ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ವೈಭವ

ಸಿದ್ದಗಂಗೆ ಮಠಕ್ಕೆ ಹರಿದು ಬಂದ ಭಕ್ತ ಸಾಗರ- ರಥ ಎಳೆದು ಭಕ್ತಿ ಸಮರ್ಪಣೆ

375

Get real time updates directly on you device, subscribe now.

ತುಮಕೂರು: ಐತಿಹಾಸಿಕ ಪ್ರಸಿದ್ಧ ಸಿದ್ದಗಂಗಾ ಮಠದಲ್ಲಿ ಶ್ರೀಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶ್ರೀಕ್ಷೇತ್ರ ಸಿದ್ದಗಂಗೆಯ ಆರಾಧ್ಯದೈವ ಶ್ರೀಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ರಥೋತ್ಸವದಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಅಜಯ್‌, ತಹಶೀಲ್ದಾರ್‌ ಮೋಹನ್‌ಕುಮಾರ್‌, ವಿವಿಧ ಮಠಾಧೀಶರು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಪಾಲ್ಗೊಂಡು ರಥ ಎಳೆದು ಭಕ್ತಿ ಸಮರ್ಪಿಸಿದರು.
ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಪುಣ್ಯಾಃ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ ಆರಾಧ್ಯ ದೈವ ಸಿದ್ದಲಿಂಗೇಶ್ವರ ಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಯಿಂದ 1.30ರ ವರೆಗೆ ರಾಹುಕಾಲ ಇದ್ದುದರಿಂದ ಬೆಳಗ್ಗೆ 11.50 ಕ್ಕೆ ಸರಿಯಾಗಿ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು, ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.
ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು.
ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳು ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿ ಬುಧವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಶ್ರೀಮಠದ ಶಾಲಾ ಕಟ್ಟಡಗಳ ಮೇಲೆ ಹತ್ತಿ ರಥೋತ್ಸವ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!