ಕೃಷಿ ಕಾಲೇಜು ಸ್ಥಾಪನೆಗೆ ಪ್ರಯತ್ನ ಮಾಡುವೆ

ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ

178

Get real time updates directly on you device, subscribe now.

ಶಿರಾ: ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿ ಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೈತ ಮಕ್ಕಳ ಅನುಕೂಲಕ್ಕಾಗಿ ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಲು ಮುಖ್ಯಮಂತ್ರಿಗಳಿಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ತಿಳಿಸಿದರಲ್ಲದೆ ಈ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಆಧುನಿಕ ತಂತ್ರಜ್ಞಾನ ಅನುಸರಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗುವುದು. ಜಿಲ್ಲೆಯ ರೈತರು ತರಬೇತಿ ಕೇಂದ್ರದ ಸದುಪಯೋಗ ಪಡೆದು ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಬೇಕೆಂದು ತಿಳಿಸಿದರು.
ಸರ್ಕಾರದಿಂದ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ವರ್ಗದ ಕೃಷಿಕ ಮಕ್ಕಳ ಪಿಯುಸಿ ತರಗತಿಯಿಂದ ಪದವಿ, ವೃತ್ತಿಪರ ಕೋರ್ಸ್ಗಳ ವ್ಯಾಸಾಂಗಕ್ಕಾಗಿ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ 2000 ರೂ.ಗಳಿಂದ 11,500 ರೂ.ಗಳವರೆಗೆ ಶಿಷ್ಯವೇತನ ನೀಡಲಾಗುತ್ತಿದೆ. ಅಲ್ಲದೆ ಪ್ರಸಕ್ತ ವರ್ಷದಲ್ಲಿ ಪ್ರೌಢಶಾಲೆ ಶಿಕ್ಷಣದಿಂದ ವಂಚಿತರಾದ ರೈತರ ಹೆಣ್ಣುಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ 2000 ರೂ.ಗಳ ಶಿಷ್ಯವೇತನ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 20996 ಮಕ್ಕಳಿಗೆ 5.18 ಕೋಟಿ ರೂ.ಗಳ ಶಿಷ್ಯವೇತನ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 3,01,694 ಫಲಾನುಭವಿಗಳಿಗೆ 11,841.58 ಲಕ್ಷ ರೂ.ಗಳನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆಯಲ್ಲದೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಕಾರ್ಯಕ್ರಮದಡಿ 2 ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ ಸೂಕ್ಷ್ಮ ನೀರಾವಾರಿ ಘಟಕಗಳನ್ನು ಅಳವಡಿಸಿಕೊಳ್ಳಲು ಶೇ. 90ರಷ್ಟು ಸಹಾಯಧನಕ್ಕಾಗಿ 12.90 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಕೃಷಿ ಯಾಂತ್ರೀಕರಣ ಯೋಜನೆಯಡಿ 2618 ಫಲಾನುಭವಿಗಳಿಗೆ 9.13 ಕೋಟಿ ರೂ. ವೆಚ್ಚದ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 60371 ರೈತರಿಗೆ ರಿಯಾಯಿತಿ ದರದಲ್ಲಿ 23139 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಜಮೀನು ದೇಣಿಗೆ ನೀಡುವ ಮೂಲಕ ಉಗ್ರೇಗೌಡರು ನಾವೆಲ್ಲರೂ ಸ್ಮರಿಸುವಂತಹ ಕೆಲಸ ಮಾಡಿ ಹೋಗಿದ್ದಾರೆ. ಅವರು ಮರಣ ಹೊಂದಿ 110 ವರ್ಷಗಳು ಕಳೆದಿದ್ದರೂ ರೈತರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎಂದು ತಿಳಿಸಿದರಲ್ಲದೆ ಶಿರಾ ತಾಲೂಕಿನ ಶಾಸಕ ಸಿ.ಎಂ. ರಾಜೇಶಗೌಡ ಅವರ ಪರಿಶ್ರಮದಿಂದ ತಾಲೂಕು ವ್ಯಾಪ್ತಿಯ ಮದಲೂರು ಕೆರೆ ಸೇರಿದಂತೆ 25 ಕೆರೆಗಳು ಭರ್ತಿಯಾಗಿವೆ. ಬರಪೀಡಿತ ಜಿಲ್ಲೆಯೆಂದೇ ಹೆಸರಾಗಿದ್ದ ಶಿರಾ ತಾಲೂಕಿನ ರೈತರು ಕೆರೆಯ ನೀರನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ರೈತರು ಸ್ವಾವಲಂಬಿಯಾಗಿ ಬದುಕಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರದ 6000 ರೂ. ಹಾಗೂ ರಾಜ್ಯ ಸರ್ಕಾರದ 4000 ರೂ. ಸೇರಿದಂತೆ ವಾರ್ಷಿಕ 10,000 ರೂ. ಪ್ರೋತ್ಸಾಹ ಧನ ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ. ಕೆಲವು ರೈತರ ಖಾತೆಗೆ ಈ ಹಣ ಜಮೆಯಾಗುತ್ತಿಲ್ಲವೆಂಬ ಅಪಸ್ವರ ಕೇಳಿಬರುತ್ತಿದೆ. ರೈತರು ಚಾಲ್ತಿಯಲ್ಲಿರುವ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿದರೆ ಮಾತ್ರ ಈ ಸೌಲಭ್ಯ ದೊರೆಯಲಿರುವುದರಿಂದ ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಖಾತೆಗೆ ಆಧಾರ್ ಜೋಡಣೆ ಮಾಡಿ ಸೌಲಭ್ಯ ಪಡೆಯಬೇಕೆಂದರು.
ಕೋವಿಡ್ ಪರಿಸ್ಥಿತಿಯಲ್ಲಿಯೂ ಸಹಾ ರಾಜ್ಯದಲ್ಲಿ ರೈತರು 164 ಲಕ್ಷ ಮೆ.ಟನ್ ಆಹಾರ ಉತ್ಪಾದನೆ ಮಾಡಿರುವುದರಿಂದ ಶೇ.10 ರಷ್ಟು ಹೆಚ್ಚುವರಿ ಆಹಾರ ಉತ್ಪಾದನೆಯಾಗಿದೆ. ಹೆಚ್ಚಿನ ಆಹಾರೋತ್ಪಾದನೆಯಿಂದ ಕೃಷಿ ಕ್ಷೇತ್ರ ಶ್ರೀಮಂತವಾಗಿದ್ದರೂ ಕೃಷಿಕರು ಮಾತ್ರ ಶ್ರೀಮಂತರಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಬಹುದು. ಒಂದೇ ಬೆಳೆಯನ್ನು ಅವಲಂಬಿಸದೆ ಹಲವಾರು ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು. ಕಬ್ಬು, ಭತ್ತದ ಬೆಳೆಯನ್ನೇ ಅವಲಂಬಿಸಿರುವ ಮಂಡ್ಯ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿದ್ದರೂ 2014-15ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಈ ನಿಟ್ಟಿನಲ್ಲಿ ಹತ್ತಾರು ಬೆಳೆಯನ್ನು ಬೆಳೆದಲ್ಲಿ ಒಂದು ಬೆಳೆಯಿಂದ ನಷ್ಟ ಹೊಂದಿದರೆ ಮತ್ತೊಂದು ಬೆಳೆ ರೈತರ ಕೈಹಿಡಿಯುತ್ತದೆ ಎಂದು ತಿಳಿಸಿದರು.
ಕಳೆದ ವರ್ಷ ನನ್ನ ಮನವಿ ಮೇರೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಎಸ್ಸಿ(ಕೃಷಿ) ತರಗತಿ ಪ್ರವೇಶದಲ್ಲಿ ರೈತ ಮಕ್ಕಳಿಗೆ ಶೇ. 40ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಏರಿಸಿರುವುದರಿಂದ ಉನ್ನತ ವ್ಯಾಸಂಗ ಮಾಡುವ ರೈತ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಮರು ಪ್ರಾರಂಭಿಸಬೇಕಲ್ಲದೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸಣ್ಣ ಮತ್ತು ದೊಡ್ಡ ರೈತರೆಂಬ ಬೇಧ-ಭಾವ ಮಾಡಬಾರದು. ಸಿರಿಧಾನ್ಯಗಳ ತವರೂರಾದ ಶಿರಾ ತಾಲ್ಲೂಕಿನ ರೈತರಿಗೆ ಸಿರಿಧಾನ್ಯ ಬೆಳೆಯಲು ಪಡಿತರ ವಿತರಣಾ ಪದ್ಧತಿಯಡಿ ಜನರಿಗೆ ವಿತರಣೆ ಮಾಡಬೇಕೆಂದು ಎಂದು ರೈತರು ಸಚಿವರಿಗೆ ಬೇಡಿಕೆ ಇಟ್ಟಾಗ ಸ್ಪಂದಿಸಿದ ಸಚಿವರು ಶಾಲೆಗಳ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾಗೂ ವಸತಿನಿಲಯಗಳ ಆಹಾರ ತಯಾರಿಕೆಯಲ್ಲಿ ಸಿರಿಧಾನ್ಯಗಳನ್ನು ಬಳಸಿಕೊಳ್ಳುವ ಬಗ್ಗೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಿದ್ದೇನೆ. ಇದರಿಂದ ಸಿರಿಧಾನ್ಯ ಬೆಳೆಯುವ ರೈತರು ಆರ್ಥಿಕವಾಗಿ ಸದೃಢರಾಗಲು ನೆರವಾಗಬಹುದೆಂದು ತಿಳಿಸಿದರು.
ಶಾಸಕ ಸಿ.ಎಮ್. ರಾಜೇಶ ಗೌಡ ಮಾತನಾಡಿ ಉಗ್ರೇಗೌಡರ ಹೆಸರಿನಲ್ಲಿ ಕೃಷಿ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಮನಸ್ಸು ಮಾಡಬೇಕು. ಇದರಿಂದ ಜಿಲ್ಲೆ ಹಾಗು ಇತರೆ ಜಿಲ್ಲೆಯ ಕೃಷಿ ಆಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರಲ್ಲದೆ ಕೋವಿಡ್, ಅತೀವೃಷ್ಟಿ, ಅನಾವೃಷ್ಟಿಯಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಕೈಹಿಡಿದಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ ಚಿಕ್ಕನಹಳ್ಳಿಯಲ್ಲಿ ಲಭ್ಯವಿರುವ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಉಗ್ರೇಗೌಡರು ದೇಣಿಗೆಯಾಗಿ ನೀಡಿರುವ ನೂರಾರು ಎಕರೆ ಜಮೀನಿನ ಸದುಪಯೋಗವಾಗುವಂತೆ ಕೃಷಿ ಕಾಲೇಜು ಸ್ಥಾಪನೆಗೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್. ಗೌಡ, ಕರ್ನಾಟಕ ತೆಂಗಿನ ನಾರು ಅಭಿವೃದ್ಧಿ ನಿಗಮದ ಬಿ.ಕೆ. ಮಂಜುನಾಥ್ ಮಾತನಾಡಿದರು.
ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ದಂಡಾಧಿಕಾರಿ ಮಮತ, ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಎನ್.ಸಿ. ಮಂಜುನಾಥ್, ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಸರೋಜಮ್ಮ, ಕೃಷಿ ಇಲಾಖೆಯ ದೀಪಶ್ರೀ, ಅಶೋಕ್ ಸೇರಿದಂತೆ ವಿವಿಧ ಅಧಿಕಾರಿಗಳು, ರೈತಬಾಂಧವರು, ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!