ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

123

Get real time updates directly on you device, subscribe now.

ಗುಬ್ಬಿ: ರಾಷ್ಟ್ರದ ಘನತೆಗೆ ಕುಂದು ತಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಗುಬ್ಬಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಿಕ್ಕ ರಂಗಣ್ಣ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪ ಅವರು ಸೌಹಾರ್ದತೆಗೆ ಧಕ್ಕೆ ತರುವಂತೆ ಮಾತನಾಡಿರುವುದು ಖಂಡನೀಯ, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರೈಸುತ್ತೇವೆ ಎಂದು ಹೇಳುವ ಮೂಲಕ ರಾಷ್ಟ್ರದ ಘನತೆಗೆ ಕುಂದು ತಂದಿದ್ದಾರೆ ಎಂದರು.
ಸಚಿವರ ನಡೆಯನ್ನು ಬಿಜೆಪಿ ಪಕ್ಷದವರು ಇಂತಹ ಹೇಳಿಕೆ ನೀಡಿದ್ದರು ಸಹ ಸಮರ್ಥಿಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು, ಹಿಜಾಬ್- ಕೇಸರಿ ವಸ್ತ್ರ ಪ್ರಕರಣ ನ್ಯಾಯಾಲಯದಲ್ಲಿರುವಾಗ ಸೌಹಾರ್ದತೆ ಕಾಪಾಡಬೇಕಾದ್ದು ಸಚಿವರ ಜವಾಬ್ದಾರಿ, ಆದರೆ ಈಶ್ವರಪ್ಪನವರು ಅಸಂವಿಧಾನಿಕ ಪದ ಪ್ರಯೋಗ ಮಾಡುವ ಮೂಲಕ ದ್ವೇಷದ ಕಿಚ್ಚು ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಭಂಗ ತಂದಿದ್ದಾರೆ, ಎಲ್ಲದಕ್ಕೂ ಹೈಕಮಾಂಡ್ ಕಡೆ ಬೊಟ್ಟು ತೋರಿಸುವ ಇವರಿಗೆ ಸರ್ಕಾರವನ್ನು ಮುನ್ನಡೆಸುವುದು ತಿಳಿದಿಲ್ಲ, ಬಿಜೆಪಿ ಯವರು ಕೋಮುಗಳನ್ನು ಎತ್ತಿ ಕಟ್ಟುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಛೇಡಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಾದಿಕ್ ಮಾತನಾಡಿ ಈ ದೇಶದ ಎಲ್ಲಾ ಪ್ರಜೆಗಳು ಇಲ್ಲಿನ ಕಾನೂನು ಗೌರವಿಸಲೇಬೇಕು, ಮೊದಲು ದೇಶ ಆನಂತರ ಧರ್ಮದ ವಿಚಾರ, ಕೋಮುಗಳ ಮಧ್ಯೆ ಒಡಕು ಉಂಟು ಮಾಡುವ ಬದಲು ಬಿಜೆಪಿಯವರು ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ ಜನಸಾಮಾನ್ಯರಿಗೆ ಬದುಕಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಣ್ಣ, ನಗರ ಘಟಕದ ಅಧ್ಯಕ್ಷ ಶಿವಕುಮಾರ್, ಕಾಂಗ್ರೆಸ್ ವೀಕ್ಷಕ ರಿಜ್ವಾನ್ ಉಲ್ಲಾ ಖಾನ್, ಮುಖಂಡರಾದ ಮಂಜುನಾಥ್, ಶಿವಾನಂದ್, ಮಹಮ್ಮದ್ ರಫಿ, ರಂಗನಾಥ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಶಿವಕುಮಾರ್, ವಸಂತಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!