ತುಮಕೂರು: ಜಿಲ್ಲಾದ್ಯಂತ ಫೆಬ್ರವರಿ 27ರಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಡಿ ಶೇ.100ರಷ್ಟು ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ 0-5 ವರ್ಷದೊಳಗಿನ 2,18,023 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಇದರಲ್ಲಿ ಮೊದಲನೇ ದಿನವೇ 2,02,034 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ.92 ರಷ್ಟು ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ವಲಸೆ ಬಂದಿರುವ ಸಮುದಾಯ, ಲಸಿಕಾ ವಂಚಿತ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆಯ ಮೇರೆಗೆ ಪಲ್ಸ್ ಪೋಲಿಯೋ ಹನಿ ನೀಡಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೋವಿಡ್_19ರ ಮೂರನೇ ಅಲೆಯು ನಿಯಂತ್ರಣದಲ್ಲಿದೆ, ಆದರೆ ಎರಡನೇ ಡೋಸ್ ಲಸಿಕಾಕರಣವು ಪೂರ್ಣಗೊಂಡಿರುವುದಿಲ್ಲ, ಆದ್ದರಿಂದ ಬರುವ ಬುಧವಾರ ಗ್ರಾಮೀಣ ಹಾಗೂ ಶುಕ್ರವಾರ ನಗರ ಪ್ರದೇಶಗಳಲ್ಲಿ ಲಸಿಕಾ ಮೇಳವನ್ನು ನಡೆಸಿ ಲಸಿಕಾಕರಣದ ನಿಗದಿತ ಗುರಿ ಪೂರ್ಣಗೊಳಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಕೋವಿಡ್ -19 ವೈರಸ್ ನಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಿಂದ 1047 ಅರ್ಜಿಗಳು ಸ್ವೀಕೃತಗೊಂಡಿದ್ದು, 857 ಮಂದಿ ಮೃತರ ವಾರಸುದಾರರಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ. ಉಳಿದ 190 ಅರ್ಜಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಪೈಕಿ ಪಹಣಿ ಒಟ್ಟುಗೂಡಿಸುವಿಕೆ, ಪಹಣಿ ಕಾಲಂ,3/9 ಮಿಸ್ ಮ್ಯಾಚ್, ಭೂಮಿ ಪೆಂಡೆನ್ಸಿ ಕುರಿತು ಯಾವುದೇ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಗಳಿಗೆ ಸೂಚಿಸಿದರಲ್ಲದೆ, ಕಂದಾಯ ಗ್ರಾಮಗಳ ರಚನೆ ಸಂಬಂಧ ಅಧಿಕಾರಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಕಾಯ್ದಿರಿಸುವುದು, ಸಕಾಲ, ನಾಡಕಚೇರಿ ಪ್ರಗತಿ ಪರಿಶೀಲನೆ ಹೇಮಾವತಿ, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ ಯೋಜನೆಗಳ ಭೂಸ್ವಾಧೀನ ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ.ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್ ದಾಸ್, ತಹಶೀಲ್ದಾರ್ ಮೋಹನ್ ಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Get real time updates directly on you device, subscribe now.
Next Post
Comments are closed.