ಬಿಡಾಡಿ ದನಗಳ ರಕ್ಷಣೆಗೆ ನಿಲ್ಲದ ಪುರಸಭೆ

ಪ್ರಾಣಿ ಸಂರಕ್ಷಣೆ ನಿಯಮ ಕಡತದ ಕಾನೂನು ಅಷ್ಟೇ । ವಾಹನ ಸವಾರರಿಗೂ ಕಿರಿಕಿರಿ

136

Get real time updates directly on you device, subscribe now.

ಅನಂದ ಸಿಂಗ್‌ ಟಿ.ಹೆಚ್.
ಕುಣಿಗಲ್‌:
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಳೆದ ಕೆಲ ದಿನಗಳಿಂದ ಗಂಡು ಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಕರುಗಳು ಹೆದ್ದಾರಿಯಲ್ಲಿ ಬೀಡು ಬಿಡುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಕರುಗಳ ಸಂರಕ್ಷಿಸಿ ಗೊಶಾಲೆಗೆ ಸಾಗಿಸಲು ಸಂಬಂಧಫಟ್ಟವರು ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.

ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 ಕಟ್ಟುನಿಟ್ಟಾಗಿ ಜಾರಿಗೊಂಡ ಹಿನ್ನೆಲೆಲ್ಲಿ 13 ವರ್ಷ ಕೆಳಗಿನ ಜಾನುವಾರುಗಳ ಹತ್ಯೆ ಮಾಡದಂತೆ ಕಾಯಿದೆ ಪ್ರತಿಬಂಧಿಸುತ್ತದೆ ಅಲ್ಲದೆ ಒಂದು ವೇಳೆ ಹತ್ಯೆ ಮಾಡಿದಲ್ಲಿ ದಂಡ ಸೇರಿದಂತೆ ಸೆರೆವಾಸ ಸೇರಿದಂತೆ ಅಪಾರ ಪ್ರಮಾಣದ ದಂಡ ವಿಧಿಸಲು ಅವಕಾಶ ಇರುವಕಾರಣ ಗಂಡು ಕರು ಜನಿಸಿದ ಕೆಲ ದಿನಗಳ ನಂತರ ಬಹುತೇಕ ಜಾನುವಾರು ಮಾಲೀಕರು ಅವುಗಳನ್ನು ಹೊರಹಾಕುತ್ತಾರೆ. ಇನ್ನು ಕೆಲವರು ದೇವಾಲಯ, ತಮ್ಮೂರ ಹೊರಗೆ ಸೇರಿದಂತೆ ಇತರೆ ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ.
ಹೀಗೆ ಬೀದಿಗೆ ಬಿದ್ದ ಗಂಡು ಕರುಗಳು ತರಕಾರಿ ಅಂಗಡಿ, ಇತರೆ ತ್ಯಾಜ್ಯವನ್ನೆ ಅಹಾರವನ್ನಾಗಿ ಬಳಸಿಕೊಂಡು ರಸ್ತೆ, ರಸ್ತೆ ಬದಿಯಲ್ಲಿ ಬಿಡಾರ ಹೂಡುತ್ತಿವೆ. ಇನ್ನು ಕೆಲವು ಕರುಗಳು ಗುಂಪುಗೂಡಿಕೊಂಡು ಎಲ್ಲೆಂದರಲ್ಲಿ ಮೊಕ್ಕಂ ಹೂಡುತ್ತಿವೆ. ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಕೋಟೆ, ದೊಡ್ಡಪೇಟೆ, ಹೌಸಿಂಗ್‌ ಬೋರ್ಡ್‌ ಸೇರಿದಂತೆ ವಿವಿಧೆಡೆಗಳಲ್ಲಿ ಗಂಡು ಕರುಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಕರುಗಳು ಮುಖ್ಯವಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ವಿಶ್ರಾಂತಿ ಪಡೆಯುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕೆಲ ವಾಹನ ಸವಾರರ ನಿರ್ಲಕ್ಷ್ಯದಿಂದ ಕರುಗಳಿಗೆ ಸಣ್ಣ ಪ್ರಮಾಣದ ಗಾಯವಾದರೆ, ವಾಹನ ಸವಾರರಿಗೂ ಸಣ್ಣಪುಟ್ಟ ಗಾಯವಾಗಿದೆ. ಜಾನುವಾರು ಮಾಲೀಕರಿಗೂ ಬೇಡವಾದ, ಜನತೆಗೂ ಬೇಡವಾದ ಈ ಗಂಡು ಕರುಗಳ ಸ್ಥಿತಿ ಶೋಚನೀಯವಾಗಿದೆ.
ಬೀಡಾಡಿ ಕರುಗಳಿಂದ ಯಾವುದೇ ತೊಂದರೆಯಾಗದಂತೆ ರಕ್ಷಿಸುವ ಹೊಣೆಗಾರಿಕೆ ಪುರಸಭೆಯದ್ದೆ ಅದರೂ ಪುರಸಭೆ ಅಡಳಿತಕ್ಕೆ ಪ್ರಾಣಿ ಪ್ರಿಯ ಸಂಘಟನೆ, ಪ್ರಾಣಿ ಸಂರಕ್ಷಣೆ ನಿಯಮಗಳು ತಲೆನೋವಾಗಿ ಪರಿಣಮಿಸಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ನಾಯಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮುಂದಾದಾಗ ಪ್ರಾಣಿಪ್ರಿಯರು ಶಸ್ತ್ರಚಿಕಿತ್ಸೆ ಬೇಡಿಕೆ ಇಟ್ಟಿದ್ದು ಸೂಕ್ತ ವ್ಯವಸ್ಥೆ ಮಾಡಲಾಗದೆ, ಬೀದಿನಾಯಿಗಳ ತಂಟೆಗೆ ಹೋಗದೆ ಏನು ಮಾಡಲಾಗದೆ ಪುರಸಭೆ ಅಧಿಕಾರಿಗಳು ಕೈಚೆಲ್ಲಿ ಕುಳಿತರು. ಇದೀಗ ಬಿಡಾಡಿ ಗಂಡು ಕರುಗಳ ಸಮಸ್ಯೆ ಹೇಗೆ ನಿಯಂತ್ರಿಸಬೇಕು ಹಾಗೂ ಪಟ್ಟಣ ಪ್ರದೇಶಕ್ಕೆ ಗಂಡು ಕರುಗಳನ್ನು ಹೊರ ಹಾಕುತ್ತಿರುವವರು ಯಾರು ಎಂಬುದನ್ನು ಪತ್ತೆಹಚ್ಚಲಾಗದೆ ಪರದಾಡುವಂತಾಗಿದೆ.
ರೈತಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್‌, ಬಿಜೆಪಿ ಸರ್ಕಾರ ಮತ ಬ್ಯಾಂಕ್‌ ರಾಜಕಾರಣಕ್ಕೆ ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ಜಾರಿ ಗೊಳಿಸಿದೆ. ಅದರೆ, ಈ ಗಂಡು ಕರುಗಳ ರಕ್ಷಣೆ ಬಗ್ಗೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. 13 ವರ್ಷದ ನಂತರದ ಜಾನುವಾರು ಹತ್ಯೆಗೆ ಅವಕಾಶ ನೀಡಲಾಗಿದೆ. ಜಾನುವಾರು ಮಾಲೀಕರಿಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಸರ್ಕಾರ ಕಾಯಿದೆ ನೆಪದಲ್ಲಿ ಜಾನುವಾರು ಮಾಲೀಕರಿಗೆ ತೊಂದರೆ ಮಾಡಿದೆ ವಿನಾಹ ತಾಲೂಕಿ ಗೊಂದು ಗೋಶಾಲೆ ನಿರ್ಮಿಸಿಲ್ಲ. ಇದಕ್ಕೆಲ್ಲಾ ಸರ್ಕಾರವೆ ನೇರ ಹೊಣೆ ಎಂದಿದ್ದಾರೆ.
ಪಟ್ಟಣದ ಗೋರಕ್ಷಕ ಮಂಜುನಾಥ, ಜಾನುವಾರು ಮಾಲೀಕರು ಗಂಡುಕರುಗಳನ್ನು ಗೊಶಾಲೆಗೆ ಕಳಿಸಿಕೊಡಬೇಕು, ನಮಗೆ ಮಾಹಿತಿ ನೀಡಿದ್ದಲ್ಲಿ ನಾವೆ ಗೋಶಾಲೆಗೆ ಸಾಗಿಸುತ್ತೇವೆ. ಸರ್ಕಾರ ಅಕ್ರಮ ಜಾನುವಾರು ಹತ್ಯೆ, ಕಳ್ಳತನ ತಡೆಗಟ್ಟಲು ನ್ಯಾಯೋಚಿತ ಕಾಯಿದೆ ಮಾಡಿದೆ. ಇದರಿಂದ ಜಾನುವಾರು ಸಂಕುಲ ಉಳಿದು, ಬೆಳೆಯಲು ಸಹಕಾರಿ ಎಂದಿದ್ದಾರೆ.
ಅದೇನೆ ಇರಲಿ ಕಾನೂನು ಕೇವಲ ಕಡತಗಳಿಗಷ್ಟೇ ಸೀಮಿತವಾಗದೆ ಅನುಷ್ಟಾನಕ್ಕೆ ಮುಂದಾಗಲಿ, ಅಧಿಕಾರಿಗಳು ಪ್ರಾಣಿಗಳ ರಕ್ಷಣೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂಬುದು ಪ್ರಾಣಿಪ್ರಿಯರ ಅಭಿಪ್ರಾಯವಾಗಿದೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!