ಸರಕು-ಸಾಮಗ್ರಿಗಳ ಮೇಲೆ ನಿಗಾವಹಿಸಿ: ಎಡಿಸಿ

ಪರವಾನಗಿ ಪಡೆಯದೇ ಐಎಸ್ಐ ಗುರುತು ಬಳಕೆ

100

Get real time updates directly on you device, subscribe now.

ತುಮಕೂರು: ಸರ್ಕಾರದ ವಿವಿಧ ಯೋಜನೆಗಳಡಿ ಇಲಾಖೆಗಳು ಟೆಂಡರ್ ಮೂಲಕ ಸರಕು, ಸಾಮಗ್ರಿಗಳನ್ನು ಖರೀದಿಸುವ ಸಂದರ್ಭದಲ್ಲಿ ನಕಲಿ ಐಎಸ್ಐ ಗುರುತಿನ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಎಸ್ಐ)ನ ಬೆಂಗಳೂರು ಶಾಖಾ ಕಚೇರಿಯು ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿಯಲ್ಲಿಂದು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳಡಿ ಕಾರ್ಯಗತಗೊಳಿಸುವ ಸರಕುಗಳ ಖರೀದಿಗೆ ಸಂಬಂಧಿಸಿದಂತೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐಎಸ್ಐ ಗುರುತು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು ಹಾಗೂ ಐಎಸ್ಐ ಗುರುತಿನ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಎಲೆಕ್ಟ್ರಾನಿಕ್ ಮತ್ತು ಐಟಿ ಸಂಬಂಧಿತ ವಸ್ತುಗಳನ್ನು ಖರೀದಿಸುವಾಗ ಐಎಸ್ ಸಂಖ್ಯೆ, ಬಿಐಎಸ್ನಿಂದ ನೀಡಲಾದ 7 ಅಥವಾ 10 ಅಂಕಿಗಳ ಪರವಾನಗಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಇಲಾಖೆಗಳು ಇಪೊಕ್ಯೂರ್ಮೆಂಟ್, ಪೋರ್ಟಲ್ ಮೂಲಕ ವಿವಿಧ ಕಾಮಗಾರಿ ಹಾಗೂ ಕಚೇರಿಯ ದಿನನಿತ್ಯ ಬಳಕೆಗಾಗಿ ಬಳಸಲಾಗುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಖರೀದಿ ಸಂದರ್ಭದಲ್ಲಿ ಅಧಿಕಾರಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ನೀಡಲು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಅಧಿಕಾರಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಬಿಐಎಸ್ನ ನಿರ್ದೇಶಕ ಅಮಿತ್ ರಾಯ್ ಮಾತನಾಡಿ, 2016ರಲ್ಲಿ ಬಿಐಎಸ್ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಕಾಯ್ದೆಯನ್ನು ಉಲ್ಲಂಘನೆ ಮಾಡಿದವರಿಗೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಮೊದಲ ಉಲ್ಲಂಘನೆಗೆ 2 ಲಕ್ಷ ರೂ.ಗಳಿಗಿಂತ ಕಡಿಮೆ ಇರದ ಮೌಲ್ಯದ ದಂಡ ಹಾಗೂ ಎರಡನೇ ಮತ್ತು ಅನಂತರದ ಉಲ್ಲಂಘನೆಗಾಗಿ 5 ಲಕ್ಷ ರೂ.ಗಳಿಗಿಂತ ಕಡಿಮೆ ಇರದ ಮೌಲ್ಯದ ದಂಡ ಅಥವಾ ಉತ್ಪಾದಿಸಿದ, ಮಾರಾಟ ಮಾಡಿದ, ಮಾರಾಟ ಮಾಡಲು ಉದ್ದೇಶಿಸಿದ ಪ್ರಾಮಾಣದ ಗುರುತಿನ ಸರಕು, ಸಾಮಗ್ರಿಗಳ ಮೌಲ್ಯದ ಹತ್ತು ಪಟ್ಟು ಮೌಲ್ಯದ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ಯಾವುದೇ ತಯಾರಿಕಾ ಸಂಸ್ಥೆ, ಕೈಗಾರಿಕೆಗಳು ತಯಾರಿಸುವ ಸರಕು, ಸಾಮಗ್ರಿ, ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಿಐಎಸ್ನಿಂದ ಪರವಾನಗಿ ಪಡೆದಿರುವ ಬಗ್ಗೆ ಜಾಲತಾಣ ಸಂಪರ್ಕಿಸಿ ಪರಿಶೀಲಿಸಬಹುದು ಎಂದು ತಿಳಿಸಿದರಲ್ಲದೆ, ದೆಹಲಿಯಲ್ಲಿ ಕೇಂದ್ರ ಕಚೇರಿ ಸೇರಿದಂತೆ ದೇಶದಲ್ಲಿ ಬ್ಯೂರೋ ಆಫ್ ಇಂಡಿಯ ಸ್ಟಾಂಡರ್ಡ್ಸ್ ನ 42 ಶಾಖಾ ಕಚೇರಿ, 5 ವಿಭಾಗೀಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಬಿಐಎಸ್ ಪರವಾನಗಿ ಇಲ್ಲದೆ ಉತ್ಪನ್ನಗಳ ಮೇಲೆ ಐಎಸ್ಐ ಮಾರ್ಕ್ ಅಳವಡಿಸಲು ಅವಕಾಶವಿಲ್ಲ ಎಂದು ತಿಳಿಸಿದರಲ್ಲದೆ, ಗ್ರಾಹಕರಿಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಕೈಗಾರಿಕೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಗ್ರಾಹಕರು ಐಎಸ್ಐ ಗುರುತು ಇರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯವೆಂದು ಅರಿಯಬೇಕು. ಉತ್ಪನ್ನಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ಅಂತಹ ಕೈಗಾರಿಕೆ, ಸಂಸ್ಥೆಗಳ ಮೇಲೆ ಬಿಐಎಸ್ನಿಂದ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಉತ್ಪನ್ನ, ವಸ್ತು, ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಲು ದೇಶದಲ್ಲಿ ಬಿಐಎಸ್ನ 8 ಪ್ರಯೋಗಾಲಯ ಹಾಗೂ 270 ಖಾಸಗಿ (ಬಿಐಎಸ್ನಿಂದ ಅಧಿಕೃತವಾಗಿ ಗುರುತಿಸಿರುವ) ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಅದೇ ರೀತಿ ಚಿನ್ನ, ಬೆಳ್ಳಿ ಆಭರಣಗಳನ್ನು ಕೊಳ್ಳುವಾಗ ಬಿಐಎಸ್ನ ಹಾಲ್ ಮಾರ್ಕ್ ಇರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಶುದ್ಧ(ಅಪ್ಪಟ)ವಲ್ಲದ ಚಿನ್ನ, ಬೆಳ್ಳಿಯನ್ನು ಖರೀದಿಸಿ ನಷ್ಟ ಅನುಭವಿಸಬೇಕಾಗುತ್ತದೆ. ಇದುವರೆಗೂ ಬಿಐಎಸ್ನಿಂದ 83220 ಚಿನ್ನ ಹಾಗೂ 8064 ಬೆಳ್ಳಿ ಆಭರಣಗಳ ತಯಾರಕರು/ ಮಾರಾಟಗಾರರು ಪರವಾನಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಟ್ಟಡ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್, ಕಬ್ಬಿಣ, ಗೃಹಬಳಕೆಯ ಗ್ಯಾಸ್ ಸಿಲಿಂಡರ್, ಪ್ಯಾಕೇಜ್ ಕುಡಿಯುವ ನೀರು, ರಸಗೊಬ್ಬರ, ರಾಸಾಯನಿಕಗಳು, ವೈದ್ಯಕೀಯ ಉಪಕರಣ, ಕುಡಿಯುವ ನೀರಿನ ಸಂಪರ್ಕಕ್ಕೆ ಬಳಸುವ ಪಿವಿಸಿ ಪೈಪ್, ಪಂಪು ಮೋಟಾರ್, ಅಂಗನವಾಡಿಗಳಲ್ಲಿ ವಿತರಿಸುವ ಆಹಾರ, ಶಾಲೆಗಳಿಗೆ ಪೂರೈಕೆ ಮಾಡುವ ಹಾಲಿನ ಪುಡಿ, ಕ್ರೀಡಾ ಸಾಮಗ್ರಿ ಸೇರಿದಂತೆ ಎಲ್ಲಾ ರೀತಿಯ ಹಾಲಿನ ಉತ್ಪನ್ನಗಳು, ಜಾನುವಾರುಗಳ ಆಹಾರ ಪೊಟ್ಟಣಗಳ ಮೇಲೆ ಐಎಸ್ಐ ಗುರುತು ಇರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಂಡು ಖರೀದಿಸಬೇಕೆಂದು ಸಲಹೆ ನೀಡಿದರು.
ನಂತರ ಬಿಐಎಸ್ ನ ಮುಖ್ಯಸ್ಥೆ ಶಿವಾಂಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!