ನೌಕರರ ವೇತನ ಹೆಚ್ಚಳ ಮಾಡುವ ಗುರಿ ಇದೆ: ವೈಎಎನ್

144

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಶಿಕ್ಷಕರು, ಸರ್ಕಾರಿ ನೌಕರರ ಬಹು ಪ್ರಮುಖ ಬೇಡಿಕೆಯಾಗಿರುವ 7ನೇ ವೇತನ ಆಯೋಗ ಜಾರಿಗೊಳಿಸಿ ವೇತನ ಹೆಚ್ಚಳ ಮಾಡುವ ಗುರಿ ಹೊಂದಿರುವುದಾಗಿ ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ವಿಚಾರಗಳ ಬಗ್ಗೆ ಚಿಂತನಾ ಮಂಥನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 7ನೇ ವೇತನ ಆಯೋಗ ಕೊಡಿಸಬೇಕೆಂಬ ಬೇಡಿಕೆ ಶಿಕ್ಷಕರು ಹಾಗೂ ಸರ್ಕಾರಿ ನೌಕರರದ್ದಾಗಿದೆ.ಈಗಾಗಲೇ ಮುಖ್ಯಮಂತ್ರಿಗಳು 7ನೇ ವೇತನ ಆಯೋಗ ರಚನೆ ಮಾಡುವ ಭರವಸೆ ಕೊಟ್ಟಿದ್ದಾರೆ, ಮುಂದಿನ 2023ರ ಚುನಾವಣೆಗೆ ಮುನ್ನವೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಸಂಬಂಧ ತಾವು ಮತ್ತು ಚಿದಾನಂದಗೌಡರು ಶ್ರಮಿಸುವುದಾಗಿ ಹೇಳಿದರು.
ನಮ್ಮ ಸರ್ಕಾರ ಬಂದ ಎಲ್ಲ ಕಾಲಘಟ್ಟದಲ್ಲೂ ಶಿಕ್ಷಕರ ನೇಮಕಾತಿ, ವೇತನ ಹೆಚ್ಚಳವನ್ನು ಮಾಡುತ್ತಲೇ ಬರಲಾಗಿದೆ. ಈಗಲೂ 7ನೇ ವೇತನ ಆಯೋಗದ ಚಿಂತನೆ ನಡೆದಿದೆ ಎಂದರು.
ಬಜೆಟ್‌ ಅಧಿವೇಶನಕ್ಕೆ ಮುನ್ನ ಶಿಕ್ಷಕ ಸಮುದಾಯ ಮತ್ತು ಶಾಲಾ-ಕಾಲೇಜಿನ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿ ಸಮಸ್ಯೆ ಮತ್ತು ಬೇಡಿಕೆಗಳನ್ನು ಅಲಿಸಲಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ಶಿಕ್ಷಕರ ಬೇಡಿಕೆಗಳ ಕುರಿತು ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಹೊಸ ಶಿಕ್ಷಣ ಪದ್ದತಿಯನ್ನು ಶಿಕ್ಷಕ ಸಮುದಾಯ ಒಪ್ಪಿಕೊಂಡು ಕೆಲಸ ಮಾಡಿ ರಾಜ್ಯವನ್ನು ದೇಶದಲ್ಲೇ ಮೊಟ್ಟ ಮೊದಲ ರಾಜ್ಯವನ್ನಾಗಿ ಮಾಡಲು ಮುಂದಾಗಿದ್ದಾರೆ. ಇದು ನಮ್ಮ ರಾಜ್ಯದ ಶಿಕ್ಷಕರ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಕಷ್ಟ ಸುಖ ಯಾವಾಗಲೂ ಇರುತ್ತದೆ, ಆದ್ದರಿಂದ ಸಮಾಜ ಕಟ್ಟುವುದನ್ನು ಮರೆತರೆ ನಮಗೆ ಕ್ಷಮೆ ಇರುವುದಿಲ್ಲ, ಇದನ್ನು ಅರ್ಥೈಸಿಕೊಂಡು ನಾವೆಲ್ಲರೂ ಕೆಲಸ ಮಾಡಬೇಕು ಎಂದರು.
ಕೊರೊನಾ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಲ್ಲೂ ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸಲಾಗಿತ್ತು, ಆದರೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಸರ್ಕಾರಿ ನೌಕರರ 1 ರೂ. ಕೂಡಾ ವೇತನ ಕಡಿತ ಮಾಡದೆ ಶೇ. 100 ರಷ್ಟು ವೇತನವನ್ನು ನೀಡುವ ಮೂಲಕ ನೌಕರರ ಸಂಕಷ್ಟಕ್ಕೆ ನೆರವಾಗಿದ್ದಾರೆ ಎಂದರು.
ಅಲ್ಲದೆ ಶ್ರಮಿಕ ವರ್ಗದಂತೆ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೂ 5 ಸಾವಿರ ರೂ. ಪ್ಯಾಕೇಜ್‌ನ್ನು ಘೋಷಣೆ ಮಾಡಿ 100 ಕೋಟಿ ರೂ. ಬಿಡುಗಡೆ ಮಾಡಿ ಅವರ ಖಾತೆಗೆ ಹಣ ಹಾಕಿದ್ದು ದೇಶದಲ್ಲೇ ಮೊದಲ ಸರ್ಕಾರ ನಮ್ಮದು ಎಂದು ಹೇಳಿದರು.
ಎನ್‌ಪಿಎಸ್‌, ಒಪಿಎಸ್‌ ಬಗ್ಗೆ ಚರ್ಚೆಯಾಗುತ್ತಿದೆ. ಹಳೆ ಪಿಂಚಣಿ ಪದ್ದತಿಯನ್ನೆ ಮುಂದುವರೆಸುವ ಬಗ್ಗೆ ನಾವು ಸಹ ಶಿಕ್ಷಕರ ಪರ ಇದ್ದೇವೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎನ್‌ಪಿಎಸ್‌ ರದ್ದುಪಡಿಸಿ ಒಪಿಎಸ್‌ ಜಾರಿ ಮಾಡುವಂತೆ ಕೋರಿದ್ದೇವೆ ಎಂದರು.
ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ನೇಮಕಾತಿ ಬಗ್ಗೆಯೂ ಸರ್ಕಾರ ಗಮನ ಹರಿಸುತ್ತಿದೆ. ಪಿಯು ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಮುಂಬಡ್ತಿ ಬಗ್ಗೆ ಬೇಡಿಕೆ ಇದೆ. ಆದಷ್ಟು ಬೇಗ ಮುಂಬಡ್ತಿ ಕೊಡಿಸಲು ಶ್ರಮ ವಹಿಸುವುದಾಗಿ ಹೇಳಿದರು.
ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆ ನಿವಾರಣೆಗೆ ಸದಾ ಶ್ರಮಿಸುತ್ತೇನೆ. ಪರಿಷತ್‌ನಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡುವ ಕೆಲಸ ಆಗುತ್ತಿದೆ ಎಂದರು.
ಶೈಕ್ಷಣಿಕವಾಗಿ ಕಲ್ಪತರುನಾಡಿಗೆ ಒಳ್ಳೆಯ ಹೆಸರಿದೆ. ಈ ಹೆಸರನ್ನು ಉಳಿಸಲು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸುವ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಹಾಗೂ ಚಿದಾನಂದಗೌಡ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್, ಸರ್ಕಾರಿ ಜೂನಿಯರ್‌ ಕಾಲೇಜು ಪ್ರಾಂಶುಪಾಲರಾದ ರಾಜ್‌ಕುಮಾರ್‌, ಎಂಪ್ರೆಸ್‌ ಕಾಲೇಜು ಪ್ರಾಚಾರ್ಯ ಷಣ್ಮುಗ, ರೇವಣಸಿದ್ದಪ್ಪ, ಲಿಂಗದೇವರು, ಹರೀಶ್‌ಶೆಟ್ಟಿ, ವಸಂತಕುಮಾರ್‌, ರವಿಕುಮಾರ್‌, ಮಹಾಲಿಂಗಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!