ಪ್ರಜಾಪ್ರಭುತ್ವದ ವಿನ್ಯಾಸವೇ ಸಂಸದೀಯ ಪದ್ಧತಿ

ಪ್ರಜಾಪ್ರಭುತ್ವದಲ್ಲಿ ಸಾಮೂಹಿಕ ನಿರ್ಣಯ ಕೈಗೊಳ್ಳುವುದು ಮುಖ್ಯ

208

Get real time updates directly on you device, subscribe now.

ತುಮಕೂರು: ಭಾರತ ಪ್ರಜಾಪ್ರಭುತ್ವದ ದೇಶ, ಪ್ರಜಾಪ್ರಭುತ್ವದ ಮೂಲ ವಿನ್ಯಾಸ ಸಂಸದೀಯ ಪದ್ಧತಿಯಲ್ಲಿದೆ, ಈ ಸಂಸದೀಯ ಪದ್ಧತಿಯೇ ಪ್ರಜಾಪ್ರಭುತ್ವದ ಮೂಲ ಬೇರು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಕೆ.ದ್ವಾರಕನಾಥ್‌ ಬಾಬು ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಬೆಂಗಳೂರು, ವಿದ್ಯೋದಯ ಕಾನೂನು ಕಾಲೇಜು ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತುಮಕೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಸಂಸತ್‌, ರಾಜ್ಯಮಟ್ಟದಲ್ಲಿ ವಿಧಾನಸಭೆ, ಜಿಲ್ಲಾ ಮಟ್ಟದಲ್ಲಿ ಜಿಪಂ, ತಾಲ್ಲೂಕು ಮಟ್ಟದಲ್ಲಿ ತಾಪಂ ಹಾಗೂ ಹೋಬಳಿ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಈ ಎಲ್ಲವೂ ಸಂಸದೀಯ ಪದ್ಧತಿಯ ತುಣುಕುಗಳು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸಾಮೂಹಿಕ ನಿರ್ಣಯ ಕೈಗೊಳ್ಳುವುದು ಬಹಳ ಮುಖ್ಯ, ಮತ್ತೊಬ್ಬರ ಅನಿಸಿಕೆ, ಅಭಿಪ್ರಾಯಗಳನ್ನು ಗೌರವಿಸುವುದು ಸಹ ಅಷ್ಟೇ ಮುಖ್ಯ, ಹಾಗಾಗಿ ಇಂದಿನ ಮಕ್ಕಳಿಗೆ ಸಾಮೂಹಿಕ ನಿರ್ಣಯ ಕೈಗೊಳ್ಳುವ ಕಲೆ ಕಲಿಸುವುದು ಅಗತ್ಯವಾಗಿದೆ ಎಂದರು.
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು, ಹಾಗಾಗಿ ನಾಯಕತ್ವ ಗುಣ ಬೆಳೆಸುವ ಸಲುವಾಗಿ ಸರ್ಕಾರ ಇಂತಹ ಸ್ಪರ್ಧಾ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.
ವಿಧಾನಸಭೆಯನ್ನು ಮಾದರಿಯಾಗಿಟ್ಟುಕೊಂಡು ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು, ಈ ಸ್ಪರ್ಧೆಯಲ್ಲಿ ವಿಜೇತರಾದವರನ್ನು ರಾಜ್ಯಮಟ್ಟಕ್ಕೆ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಲಾಗುವುದು, ಹಾಗಾಗಿ ವಿದ್ಯಾರ್ಥಿಗಳು ಯಾವುದೇ ವಿವಾದಿತ ವಿಷಯಗಳ ಬಗ್ಗೆ ಚರ್ಚಿಸದೆ ರಾಜ್ಯದ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಮಾದರಿ ವಿಧಾನಸಭಾ ಅಧಿವೇಶನ ಪ್ರಸ್ತುತ ಸಂದರ್ಭದ ತುರ್ತು ಅಗತ್ಯ, ನಾವೆಲ್ಲರೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರುವುದೇ ಸಂಸದೀಯ ವ್ಯವಸ್ಥೆ ಮೇಲೆ, ಆ ಸಂಸದೀಯ ವ್ಯವಸ್ಥೆಗೆ ಭಾರತದ ಸಂವಿಧಾನ ಅಡಿಗಲ್ಲು ಆಗಿದೆ ಎಂದರು.
ನಾವು ಯಾವುದೇ ಕರ್ತವ್ಯಗಳನ್ನು ನಿರ್ವಹಿಸಬೇಕಾದರೆ ಸಂವಿಧಾನ ಗಮನದಲ್ಲಿಟ್ಟುಕೊಂಡಿರಬೇಕು, ಆದ್ದರಿಂದ ಸಂಸದೀಯ ವ್ಯವಸ್ಥೆ ಒಳಗೆ ನಡೆಯುವ ಚರ್ಚೆಗಳು, ತೀರ್ಮಾನಗಳು ಸಂವಿಧಾನಕ್ಕೆ ಪೂರಕ ಮತ್ತು ಬದ್ಧವಾಗಿರಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ನ್ಯಾಯಾಂಗ ವ್ಯವಸ್ಥೆ ಕೂಡಾ ಅತ್ಯುನ್ನತವಾದುದು, ಕಾರ್ಯಾಂಗ, ಶಾಸಕಾಂಗ ಗೌರವಿಸಲ್ಪಡುವ ಅತ್ಯುನ್ನತ ವ್ಯವಸ್ಥೆ ನ್ಯಾಯಾಂಗ ವ್ಯವಸ್ಥೆಯಾಗಿದೆ, ಹಾಗಾಗಿ ನ್ಯಾಯದ ಕಲ್ಪನೆ ಸಂವಿಧಾನಕ್ಕೆ ಪೂರಕವಾಗಿರಬೇಕು ಎಂದರು.
ಸಂವಿಧಾನವನ್ನು ಮೀರಿ ನಾವು ಸಾಗಲು ಸಾಧ್ಯವಿಲ್ಲ, ಇದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಕ್ರಿಯಾಶೀಲವಾಗಿ ದೇಶದ ವ್ಯವಸ್ಥೆಯಲ್ಲಿ ನಡೆಯಬೇಕು, ಇದು ನಮ್ಮ ದೇಶಕ್ಕೆ ನೀವು ಕೊಡುವ ಅತ್ಯುತ್ತಮ ಕೊಡುಗೆಯಾಗುತ್ತದೆ ಎಂದರು.
ವಿದ್ಯೋದಯ ಪ್ರತಿಷ್ಠಾನದ ಆಡಳಿತ ನಿರ್ವಹಣಾಧಿಕಾರಿ ಪ್ರೊ.ಕೆ.ಚಂದ್ರಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅಧಿವೇಶನಗಳು ಸದ್ವಿನಿಯೋಗವಾಗುತ್ತಿಲ್ಲ, ಆದರೆ ಮಾದರಿ ಅಧಿವೇಶನದಲ್ಲಾದರೂ ಸದ್ವಿನಿಯೋಗವಾಗಲಿ ಎಂದರು.
ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ಕಾರ್ಯಾಗಾರ ನಡೆಸಲಾಗುತ್ತದೆ, ಆದರೆ ಕಾನೂನು ವಿದ್ಯಾರ್ಥಿಗಳು ಮಾದರಿ ವಿಧಾನಸಭಾ ಅಧಿವೇಶನ ಏರ್ಪಡಿಸುವ ಮೂಲಕ ಅನುಭವ ಮೂಡಿಸಲಾಗುತ್ತಿದೆ ಎಂದರು.
ಕಾನೂನು ಪದವೀಧರರೆ ಆರಂಭದಿಂದ ಇಲ್ಲಿಯವರೆಗೆ ರಾಜ್ಯವನ್ನು ಆಳಿದವರ ಸಂಖ್ಯೆಯಲ್ಲಿ ಜಾಸ್ತಿ ಇದ್ದಾರೆ, ಕಾನೂನು ಪದವಿ ಪಡೆಯುವುದಕ್ಕೆ ಮೊದಲು ಈ ಬಗ್ಗೆ ಅನುಭವ ಬರಲಿ ಎಂದು ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಕಾನೂನು ವಿದ್ಯಾರ್ಥಿಗಳ ಜೀವನದಲ್ಲಿ ನೆನೆಯುವ ಘಟನೆ ಇದಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಾಸಂಸು ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ ಹಾಗೂ ವಿವಿಧ ಕಾನೂನು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ರಾಮಕೃಷ್ಣ ತೀರ್ಪುಗಾರರಾಗಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!