ವಸತಿ ಪ್ರದೇಶದಲ್ಲಿ ಫಿವರ್ ಕ್ಲಿನಿಕ್ ಮತ್ತು ನಿರಾಶ್ರಿತರ ಶಿಬಿರಾರಂಭಕ್ಕೆ ವಿರೋಧ

167

Get real time updates directly on you device, subscribe now.

ಶಿರಾದ ವಿದ್ಯಾನಗರ ಬಡಾವಣೆಯ ದೇವರಾಜು ಅರಸು ವಿದ್ಯಾರ್ಥಿ ನಿಯಲಯದಲ್ಲಿ ನಿರಾಶ್ರಿತರ ಶಿಬಿರ ತೆರೆಯಲು ತಾಲ್ಲೂಕು ಆಡಳಿತ ಉದ್ದೇಶಿಸಿದ್ದು, ಅದನ್ನು ಕೈ ಬಿಡುವಂತೆ ಸ್ಥಳೀಯರು ಕೌನ್ಸಿಲರ್ ರಾಜಣ್ಣ ಮತ್ತು ಮುಖಂಡ ರಾಮು ಜೊತೆಯಲ್ಲಿ ಚರ್ಚಿಸಿದರು.
ಶಿರಾ: ಫಿವರ್ ಕ್ಲಿನಿಕ್ ತೆರೆಯುವ ವಿಚಾರದಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಜರುಗಿದ್ದು, ಪೊಲೀಸರು ಲಘುವಾಗಿ ಲಾಟಿ ಪ್ರಯೋಗಿಸಿದ ಘಟನೆ ಇಲ್ಲಿನ ಜ್ಯೋತಿನಗರದಲ್ಲಿ ಗುರುವಾರ ಸಂಜೆ ಜರುಗಿದೆ.
ಕೊರೋನ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆ ನಗರದ ವಿವಿಧೆಡೆ ಫಿವರ್ ಕ್ಲಿನಿಕ್ ತೆರೆದಿದ್ದು, ಗುರುವಾರದಂದು ಜ್ಯೋತಿನಗರದಲ್ಲಿನ ಯೋಜನಾ ಪ್ರಾಧಿಕಾರ ಕಛೇರಿಯಲ್ಲಿ ಕ್ಲಿನಿಕ್ ತೆರೆಯುವ ಸಲುವಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆಸ್ಪತ್ರೆ ವೈದ್ಯಾಧಿಕಾರಿಗಳು, ಸ್ಥಳೀಯ ಕೆಲವು ವೈದ್ಯರು ತಿಳಿ ಹೇಳಿದರೂ, ಜನರು ಒಪ್ಪಲು ತಯಾರಿರಲಿಲ್ಲ. ಕ್ಲಿನಿಕ್‌ಗೆ ಬರುವ ಜನ ಅಲ್ಲಿ ಇಲ್ಲಿ ಉಗಿಯುವುದಿಲ್ಲ, ತಮ್ಮಲ್ಲಿರುವ ರೋಗ ಹರಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಬಳಿಯೂ ಉತ್ತರ ಇರಲಿಲ್ಲ. ಒಂದು ಹಂತದಲ್ಲಿ ಪೊಲೀಸರು ಲಾಟಿ ಪ್ರಯೋಗಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನವನ್ನೂ ಮಾಡಿದರು.
ನಂತರ ಬಿಜೆಪಿ ನಗರ ಘಟಕದ ಅಧ್ಯಕ್ಷ ವಿಜಯರಾಜ್ ಮತ್ತಿತರೆ ಮುಖಂಡರು, ಮಾಧ್ಯಮದವರು ಅಧಿಕಾರಿಗಳ ಮನವೊಲಿಸಿ ಕ್ಲಿನಿಕ್ ಅನ್ನು ಪ್ರಾಧಿಕಾರ ಕಛೇರಿಗೆ ಕೆಲವೇ ಹೆಜ್ಜೆಗಳಷ್ಟು ದೂರವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯುವಂತೆ ಸೂಚಿಸಿದ್ದು, ಅದರಂತೆ ರಾತ್ರಿ ವೇಳೆಗೆ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ. ಉಪವಿಭಾಗಾಧಿಕಾರಿ ನಂದಿನಿದೇವಿ, ತಹಸೀಲ್ದಾರ್ ನಾಹಿದಾ ಜಂಜಂ, ಡಿವೈಎಸ್‌ಪಿ ಕುಮಾರಪ್ಪ, ಪ್ರಭಾರ ನಗರ ಸಿಪಿಐ ಶಿವಕುಮಾರ್ ಮತ್ತಿತರರು ಇದ್ದುದಾಗಿ ತಿಳಿದುಬಂದಿದೆ.
ನಿರಾಶ್ರಿತರ ಶಿಬಿರಕ್ಕೂ ನಕಾರ: ಶುಕ್ರವಾರ ಇಲ್ಲಿನ ವಿದ್ಯಾಾನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಬೇರೆಡೆಯಿಂದ ಬಂದು ಮಾರ್ಗದಲ್ಲಿ ಸಿಲುಕಿಕೊಂಡ ನಿರಾಶ್ರಿತರು ಮತ್ತಿತರಿಗೆ ವಸತಿ ಸೌಲಭ್ಯ ಕಲ್ಪಿಸಲು, ತಾಲ್ಲೂಕು ಆಡಳಿತ ಚಿಂತನೆ ನಡೆಸಿದೆ ಎನ್ನುವ ಸುದ್ದಿಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಎಲ್ಲಿಂದಲೋ ಬಂದವರು, ಅವರ ಗುಣ ಸ್ವಭಾವ, ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಂಥವರನ್ನು ವಸತಿ ಪ್ರದೇಶದ ಮಧ್ಯದಲ್ಲಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿ ತಂದಿರಿಸರಬಾರದು ಎಂದು ಸ್ಥಳೀಯರು ಒತ್ತಾಯಿಸಿದರು. ಕೌನ್ಸಿಲರ್ ಎಸ್.ಜೆ.ರಾಜಣ್ಣ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಆರ್.ರಾಮು ಜನರನ್ನು ಸಂತೈಸಿ, ಈ ಬಗ್ಗೆ ತಹಸೀಲ್ದಾರರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಜನರು ನಿರಾಳವಾದರು. ಆದರೂ ಮುಂಜಾಗ್ರತೆಯಾಗಿ ರಸ್ತೆಗಳನ್ನು ಬಂದ್ ಮಾಡುವ ಕುರಿತು ಎಚ್ಚರಿಸಿದರು.

Get real time updates directly on you device, subscribe now.

Comments are closed.

error: Content is protected !!