ಅಭಿವೃದ್ಧಿ ಸಹಿಸದೆ ಟೀಕೆ ಮಾಡ್ತರೆ ವಿರೋಧಿಗಳು

6 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ: ಸಂಸದ

134

Get real time updates directly on you device, subscribe now.

ಕುಣಿಗಲ್‌: ವಿರೋಧಪಕ್ಷಗಳು ಮೂಲೆಯಲ್ಲಿ ಮಲಗಿ ನಿದ್ರಿಸುವುದು ಬಿಟ್ಟು ಜಾಗೃತಗೊಂಡರೆ, ಆಡಳಿತ ಪಕ್ಷದವರು ಕೆಲಸ ಮಾಡುವ ಬಗ್ಗೆ ಚಿಂತಿಸಿ ಅಭಿವೃದ್ದಿ ಕಾಮಗಾರಿಗಳಿಗೆ ವೇಗ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಭಾನುವಾರ ರಾತ್ರಿ ಪಟ್ಟಣದಲ್ಲಿ 2.80 ಕೋಟಿ ವೆಚ್ಚದಲ್ಲಿ 233 ಮೀಟರ್‌ ಹಳೇ ಹೆದ್ದಾರಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ವಿರೋಧಪಕ್ಷಗಳು ನಾಲ್ಕುವರ್ಷದಿಂದ ನಿದ್ದೆಗೆ ಜಾರಿದ್ದು ಇದೀಗ ಚುನಾವಣೆ ಸಮೀಪಿಸುತ್ತಿದೆ ಎಂದು ಟೀಕೆಯಲ್ಲಿ ಕಾಲಕಳೆಯುತ್ತಿದ್ದಾರೆ. ಅವರು ಮಾಡುವ ಟೀಕೆಯನ್ನು ಸ್ವೀಕರಿಸಿ, ನಮ್ಮ ಅಭಿವೃದ್ದಿ ಕೆಲಸದ ಮೂಲಕ ನಾವು ಉತ್ತರ ನೀಡುತ್ತೇವೆ. ನಾವು ಎಂದಿಗೂ ಮತದಾರ ಪ್ರಭುಗಳಿಗೆ ಉತ್ತರದಾಯತ್ವ ಹೊಂದಿದ್ದೇವೆ ಎಂದರು.
ಪಟ್ಟಣದಲ್ಲಿ ಪುರಸಭೆ ಬಸ್‌ನಿಲ್ದಾಣವನ್ನು 6 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಕ್ರಮಕೈಗೊಂಡಿದ್ದು ಶೀಘ್ರದಲ್ಲೆ ಜನತೆಗೆ ಕೊಟ್ಟಮಾತಿನಂತೆ ಕಾಮಗಾರಿ ಅರಂಭಿಸುತ್ತೇವೆ. 800 ಮಂದಿ ವಸತಿ ಹೀನರಿಗೆ ನಿವೇಶನ ನೀಡಲು ಕ್ರಮಕೈಗೊಂಡಿದ್ದು ನಿವೇಶನ ವಿತರಿಸಲಾಗುವುದು. ಜನತೆ ನಂಬಿಕೆ ಇಟ್ಟು ಪುರಸಭೆಯಲ್ಲಿ ಕಾಂಗ್ರೆಸ್‌ ಅಡಳಿತಕ್ಕೆ ತಂದಿದ್ದು ಜನರ ನಂಬಿಕೆಗೆ ಧಕ್ಕೆ ಬಾರದ ಹಾಗೆ ಸಮಗ್ರ ಅಭಿವೃದ್ದಿ ಕಾರ್ಯಕೈಗೊಳ್ಳುತ್ತೇವೆ. 18 ವರ್ಷದಿಂದ ದೊಡ್ಡಕೆರೆ ತುಂಬಿಸಿರಲಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿ ನೀರುಹರಿಸಿ ಕೆರೆ ತುಂಬಿಸಿದ್ದೇವೆ ಅದು ನಮ್ಮ ಕೆಲಸ. ಸರ್ಕಾರ ಇದ್ದರೂ ನೀರು ಬಿಡಿಸದ ವಿರೋಧ ಪಕ್ಷದವರು ಬಾಗಿನ ಅರ್ಪಿಸಿದ್ದಾರೆ ಅದು ಅವರ ಕೆಲಸ, ಜನ ಎಲ್ಲವನ್ನು ಗಮನಿಸುತ್ತಾರೆ ಕೆಲಸ ಮಾಡುವವರಿಗೆ ಅವರ ಅಶೀರ್ವಾದ ಮಾಡುತ್ತಾರೆ ಎಂದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ಶ್ರೀನಿವಾಸ್, ಅರುಣಕುಮಾರ, ನಾಗೇಂದ್ರ, ದೇವರಾಜು, ನಾಗರಾಜ, ಮಂಜುಳಮ್ಮ, ಪ್ರಮುಖರಾದ ರಹಮತ್‌, ಅಕ್ನರ್‌, ರೆಹಮಾನ್‌ ಶರೀಫ್‌, ಇಪ್ಪಾಡಿ ವಿಶ್ವನಾಥ, ಕೆಂಪೀರೆಗೌಡ, ಕೆಂಪಣ್ಣ, ಶಂಖರ್‌, ಬೇಗೂರು ನಾರಾಯಣ, ಶಾಂತರಾಜ ಇತರರು ಇದ್ದರು.

ಮೇಕೆದಾಟು ಯೋಜನೆಗೆ ಸರ್ಕಾರ 1ಸಾವಿರ ಕೋಟಿ ನೀಡಿದೆ. ಯೋಜನೆಗೆ ಹಣ ನೀಡಿದರೆ ಸಾಲದು ಮೇಕೆದಾಟು ಯೋಜನೆ ಅನುಮತಿಗೆ ಧೂಳು ತಿನ್ನುತ್ತಾ ಇರುವ ಕಡತ ಪರಿಶೀಲಿಸಿ, ಶೀಘ್ರ ಯೋಜನೆಗೆ ಮಂಜೂರಾತಿ ಕೊಡಿಸುವ ಕೆಲಸಮಾಡಬೇಕು. ರಾಜ್ಯದ ಬಿಜೆಪಿಯ 24 ಸಂಸದರು ಇದ್ದರೂ ಈ ನಿಟ್ಟಿನಲ್ಲಿ ಏನು ಮಾಡುತ್ತಿಲ್ಲ. ಮೊದಲು ಕೇಂದ್ರ ಸರ್ಕಾರದಿಂದ ಅಗಬೇಕಿರುವ ಕೆಲಸವನ್ನು ಮಾಡಲಿ. ಮೇಕೆದಾಟು ಯೋಜನೆ ನೀರು ಕನಕಪುರಕ್ಕಲ್ಲ, ಅದು ಕಾವೇರಿ ಕೊಳ್ಳದ ಜನರ ಅನುಕೂಲಕ್ಕೆ, ಹೇಮಾವತಿ ಅಚ್ಚುಕಟ್ಟು ಪ್ರದೇಶದ ಜನರ ಅನುಕೂಲಕ್ಕೆ ಹಾಗೂ ಬೆಂಗಳೂರು ನಗರದ ಜನರ ಕುಡಿಯುವ ನೀರಿಗೆ. ಮೇಕೆದಾಟು ಯೋಜನೆಯೂ ಹೆಚ್ಚುವರಿ ನೀರು ಸಂಗ್ರಹ ಯೋಜನೆಯಾಗಿದೆ. ಇದರಿಂದ ತಮಿಳುನಾಡಿಗೂ ಸಮರ್ಪಕ ನೀರು ಹರಿಸಲು ಸಾಧ್ಯ, ಕಾವೇರಿ ಕೊಳ್ಳ, ಹೆಮಾವತಿ ಭಾಗದ ರೈತರ ನೀರು ಉಳಿಸಲು ಸಾಧ್ಯ, ಇದನ್ನು ಅರ್ಥಮಾಡಿಕೊಳ್ಳಬೇಕು. ನೀರಿನ ವಿಷಯದಲ್ಲೂ ರಾಜಕಾರಣ ಮಾಡುವುದರಲ್ಲಿ ಅರ್ಥ ಇಲ್ಲ.
ಡಿ.ಕೆ.ಸುರೇಶ್‌, ಸಂಸದ

ಡಿಕೆಶಿ ಸಿಎಂ ಆಗ್ತಾರೆ…ಲಿಂಕ್‌ ಕೆನಾಲ್‌ಗೂ ಪಾದಯಾತ್ರೆ ಮಾಡ್ತೇವೆ?!
ನಾನು ರಾಜಕಾರಣಿಯಲ್ಲ.. ಮೂಲತಃ ವೈದ್ಯ ವೃತ್ತಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನತೆಗೆ ಸ್ಪಂದಿಸಿದ್ದೇನೆ, ತಾಲೂಕಿನ ಜನರ ಸೇವೆಗೆ ಗರಿಷ್ಟ ಮಟ್ಟದಲ್ಲಿ ಸೇವೆ ನೀಡಿದ್ದೇವೆ. ನಾಲ್ಕು ವರ್ಷಗಳಿಂದ ಸುಮ್ಮನಿದ್ದ ವಿರೋಧ ಪಕ್ಷಗಳು ಈಗ ಅಭಿವೃದ್ದಿ ವಿಷಯದಲ್ಲಿ ಟೀಕೆ ಮಾಡುತ್ತಿದ್ದಾರೆ. ಬೇಗೂರು,ದೊಡ್ಡಮಧುರೆ ಭಾಗಕ್ಕೆ 25 ವರ್ಷಗಳ ನಂತರ ಹೇಮೆ ನೀರು ಹರಿಸಿದ್ದೇವೆ. ವಿರೋಧ ಪಕ್ಷದ ಟೀಕೆ ಏನೆ ಇದ್ದರೂ ನಮ್ಮ ಅಭಿವೃದ್ದಿ ಕಾರ್ಯ ಸಂಸದ ಡಿ.ಕೆ.ಸುರೇಶ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರವರ ಮಾರ್ಗದರ್ಶನಲ್ಲಿ ನಿರಂತರವಾಗಿರುತ್ತದೆ. ಮುಂದೆ ಡಿ.ಕೆ.ಶಿವಕುಮಾರ್‌ ಸಿಎಂ ಅಗುವುದರಲ್ಲಿ ಅನುಮಾನ ಇಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಹೆಚ್ಚು ಒಲವಿದ್ದು ತಾಲೂಕಿನಲ್ಲಿ ಅಭಿವೃದ್ದಿ ಪರ್ವವೆ ನಡೆಯಲಿದೆ. ಲಿಂಕ್‌ ಕೆನಾಲ್‌ ವಿರೋಧಿಸುವ ಬಿಜೆಪಿ ಸರ್ಕಾರ ಕಣ್ಣು ತೆರೆಸಲು ಮೇಕೆದಾಟು ಪಾದಯಾತ್ರೆ ಮಾದರಿಯಲ್ಲೆ ಲಿಂಕ್‌ ಕೆನಾಲ್‌ ಯೋಜನೆ ಆಗ್ರಹಿಸಿ ವಿಧಾನಸೌಧ ಚಲೋ ಪಾದಯಾತ್ರೆ ನಡೆಸಲಾಗುವುದು.
ಡಾ.ರಂಗನಾಥ್‌, ಶಾಸಕ, ಕುಣಿಗಲ್

Get real time updates directly on you device, subscribe now.

Comments are closed.

error: Content is protected !!