನ ಆತಂಕದ ಸ್ಥಿತಿ.
ಎಇಇ ಕೃಷ್ಣ ಮೂರ್ತಿ ಸಾಹೇಬರಿಗೆ ಇಲ್ಲಿನ ರೈತರ ಆರ್ಥನಾದದ ಗೋಳು ಗೊತ್ತಿದ್ದರೂ ಯಾಕೆ ಸ್ಪಂದಿಸುವ ಇಚ್ಛಾಶಕ್ತಿ ತೋರುತ್ತಿಲ್ಲ, ಇದಕ್ಕೆಲ್ಲ ಇವರ ಅಧಿಕಾರ ನಿರ್ಲಕ್ಷ್ಯತನವೇ ಕಾರಣ ಎಂದು ರೈತರು ಆರೋಪ ಮಾಡ್ತಿದ್ದಾರೆ.
ಕರೆಂಟ್ ಕಣ್ಣಾಮುಚ್ಚಾಲೆ- ರೈತರಿಗೆ ಪ್ರಾಣ ಸಂಕಟ
Get real time updates directly on you device, subscribe now.
Next Post
Comments are closed.