ತುಮಕೂರು: ಕೇಂದ್ರ ಸರ್ಕಾರದ ರೀತಿಯಲ್ಲಿ ನೌಕರರಿಗೆ ವೇತನ ತಾರತಮ್ಯ ನಿವಾರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮನವಿ ಮಾಡಿದರು.
ನಗರದ ಬಾಪೂಜಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೌಕರರ ಕುಂದುಕೊರತೆಗಳ ಚರ್ಚೆ ಸಮಯದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ. ನಾರಾಯಣ ಸ್ವಾಮಿ ಅವರಿಗೆ ಮನವಿ ಮಾಡಿದರು.
ದಿನಾಂಕ 1-4-2006 ರ ನಂತರ ನೇಮಕವಾದ ನೌಕರರಿಗೆ ನಿವೃತ್ತಿಯ ನಂತರ ಜೀವನ ಭದ್ರತೆ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ತಮ್ಮ ನೌಕರರಿಗೆ ಉತ್ತಮ ವೇತನ ಪರಿಷ್ಕರಣೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ತಮ್ಮ ನೌಕರರಿಗೆ ವೇತನ ತಾರತಮ್ಯ ನಿವಾರಣೆ ಮಾಡಿಕೊಡಬೇಕು. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರಿಗೂ ವೇತನಾನುದಾನಕ್ಕೆ ಒಳಪಡಿಸಬೇಕು ಹಾಗೂ 10-15 ವರ್ಷಗಳ ವೇತನ ಬಡ್ತಿ ಮಂಜೂರಾತಿ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯಾ ಜಿಲ್ಲಾ.ಉಪನಿರ್ದೇಶಕರಿಗೆ ಹಿಂತಿರುಗಿಸಿರುವ ಪ್ರಸ್ತಾವನೆಗಳನ್ನು ಮಂಜೂರು ಮಾಡಲು ಅನುಮತಿ ಕೊಡಿಸುವಂತೆ ಒತ್ತಾಯಿಸಿದರು.
ದಿನಾಂಕ: 4-3- 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಅನುದಾನಿತ ನೌಕರರು ಪಿಂಚಣಿ ಹಾಗೂ ಇತರ ಬೇಡಿಕೆಗಳಿಗಾಗಿ ನಡೆಯುವ ಹೋರಾಟಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ಅನುದಾನಿತ ಕಾಲೇಜುಗಳ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ಧವಿದೆ. ಬಜೆಟ್‌ನಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹಾಗೂ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಬಸವಯ್ಯ, ಕಾರ್ಯದರ್ಶಿ ಬಾಪೂಜಿ ವಿದ್ಯಾಸಂಸ್ಥೆ, ಗೌರವಾಧ್ಯಕ್ಷರಾದ ಮುದ್ದಯ್ಯ, ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಕಾರ್ಯದರ್ಶಿ ತಿಪ್ಪೇಶ್, ಸಹ ಕಾರ್ಯದರ್ಶಿ ಚಂದ್ರಶೇಖರ್ ಆರಾಧ್ಯ, ನಿರ್ದೇಶಕರಾದ ಪುಟ್ಟಸ್ವಾಮಯ್ಯ ಗಂಗಾಧರಮೂರ್ತಿ, ಶಿವಣ್ಣ, ಮಹಾಲಿಂಗಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಎ, ಸಂಘದ ಪದಾಧಿಕಾರಿಗಳು, ಪ್ರಾಚಾರ್ಯರು, ಉಪನ್ಯಾಸಕರು ಭಾಗವಹಿಸಿದ್ದರು.
ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಒತ್ತಾಯ
Get real time updates directly on you device, subscribe now.
Prev Post
Comments are closed.