ಅವಿತಿಟ್ಟಿದ್ದ ಸ್ಪೋಟಕ ಸಾಮಗ್ರಿಗಳ ಪತ್ತೆ

ಅಸುರಕ್ಷಿತ ಕಲ್ಲುಗಣಿಗಾರಿಕೆಗೆ ಗ್ರಾಮಸ್ಥರ ವಿರೋಧ

369

Get real time updates directly on you device, subscribe now.

ಕುಣಿಗಲ್‌: ಅಸಮರ್ಪಕ, ಅಸುರಕ್ಷಿತ ರೀತಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸ್ಪೋಟ ಖಂಡಿಸಿದ ಗ್ರಾಮಸ್ಥರು, ಗಣಿಗಾರಿಕೆ ಸ್ಪೋಟ ನಿಲ್ಲಿಸುವಂತೆ ಅಗ್ರಹಿಸಿರುವ ಘಟನೆ ನಡೆದಿದೆ.

ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಚೌಡನಕುಪ್ಪೆ ಗ್ರಾಪಂ ವ್ಯಾಪ್ತಿಯ ಕೆ.ಜಿ.ದೇವಪಟ್ಟಣ ಸರ್ವೇ ನಂಬರ್‌ 56ರ ಗೋಮಾಳದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಸದರಿ ಗಣಿಗಾರಿಕೆ ಕಾಮಗಾರಿಗೆ ಸ್ಪೋಟಕ ಬಳಸುತ್ತಿದ್ದು, ಅಸುರಕ್ಷಿತ, ಅಸಮರ್ಪಕ ಸ್ಪೋಟದಿಂದ ಗಣಿಗಾರಿಕೆ ಸುತ್ತಮುತ್ತಲ ಪ್ರದೇಶದ ಜನರು ಪರದಾಡುವಂತಾದ ಕಾರಣ, ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರಿದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ ನೇತ್ರವತಿ ಜಗದೀಶ್‌,ಉಪಾಧ್ಯಕ್ಷ ಸುರೇಶ, ಸದಸ್ಯರಾದ ಚಿಕ್ಕೆಗೌಡ, ಕೃಷ್ಣೇಗೌಡ, ವೆಂಕಟೇಶ್‌ ಹಾಗೂ ಹಂಗರಹಳ್ಳಿ, ಚೌಡನಕುಪ್ಪೆ, ವಡ್ಡರಾಳು, ದೇವಪಟ್ಟಣ, ಬೆಣಚುಕಲ್ಲು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದರು. ಈವೇಳೆ ಗಣಿಗಾರಿಕೆ ನಡೆಸುವವರು ಸ್ಪೋಟಕಗಳನ್ನು ಕಲ್ಲುಗಳ ಗುಹೆ, ಮಣ್ಣಿನಡಿಯಲ್ಲಿ ಹೂತಿಟ್ಟಿದ್ದು ಕಂಡುಬಂದಿತು.
ಈ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಮುಖಂಡ ಕೃಷ್ಣಪ್ಪ, ಕಲ್ಲುಗಣಿಗಾರಿಕೆ, ಕ್ರಷರ್‌ ನಡೆಸಲು ಸೂಕ್ತ ನಿಯಮಾವಳಿಗಳ ಪಾಲನೆ ಮಾಡಿಲ್ಲ. ಗಣಿಗಾರಿಕೆ ಸಮೀಪದಲ್ಲೆ ದೀಪಾಂಬುದಿಕೆರೆ ಇದೆ, ಸಂರಕ್ಷಿತ ಅರಣ್ಯಪ್ರದೇಶ ಇದೆ, ಇತಿಹಾಸ ಪ್ರಸಿದ್ದ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠ ಇದೆ. ಗಣಿಗಾರಿಕೆ ನಡೆಸುವವರು ಕಂಪ್ರಷರ್ ಬಳಸಿ ಅಳವಾದ ಸ್ಪೋಟಕಗಳನ್ನು ಮನಬಂದಂತೆ ನಡೆಸುವುದರಿಂದ ಸುತ್ತಮುತ್ತಲ ಗ್ರಾಮಗಳ ಮನೆಗಳ ಕಟ್ಟಡ ಬಿರುಕು ಮೂಡಿದೆ ಅಲ್ಲದೆ ಶ್ರೀಮಠದ ರಾಜಗೋಪುರವೂ ಬಿರುಕು ಮೂಡಿ ಜನರ ಧಾರ್ಮಿಕ ಭಾವನೆ ಕೆರಳುವಂತಾಗಿದೆ. ಸ್ಪೋಟಕಗಳನ್ನು ಸಮರ್ಪಕವಾಗಿ ರಕ್ಷಿಸಿಟ್ಟಿಲ್ಲ, ಹಲವಾರು ಬಾಕ್ಸ್ ಸ್ಪೋಟಕಗಳನ್ನು ಮಣ್ಣಲ್ಲಿ ಹೂತು ಇಟ್ಟಿದ್ದಾರೆ. ಈಗಲೆ ಬಿಸಿಲಿನ ಝಳ ಹೆಚ್ಚಿದೆ ಒಂದು ವೇಳೆ ಬಿಸಿಲಿನ ಝಳಕ್ಕೆ ಸ್ಪೋಟಗೊಂಡರೆ ಸುತ್ತಮುತ್ತಲ ಹಳ್ಳಿಗಳ ಜನ, ಜಾನುವಾರುಗಳ ಪ್ರಾಣ ಹಾನಿಯಾಗಲಿದೆ. ಶಿವಮೊಗ್ಗ, ಕೋಲಾರ ಜಿಲ್ಲೆಯಲ್ಲಿ ನಡೆದ ಭೀಕರ ಸ್ಪೋಟಕದಿಂದ ಅದ ಅನಾಹುತದಿಂದ ತಾಲೂಕು ಆಡಳಿತ ಇನ್ನು ಎಚ್ಚರಗೊಂಡಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂ ವತಿಯಿಂದ ನೋಟೀಸ್‌ ಜಾರಿಮಾಡಿದರೂ ಪ್ರಯೋಜನವಾಗಿಲ್ಲ. ಅವೈಜ್ಞಾನಿಕ, ಅಸುರಕ್ಷಿತ ಸ್ಪೋಟಕ ನಿರ್ವಹಣೆ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದು, ಗಣಿಗಾರಿಕೆ ನಿಲ್ಲಿಸಲು ಹಂಗರಹಳ್ಳಿ ಶ್ರೀಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ. ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!