ಶೇಂಗಾ ಬೆಳೆಗಾರರಿಗೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಕೃಷಿ ಜಂಟಿ ನಿರ್ದೇಶಕಿಗೆ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೂಚನೆ

91

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಶೇಂಗಾ ಬೆಳೆ ನಷ್ಟ ಹೊಂದಿದ ರೈತರಿಗೆ ವಿಶೇಷ ಪ್ಯಾಕೇಜ್ ನಡಿ ಪರಿಹಾರ ಒದಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಶೇಂಗಾ ಸೇರಿದಂತೆ ಎಣ್ಣೆ ಕಾಳು ಬೆಳೆಯುವ ಶಿರಾ, ಪಾವಗಡ, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತ ಬಿತ್ತಿದ ಬೆಳೆ ಕೈಗೆ ಬರದೆ ಹೋಗಿದೆ, ಈ ನಿಟ್ಟಿನಲ್ಲಿ ಶೇಂಗಾ ಬೆಳೆಗೆ ಸಂಬಂಧಿಸಿದಂತೆ ಹಿಂದಿನ 5 ವರ್ಷಗಳ ಅವಧಿಯ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದಲ್ಲಿ ವಿಶೇಷ ಪ್ಯಾಕೇಜ್ನಡಿ ಪರಿಹಾರ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ನಿರೀಕ್ಷಿತ ಮಳೆ ಬಾರದ ಕಾರಣ ಶೇಂಗಾ ಬೆಳೆ ನಷ್ಟವಾಗಿದೆ ಎಂದು ಸಚಿವರ ಗಮನಕ್ಕೆ ತಂದರಲ್ಲದೆ, ಜಿಲ್ಲೆಯಲ್ಲಿ 2021- 22ನೇ ಸಾಲಿನಲ್ಲಿ 1109 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. 2021ರ ಮುಂಗಾರು ಹಂಗಾಮಿಗೆ 370888 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, 346936 ರಷ್ಟು ಬಿತ್ತನೆಯಾಗಿದೆ ಎಂದು ತಿಳಿಸಿದರಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಜನವರಿ ಅಂತ್ಯಕ್ಕೆ 301694 ರೈತರಿಗೆ 11841.58ಲಕ್ಷ ರೂ. ಮೊತ್ತವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವರು ಜಿಲ್ಲೆಯ ರೈತರ ಬದುಕು ಹಸನಾಗಬೇಕಾದರೆ ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖಾಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಿದೆ. ರಾಗಿಯನ್ನು ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ವಿತರಿಸಲು ಸಾಕಾಗುವಷ್ಟು ದಾಸ್ತಾನು ಮಾಡಲಾಗಿದ್ದು, 20 ಕ್ವಿಂಟಾಲ್ಗಿಂತ ಅಧಿಕ ರಾಗಿ ಖರೀದಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ. ಅಲ್ಲದೆ ಕಾಡು ಪ್ರಾಣಿಗಳ ಹಾವಳಿಯಿಂದಲೂ ರೈತನ ಬೆಳೆ ಕೈಗೆ ಸಿಗದ ಪರಿಸ್ಥಿತಿಯಿದ್ದು, ವಿಶೇಷ ಪ್ಯಾಕೇಜ್ ಘೋಷಿಸುವಂತೆ ಶಿರಾ ಶಾಸಕ ಸಿ.ಎಂ.ರಾಜೇಶ್ ಗೌಡ ಹಾಗೂ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು, ಈ ಕುರಿತು ವರದಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡಬೇಕಾದ ಸ್ಪ್ಲಿಂಕರ್ ಸೇರಿದಂತೆ ವಿವಿಧ ಉಪಕರಣಗಳನ್ನು ನೀಡಲು ವಿಳಂಬವಾಗಿದ್ದು, ಅರ್ಹ ರೈತರಿಗೆ ಮಾರ್ಚ್ 15ರೊಳಗಾಗಿ ಈ ಸೌಲಭ್ಯಗಳನ್ನು ಒದಗಿಸಬೇಕು ಎಂದರಲ್ಲದೆ, ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬಕ್ಕೆ ಪರಿಹಾರವನ್ನು ಕೂಡಲೇ ಒದಗಿಸಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ಸಬೂಬು ಹೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾತನಾಡಿ, ಅಡಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ ಒದಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಈ ಹಿಂದೆ ಗೋರಖ್ ಸಿಂಗ್ ಆಯೋಗವು ತುಮಕೂರಿನಲ್ಲಿ ಅಡಿಕೆ ಬೆಳೆಯ ಉತ್ತೇಜನಕ್ಕೆ ಇಲಾಖೆಯಿಂದ ಸಹಾಯಧನ ಸೌಲಭ್ಯ ಕಲ್ಪಿಸದಂತೆ ನಿರ್ಬಂಧವಿದ್ದುದರಿಂದ ಸಹಾಯಧನ ಸೌಲಭ್ಯವನ್ನು ಜಿಲ್ಲೆಯ ರೈತರಿಗೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರಲ್ಲದೆ, ಜಿಲ್ಲೆಯಲ್ಲಿ ಜೇನು ಸಾಕಾಣಿಕೆಗೆ ಪೂರಕ ವಾತಾವರಣವಿದ್ದು, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಗಳಿಸಬಹುದಾದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜೇನುಕೃಷಿಗೆ ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಪ್ರಾಯೋಜಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ಸಾಮಾನ್ಯ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು, ಮೆಡಿಕಲ್ ಕಾಲೇಜುಗಳಲ್ಲಿರುವ ಎಲ್ಲಾ ಸೌಲಭ್ಯಗಳು ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದ್ದು, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಬೇಕು. ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಇಎಸ್ಐ, ಪಿಎಫ್ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲವೆಂಬ ದೂರುಗಳು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಪ್ರತಿ ತಾಲ್ಲೂಕು ಆಸ್ಪತ್ರೆಗಳ ಸಮೀಪ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆದು ಅಗ್ಗದ ದರದಲ್ಲಿ ಔಷಧಗಳು ಸಿಗುವಂತಾಗಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ವಾರಸುದಾರರಿಗೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈವರೆಗೆ ಪರಿಹಾರ ಕೋರಿ 1047 ಅರ್ಜಿಗಳು ಸ್ವೀಕೃತಗೊಂಡಿದ್ದು, 857 ಮೃತರ ವಾರಸುದಾರರಿಗೆ ಪರಿಹಾರ ವಿತರಿಸಲಾಗಿದೆ. ಉಳಿದ 190 ಪ್ರಕರಣಗಳಿಗೆ ಸಮರ್ಪಕ ಮಾಹಿತಿ ನೀಡದ ಕಾರಣ ಕಚೇರಿ ಹಂತದಲ್ಲಿ ಬಾಕಿ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗುಬ್ಬಿ ತಾಲ್ಲೂಕು ಗದ್ದೆಹಳ್ಳಿ ಗ್ರಾಮದ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡಾಗ ಲೋಕೇಶ್ ಅವರು ಉತ್ತರಿಸುತ್ತಾ, ಸ್ಥಳೀಯ ಗ್ರಾಮ ಪಂಚಾಯತಿ ಸಮನ್ವಯದೊಂದಿಗೆ ಫಲಾನುಭವಿಗಳನ್ನು ಗುರುತಿಸಿ ಮಾರ್ಚ್ ಮಾಹೆಯ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಕಳೆದ 5 ತಿಂಗಳ ಅವಧಿಯಲ್ಲಿ ಈಗಾಗಲೇ 4631 ಮನೆಗಳನ್ನು ಗುರುತಿಸಲಾಗಿದೆ. ಈ ಪೈಕಿ 2807 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, 1824 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಬಾಕಿ ಇರುತ್ತವೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವರು, ಮಾರ್ಚ್ ತಿಂಗಳ ಅಂತ್ಯದೊಳಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ಬೆಳಕು ಯೋಜನೆಯಡಿ ಎಲ್ಲಾ ವಸತಿಗಳಿಗೆ ವಿದ್ಯುತ್ ಸಂಪರ್ಕ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿ ಒಂದು ಮನೆಯೂ ವಿದ್ಯುತ್ ಸಂಪರ್ಕ ರಹಿತವಾಗಿರಬಾರದು ಎಂದು ನಿರ್ದೇಶಿಸಿದರು.
ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಒದಗಿಸದ ಮನೆಗಳ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬೆಸ್ಕಾಂ ಇಲಾಖೆಗೆ ನೀಡಬೇಕು, ತಪ್ಪಿದಲ್ಲಿ ಸಂಬಂಧಿಸಿದ ಪಿಡಿಓಗಳನ್ನು ಅಮಾನತುಗೊಳಿಸಲಾಗುವುದು ಎಂದು ತಿಳಿಸಿದರು. ಸಾಮೂಹಿಕ ಕೊಳವೆ ಬಾವಿಗೆ ಸಂಬಂಧಿಸಿದಂತೆ ಗಂಗಾ ಕಲ್ಯಾಣ ಯೋಜನೆಯಡಿ ಬಾಕಿ ಇರುವ ವಿದ್ಯುತ್ ಸಂಪರ್ಕ ನೀಡುವ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾದ ಅನುದಾನ ರದ್ದಾಗಿ ಸರ್ಕಾರಕ್ಕೆ ವಾಪಸ್ಸಾಗದಂತೆ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಿಗಧಿತ ಅವಧಿಯೊಳಗೆ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಬೇಕು. ಅನುದಾನ ಸರ್ಕಾರಕ್ಕೆ ವಾಪಸ್ಸಾದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರಲ್ಲದೆ, ಜಿಲ್ಲೆಯಲ್ಲಿ ಹೇಮಾವತಿ ನೀರಾವರಿ ಮುಖ್ಯ ಕಾಲುವೆಗಳು, ಫೀಡರ್ ಕಾಲುವೆಗಳು ಹೂಳು ಹಾಗೂ ಕಸಕಡ್ಡಿಯಿಂದ ಕೂಡಿದ್ದು, ತಕ್ಷಣ ಕ್ರಮ ಕೈಗೊಂಡು, ರೈತರಿಗೆ ನೀರು ಹರಿಸಬೇಕೆಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯ, ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಶೇಖರ್ ಅವರಿಗೆ ಸೂಚನೆ ನೀಡಿದರು.
ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ವಸತಿ ಇಲಾಖೆಗಳು ಸೇರಿದಂತೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಜಿಲ್ಲೆಯ ಶಾಸಕರಾದ ಮಸಾಲೆ ಜಯರಾಂ, ವೀರಭದ್ರಯ್ಯ, ಜಿ.ಬಿ.ಜ್ಯೋತಿಗಣೇಶ್, ತಿಪ್ಪೇಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಹಾಗೂ ಜಿಲ್ಲೆಯ ಇನ್ನಿತರ ಹಿರಿಯ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!