ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ: ಎಡಿಸಿ

4,929

Get real time updates directly on you device, subscribe now.

ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್‌ 10 ರಿಂದ 22ರ ವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿ, ದೇವರಾಯನದುರ್ಗ ದೇವಾಲಯಕ್ಕೆ ಹೋಗುವ ರಸ್ತೆ ದುರಸ್ತಿ, ಡಾಂಬರೀಕರಣ ಕಾಮಗಾರಿ, ಬೀದಿ ದೀಪ ದುರಸ್ತಿ ಸೇರಿದಂತೆ ಅಗತ್ಯ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆಗೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಾತ್ರೆಯ ಸಮಯದಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಆಭರಣ ತೆಗೆದುಕೊಂಡು ಹೋಗುವಾಗ ಹಾಗೂ ಬರುವಾಗ ಸೂಕ್ತ ರಕ್ಷಣೆಗಾಗಿ ಇಬ್ಬರು ದಪೇದಾರ್‌ ಹಾಗೂ 10 ಗನ್‌ ಮ್ಯಾನ್‌ ಸೇರಿದಂತೆ ಜಾತ್ರೋತ್ಸವದ ಭದ್ರತೆ ದೃಷ್ಟಿಯಿಂದ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಹಾಗೂ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕೆಂದು ಡಿವೈಎಸ್ಪಿ ಶ್ರೀನಿವಾಸ್‌ ಸೂಚನೆ ನೀಡಿದರು.
ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಹಾಗೂ ಮಾಸ್‌್ಕ, ಸ್ಯಾನಿಟೈಸರ್‌ ಬಳಸುವಂತೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಸ್‌ಆರ್‌ಟಿಸಿ ಯಿಂದ ದೇವರಾಯನದುರ್ಗಕ್ಕೆ ಹೋಗಿ ಬರಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕಲ್ಲದೆ ದೇವಾಲಯದಿಂದ ಕುಂಭಿ ಬೆಟ್ಟಕ್ಕೆ ಪ್ರತಿ ಮೂರು ನಿಮಿಷಕೊಮ್ಮೆ ಬಸ್‌ಗಳು ಸಂಚರಿಸಬೇಕು ಎಂದು ನಿರ್ದೇಶಿಸಿದರು.
ಮಾರ್ಚ್‌ 17ರಂದು ಜರುಗಲಿರುವ ಬ್ರಹ್ಮ ರಥೋತ್ಸವ ದಿನದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದರು.
ಕುಂಭಿ ಬೆಟ್ಟದ ಬಳಿ ಜಾತ್ರಾ ಸಮಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸ್ಥಳದಲ್ಲಿ ಅಂಗಡಿ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರ ಹಾಗೂ ಭಕ್ತಾದಿಗಳಿಗೆ ತೊಂದರೆಯಾಗುತ್ತಿದ್ದು, ಸದರಿ ಅಂಗಡಿಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಗಾರ್ಡ್‌ಗಳನ್ನು ನೀಯೋಜಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ ಅವರಿಗೆ ಸೂಚಿಸಿದರು.
ಜಾತ್ರಾ ಸಮಯದಲ್ಲಿ ದೇವಾಲಯದ ಸುತ್ತಮುತ್ತಲಿನ 5 ಕಿ.ಮೀ. ದೂರದವರೆಗೂ ಮದ್ಯಪಾನ ಮಾರಾಟ ನಿಷೇಧಿಸಲು ಕ್ರಮ ವಹಿಸಬೇಕೆಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್‌ ಕಾರ್ಯ ನಿರ್ವಾಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಕಾನೂನು ಸುವ್ಯವಸ್ಥೆ ಮತ್ತು ಅಪಘಾತ ತಡೆಯುವ ಉದ್ದೇಶದಿಂದ ತಹಶಿಲ್ದಾರ್‌, ಇಒ, ಪೊಲೀಸ್‌ ಇಲಾಖೆಯ ಅನುಮತಿಯಿಲ್ಲದೆ ರಸ್ತೆ ಬದಿಗಳಲ್ಲಿ ಯಾವುದೇ ರೀತಿಯ ಫ್ಲೆಕ್‌್ಸ, ಬಂಟಿಂಗ್‌್ಸಗಳನ್ನು ಅಳವಡಿಸಬಾರದು, ಈ ಕುರಿತು ಪಿಡಿಒ ನಿಗಾವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿ.ಅಜಯ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!