ಕುಣಿಗಲ್: ತಾಲೂಕಿನ ಚಿಕ್ಕಮಳಲವಾಡಿ, ನಾಗೇನಹಳ್ಳಿಯಲ್ಲಿ ಮುಚ್ಚಲ್ಪಟ್ಟಿದ ಕೇಂದ್ರ ರೇಷ್ಮೆ ಮಂಡಳಿಯ ಎರಡೂ ಫಾರಂಗಳನ್ನು ಪುನರ್ ಆರಂಭಿಸಲು ಸಿಎಸ್‌ಬಿ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಮಾಜಿ ಸಚಿವ ದಿ.ವೈ.ಕೆ.ರಾಮಯ್ಯನವರು ತಾಲೂಕಿನ ಮೈಸೂರು ತಳಿ ಬಿತ್ತನೆ ವಲಯದ ರೇಷ್ಮೆ ಬೆಳೆಗಾರರ ಅನುಕೂಲಕ್ಕೆ ಕೇಂದ್ರ ರೇಷ್ಮೆ ಮಂಡಳಿ (ಸಿಎಸ್‌ಬಿ) ಯವರಿಂದ 1986ರಲ್ಲಿ ನಾಗೇನಹಳ್ಳಿ ಹಾಗೂ ಚಿಕ್ಕಮಳಲವಾಡಿ (ಬನ್ನಿಮರದಕಟ್ಟೆ) ಯಲ್ಲಿ ರೇಷ್ಮೆ ಫಾರಂಗಳನ್ನು ಪ್ರಾರಂಭಿಸಿದ್ದರು. ಇದರಿಂದ ಈ ಭಾಗ ಸೇರಿದಂತೆ ತಾಲೂಕಿನ ನೂರಾರು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ಜೊತೆಯಲ್ಲಿ ಹಲವಾರು ಮಂದಿ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸಿತ್ತು, ಎರಡೂ ಫಾರಂಗಳಿಗೆ ಬೇಕಾದ ಜಾಗಗಳನ್ನು ಸಹ ಮಂಜೂರು ಮಾಡಿಸಿದ್ದು ಪ್ರಸಕ್ತ ಜಾಗಗಳು ನೂರಾರು ಕೋಟಿ ರೂ. ಬೆಲೆ ಬಾಳುತ್ತಿದೆ, ಸದರಿ ಫಾರಂಗಳಲ್ಲಿ ಸಿಎಸ್‌ಬಿ ವತಿಯಿಂದ ಸುಸಜ್ಜಿತ ವಸತಿಗೃಹ, ಕಚೇರಿ ಕಟ್ಟಡ ಸೇರಿದಂತೆ ರೇಷ್ಮೆ ಕೃಷಿಗೆ ಪೂರಕ ಕ್ರಮ ಕೈಗೊಳ್ಳಲಾಗಿತ್ತು.
ಎರಡೂ ರೇಷ್ಮೆ ಫಾರಂಗಳನ್ನು ಸಿಎಸ್‌ಬಿ ಅಧಿಕಾರಿಗಳು ಸಕಾರಣ ಇಲ್ಲದೆ 2021ರಲ್ಲಿ ಮುಚ್ಚಿ, ಇಲ್ಲಿದ್ದ ಸಿಬ್ಬಂದಿಯನ್ನು ಉತ್ತರ ಕರ್ನಾಟಕ, ತಮಿಳುನಾಡಿನ ಊಟಿ, ಹೊಸೂರು ಇತರೆಡೆಗೆ ವರ್ಗ ಮಾಡಿದರು, ಇಲಾಖೆ ವಶದಲ್ಲಿದ್ದ ಎರಡೂ ಫಾರಂಗಳಲ್ಲಿ ಯಾವುದೆ ಭದ್ರತಾ ಸಿಬ್ಬಂದಿ ನೇಮಿಸದ ಕಾರಣ ಎರಡೂ ಫಾರಂ ಪಾಳು ಬೀಳುವಂತಾಗಿ ಸ್ಥಳೀಯ ಉದ್ಯೋಗಿಗಳು ಸೇರಿದಂತೆ ನೂರಾರು ರೇಷ್ಮೆ ಬೆಳೆಗಾರ ರೈತರಿಗೆ ತೊಂದರೆಯಾಯಿತು, ಸತತ 36 ವರ್ಷಗಳ ಕಾಲ ಉತ್ತಮ ಸೇವೆ ನೀಡಿದ್ದ ಈ ಫಾರಂಗಳು ಮುಚ್ಚಿದ್ದರಿಂದ ಸ್ಥಳೀಯ ಬೆಳೆಗಾರರಿಗೆ ಸಮಸ್ಯೆಯಾಯಿತು, ಈ ಬಗ್ಗೆ ಸ್ಥಳೀಯರು, ರೇಷ್ಮೆ ಬೆಳೆಗಾರರು ಎರಡೂ ಫಾರಂಗಳ ಪುನರ್ ಆರಂಭಕ್ಕೆ ಸಂಬಂಧ ಪಟ್ಟವರಿಗೆ ಆಗ್ರಹಿಸುವಂತೆ ನನ್ನನ್ನು ಭೇಟಿ ಮಾಡಿ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ತಾವು ಕೆಲ ತಿಂಗಳ ಹಿಂದೆ ಬೆಂಗಳೂರಿನ ಕೇಂದ್ರೀಯ ರೇಷ್ಮೆ ಮಂಡಳಿಯ ಸಿಇಒ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ರಜಿತ್ ರಂಜನ್ ವೊಕಾಂಡಿಯಾರ್ ಹಾಗೂ ನಿರ್ದೇಶಕ ಡಾ.ವಿ.ಶಿವಪ್ರಸಾದ್ ಅವರನ್ನು ಭೇಟಿ ಮಾಡಿ ಎರಡೂ ಫಾರಂನ ಸ್ಥಿತಿ, ಜಾಗದ ಲಭ್ಯತೆ ಈಗಿರುವ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಭೇಟಿ ನೀಡಿ, ಮುಚ್ಚಲ್ಪಟ್ಟಿರುವ ಎರಡೂ ಫಾರಂಗಳನ್ನು ಪುನರ್ ಆರಂಭಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ಈ ಭಾಗದ ರೇಷ್ಮೆ ಬೆಳೆಗಾರರಿಗೆ, ರೈತರಿಗೆ ಅನುಕೂಲವಾಗಲಿದೆ, ಅಲ್ಲದೆ ರೇಷ್ಮೆ ಸಚಿವರಾಗಿ ತಾಲೂಕಿಗೆ ಉತ್ತಮ ಕೆಲಸ ಮಾಡಿದ್ದ ಮಾಜಿ ಸಚಿವ ದಿ.ವೈ.ಕೆ.ರಾಮಯ್ಯನವರ ಶ್ರಮಪಟ್ಟು ಕಟ್ಟಿದ ಎರಡೂ ಫಾರಂ ಉಳಿಯುವ ಮೂಲಕ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ. ರೇಷ್ಮೆ ಫಾರಂ ಪುನರ್ ಆರಂಭಕ್ಕೆ ಸಹಕಾರ ನೀಡಿದ ಬೆಳೆಗಾರರಿಗೂ, ರೈತರಿಗೆ ಹಾಗೂ ಪುನರ್ ಆರಂಭಕ್ಕೆ ಒಪ್ಪಿಗೆ ನೀಡಿದ ಕೇಂದ್ರ ರೇಷ್ಮೆ ಮಂಡಳಿ ಅಧಿಕಾರಿಗಳಿಗೂ ಧನ್ಯವಾದ ಅರ್ಪಿಸಿದರು.
ರೇಷ್ಮೆ ಮಂಡಳಿ ಫಾರಂ ಪುನಾರಂಭಕ್ಕೆ ಒಪ್ಪಿಗೆ ಸಿಕ್ಕಿದೆ: ಎಸ್.ಪಿ.ಎಂ
Get real time updates directly on you device, subscribe now.
Prev Post
Next Post
Comments are closed.