ಹಳ್ಳಿಕಾರ್‌ ತಳಿ ರಾಸು ಉಳಿಸುವತ್ತ ಚಿತ್ತ ಹರಿಸಿ: ಮಸಾಲೆ

247

Get real time updates directly on you device, subscribe now.

ತುರುವೇಕೆರೆ: ಹಳ್ಳಿಕಾರ್‌ ತಳಿಯ ರಾಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಸಂರಕ್ಷಿಸಲು ರೈತಾಪಿಗಳು ಸೇರಿದಂತೆ ಸಮಾಜದ ಎಲ್ಲರೂ ಚಿತ್ತ ಹರಿಸಬೇಕಿದೆ ಎಂದು ಶಾಸಕ ಮಸಾಲ ಜಯರಾಮ್‌ ಹೇಳಿದರು.

ತಾಲೂಕಿನ ಲೋಕಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಂದಿನಿ ಕ್ಷೀರಭವನ ಉದ್ಘಾಟಿಸಿ ಮಾತನಾಡಿ, ದೇಶಿ ತಳಿಯಲ್ಲಿ ಹಳ್ಳಿಕಾರ್‌ ಬಹು ಪ್ರಮುಖವಾದದ್ದಾಗಿದೆ, ಹಳ್ಳಿಕಾರ್‌ ತಳಿ ಅಭಿವೃದ್ಧಿ ಪಡಿಸಬೇಕೆಂಬ ನಿಟ್ಟಿನಲ್ಲಿ ನಾನು 26 ಲಕ್ಷ ಮೌಲ್ಯದ ಹೋರಿ ತಂದಿರುತ್ತೇನೆ, ಹಳ್ಳಿಕಾರ್‌ ತಳಿ ಅಭಿವೃದ್ಧಿ ಪಡಿಸುವ ಮನಸ್ಸುಳ್ಳ ರೈತರು ತಮ್ಮ ರಾಸುಗಳಿಗೆ ಬ್ರೀಡ್‌ ಮಾಡಿಸಬಹುದು ಎಂದ ಅವರು ತುಮುಲ್‌ ಹೈನುಗಾರರಿಗಾಗಿ ವಿವಿಧ ಯೋಜನೆ ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತುಮುಲ್‌ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ ಲೋಕಮ್ಮನಹಳ್ಳಿ ಹಾಲು ಉತ್ಪಾದಕರ ಸಂಘ ಪ್ರಾರಂಭವಾಗಿ 33 ವರ್ಷಗಳ ನಂತರ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಂಡಿದೆ, ಹೈನುಗಾರರಿಗೆ ಒಂದು ವಾರಕ್ಕೆ 19 ಕೋಟಿ ರೂ. ಹಾಲಿನ ಬಾಬ್ತನ್ನು ಬಟವಾಡೆ ನೀಡಲಾಗುತ್ತಿದೆ, ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತುಮುಲ್‌ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದೆ, ಶೀಘ್ರ ತುಮಕೂರಿನಲ್ಲಿ ಮೇಘಾ ಡೇರಿ ಪ್ರಾರಂಭಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಲೋಕಮ್ಮನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಬಿ.ಹರೀಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ್‌ ಭಟ್‌, ವ್ಯವಸ್ಥಾಪಕ ಎನ್‌.ನರಸಿಂಹನ್‌, ಧರ್ಮಸ್ಥಳದ ಸಂಘದ ಯೋಜನಾಧಿಕಾರಿ ಯಶೋಧರ, ಮುಖಂಡರಾದ ದುಂಡಾರೇಣಕಪ್ಪ, ಕೆಂಪರಾಜು, ಮೂಡಲಗಿರಿಗೌಡ, ಯೋಗಾನಂದ್‌, ವಿ.ಬಿ.ಸುರೇಶ್‌ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!