ತುಮಕೂರು: ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತ, ಕೇಸರಿ ಬಾವುಟವನ್ನು ಕೆಂಪುಕೋಟೆ ಮೇಲೆ ಹಾರಿಸುವ ವಿವಾದಾತ್ಮಕ ಹೇಳಿಕೆಯ ವಿಚಾರದಿಂದ ರಾಷ್ಟ್ರಕ್ಕೆ ಹಾಗೂ ಸಂವಿಧಾನಕ್ಕೆ ಅವಮಾನಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರನ್ನ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ರಾಜ್ಯಪಾಲರನ್ನ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಜಿ ಶಾಸಕ ರಫಿಕ್ ಅಹಮ್ಮದ್ ಮಾತನಾಡಿ, ಕೆ.ಎಸ್.ಈಶ್ವರಪ್ಪ ಅವರ ದೇಶದೋಹದ ಕಾರ್ಯ ಖಂಡನೀಯ, ಈಗಾಗಲೇ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ, ಜೊತೆಗೆ ಇಡಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆದರೂ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅವಮಾನವೆಸಗಿದ ಈಶ್ವರಪ್ಪರ ನಡೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದೇಶದೋಹದ ಕಾರ್ಯ ಎಂದರು.
ನಮ್ಮ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಹಳಷ್ಟು ಬಾರಿ ಹೇಳಿದ್ದಾರೆ, ಈಶ್ವರಪ್ಪ ಮಾನಸಿಕ ಅಸ್ವಸ್ಥನಾಗಿದ್ದಾನೆಂದು, ಹಾಗಾಗಿ ಕೂಡಲೇ ಕರ್ನಾಟಕ ರಾಜ್ಯಪಾಲರು ಎಚ್ಚೆತ್ತು ಅಸಂವಿಧಾನಿಕ ಹೇಳಿಕೆಯಿಂದ ಕೆಂಗಣ್ಣಿಗೆ ಗುರಿಯಾಗಿರುವ ಕೆ.ಎಸ್ ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಶಾಲಾ ಕಾಲೇಜು ಹಾಗೂ ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ರಾಷ್ಟ್ರ ಹಾಗೂ ರಾಷ್ಟ್ರ ಧ್ವಜಕ್ಕೆ ಅವಮಾನವೆಸಗಿದ ಕೆ.ಎಸ್ ಈಶ್ವರಪ್ಪರ ದೇಶ ವಿರೋಧಿ ನಡೆಯನ್ನ ಖಂಡಿಸುವುದನ್ನ ಬಿಟ್ಟು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ನಿಜಕ್ಕೂ ಆರೋಗ್ಯಕರವಲ್ಲ, ಮೋದಿ ಮತ್ತು ಬಸವರಾಜು ಬೊಮ್ಮಾಯಿ ಸರ್ಕಾರ ಗಮನಹರಿಸಿ ಸಚಿವರಿಂದ ರಾಜೀನಾಮೆ ಕೊಡಿಸಬೇಕು, ಇಲ್ಲ ರಾಜ್ಯಪಾಲರು ಅವರನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಅಣಕಿಸುವ ಕೆಲಸ ಮಾಡಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯಪಾಲರಿಗೆ ಮನವಿಯನ್ನು ಜಿಲ್ಲಾಧಿಕಾರಿ ವೈ.ಸಿ.ಪಾಟೀಲ್ ಯಲಗೌಡ ಶಿವನಗೌಡ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡ ನಯಾಸ್ ಅಹಮ್ಮದ್, ರಹೀಮ್ ಅಹಮ್ಮದ್, ಆಟೋರಾಜ, ಮೆಹಬೂಬ್ ಭಾಷಾ, ಡಿ.ಜೆ.ವಿಜಯ್ ಕುಮಾರ್, ಕೆಂಪಣ್ಣ, ಮಹಿಳಾ ಮುಖಂಡಯರಾದ ಸರೋಜಮ್ಮ, ಮಂಗಳಮ್ಮ, ನಾಗಮಣಿ, ಸುಜಾತ ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.