ತುಮಕೂರು: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಮೂಲ ಸೌಲಭ್ಯ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ತುಮಕೂರು-ದಾವಣಗೆರೆ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಪ್ರಗತಿ, ಹೆಚ್‌ಎಎಲ್, ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳಲ್ಲಿ 102 ಕಿ.ಮೀ ಉದ್ದದಷ್ಟು ಹಾದು ಹೋಗಲಿದ್ದು, ಈ ಕಾಮಗಾರಿಯು 2024ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರೈಲ್ವೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಧರ್ಮಪಾಲ್ ತಿಳಿಸಿದಾಗ ಪ್ರತಿಕ್ರಿಯಿಸಿದ ಅವರು 2007ರಲ್ಲಿ ಯೋಜನೆ ಪ್ರಾರಂಭವಾಗಿದ್ದರೂ ಈವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ಯೋಜನಾ ವೆಚ್ಚ ದ್ವಿಗುಣಗೊಳ್ಳುತ್ತಿದ್ದು, ಸರ್ಕಾರದ ಮೇಲೆ ಹೊರೆ ಹೆಚ್ಚುತ್ತಿದೆ. ಯೋಜನೆಗೆ ಅಗತ್ಯವಾಗಿರುವ ಭೂ ಸ್ವಾಧಿನ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ಜಿಲ್ಲೆಯಲ್ಲಿ 58 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು ಎಪ್ರಿಲ್ ಮಾಸಾಂತ್ಯದೊಳಗೆ ಅಗತ್ಯವಿರುವ 523 ಹೆಕ್ಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ನಿಯಮದನ್ವಯ ಪರಿಹಾರವನ್ನು ನೀಡಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿ ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಡೆಪ್ಯುಟಿ ಚೀಫ್ ಇಂಜಿನಿಯರ್ ಪ್ರದೀಪ್ ಅವರಿಗೆ ಸೂಚಿಸಿದರು.
ಸಭೆಗೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ 1 ಮತ್ತು 2ನೇ ಮಹಡಿಯ ಕಾಮಗಾರಿಯನ್ನು ಕಾರ್ಯಪಾಲಕ ಇಂಜಿನಿಯರ್ ರಘುನಂದನ್, ಸಹಾಯಕ ಇಂಜಿನಿಯರ್ ಶಂಭು ಅವರೊಂದಿಗೆ ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಉಪವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್‌ಗಳಾದ ಬಿ.ಆರತಿ, ಮೋಹನ್ ಕುಮಾರ್ ಸೇರಿದಂತೆ ರೈಲ್ವೆ, ಹೆಚ್.ಎ.ಎಲ್., ರಾಷ್ಟ್ರೀಯ ಹೆದ್ದಾರಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಹೆಚ್.ಎ.ಎಲ್ ಘಟಕಕ್ಕೆ ಮೂಲ ಸೌಕರ್ಯ ಒದಗಿಸಿ
ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ಬಳಿ ಪ್ರಾರಂಭವಾಗಿರುವ ಹೆಚ್‌ಎಎಲ್ ಘಟಕದಲ್ಲಿರುವ ಮೂಲ ಸೌಕರ್ಯಗಳ ಬಗ್ಗೆ ಮಾತನಾಡಿ, ಘಟಕಕ್ಕೆ ಅಗತ್ಯ ರಸ್ತೆ, ನೀರು ಸರಬರಾಜು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರಲ್ಲದೇ ಕಡಬ ಕೆರೆಯಿಂದ ಪೈಪ್‌ಲೈನ್ ಮೂಲಕ ಘಟಕಕ್ಕೆ ನೀರನ್ನು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಹೆಚ್‌ಎಎಲ್‌ಗೆ ಹೆಚ್ಚುವರಿ ಭೂಮಿಯನ್ನು ಒದಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗುವುದು ಎಂದರು.
Comments are closed.