ಕುಣಿಗಲ್: ಸದನದಲ್ಲಿ ತಾಲೂಕಿನ ಅಭಿವೃದ್ದಿ ಬಗ್ಗೆ ಪ್ರಶ್ನೆ ಮಾಡದೆ ಗ್ರಾಪಂಗೆ ಒಂದರಂತೆ ಮದ್ಯದಂಗಡಿ ಕೇಳುತ್ತಾರೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಹೇಳಿದರು.
ಸೋಮವಾರ ತಾಲೂಕಿನ ಮೋದೂರು ಗ್ರಾಮದ 35 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ 30 ಕ್ಕೂ ಹೆಚ್ಚು ಸಹಕಾರ ಸಂಘದ ಕಟ್ಟಡವನ್ನು ಒಂದೆ ಒಂದು ರೂಪಾಯಿ ಕಮಿಷನ್ ಪಡೆಯದೆ ಗುಣಮಟ್ಟ ಕಾಪಾಡಿ ಕಟ್ಟಡ ಕಟ್ಟಿಸಿದ್ದೇನೆ. ಅದೆ ತಾಲೂಕಿನ ಅಧಿಕಾರಸ್ಥ ರಾಜಕಾರಣಿ 2ಲಕ್ಷ ಕಾಮಗಾರಿಗೆ ಗುದ್ದಲಿಪೂಜೆ ಮಾಡಲು ಶೇ.10 ಕಮಿಷನ್ ನೀಡಬೇಕು ಇಂತಹ ಸ್ಥಿತಿ ತಾಲೂಕಿನಲ್ಲಿದೆ. ಕೋವಿಡ್ ಸಮಯದಲ್ಲಿ ಒಕ್ಕೂಟ ರಜೆ ಮಾಡದೆ ಹೈನುಗಾರರ ಮನೆಬಾಗಿಲಲ್ಲೆ ಸುಮಾರು 80 ಕೋಟಿಗೂ ಹೆಚ್ಚು ಬಟವಾಡೆ ಮಾಡಿ, ಜನರ ಶಾಶ್ವತ ಅರ್ಥಿಕ ಸ್ವಾವಲಂಬನೆಗೆ ಶ್ರಮಿಸಿದ್ದೇವೆ. ತಾಲೂಕಿನಲ್ಲಿ ದಿನಕ್ಕೆ 1.07 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಗುಣಮಟ್ಟ ಕಾಪಾಡಲು ಶ್ರಮಿಸಬೇಕು ಎಂದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ, ಒಕ್ಕೂಟದಲ್ಲಿ ಪ್ರಸಕ್ತ 6.50 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಕೋವಿಡ್‌ನಿಂದ ಸಂಘವು ಅರ್ಥಿಕನಷ್ಟ ಅನುಭವಿಸುವಂತಾದರೂ ಸಾಲ ಮಾಡಿ, ನಂತರ ಸಾಲ ತೀರುವಳಿ ಮಾಡಿ, ಒಕ್ಕೂಟ ಉತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ 13 ಒಕ್ಕೂಟಗಳು ರೈತರಿಗೆ ದರ ಕಡಿಮೆ ಮಾಡಿದರೂ, ರಜೆ ಗೋಷಿಸಿದರೂ, ತುಮಕೂರು ಒಕ್ಕೂಟ ಮಾತ್ರ ದರ ಕಡಿಮೆ ಮಾಡಿಲ್ಲ, ರಜೆ ಮಾಡಲಿಲ್ಲ. ಶೀಘ್ರದಲ್ಲೆ ರೈತರಿಗೆ ದರ ಹೆಚ್ಚಿಸಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿರುವ ಕುಣಿಗಲ್ ತಾಲೂಕು, ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕರಿಸುವ ಮೂಲಕ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು. 80 ಸಾವಿರ ಉತ್ಪಾದಕರಿದ್ದು, ಮರಣನಿಧಿ 50 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಕೊವಿಡ್‌ನಿಂದ ಮೃತಪಟ್ಟ 123 ಉತ್ಪಾದಕರಿಗೆ ತಲಾ ಒಂದು ಲಕ್ಷ ಪರಿಹಾರ ನೀಡಲಾಗಿದೆ. ಹಾಲು ಉತ್ಪಾದಕರ ರಾಸುಗಳಿಗೆ ಉಚಿತ ವಿಮೆ,ಮಕ್ಕಳಿ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯಭಟ್ಟ, ವ್ಯವಸ್ಥಾಪಕ ಪ್ರಸಾದ್ ಮಾತನಾಡಿದರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮೋಹನ ನಾಯಕ, ವಿಸ್ತರಣಾಧಿಕಾರಿ ನವ್ಯಶ್ರೀ, ದೀಪಕ್, ಸುದರ್ಶನ, ನಾಗರಾಜು, ಮೋದೂರು ಸಂಘದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರುಗಳು, ಪ್ರಮುಖರಾದ ಜಯರಾಜ್, ಜಿ.ಡಿ.ಗಂಗಾಧರ್ ಇತರರು ಇದ್ದರು. ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ಗ್ರಾಪಂಗೆ ಒಂದು ಮದ್ಯದಂಗಡಿ ಕೇಳ್ತಿದ್ದಾರೆ ಡಾ.ರಂಗನಾಥ್!?
ಮುಂದೆ ನಮ್ಮ ಷಟ್ಕ ಸಿಎಂ ಆಗ್ತಾರೆ.. ಆಗ ಸಹಕಾರ ಸಂಘದವರನ್ನು ನೋಡಿಕೊಳ್ತೇನೆ.. ಎಂದು ಹೇಳಿಕೊಂಡು ಶಾಸಕರು ಅಡ್ಡಾಡ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ತಾಲೂಕಿನ ಅಭಿವೃದ್ದಿ ಬಗ್ಗೆ ಚರ್ಚಿಸದ ಶಾಸಕ ಡಾ.ರಂಗನಾಥ್, ಗ್ರಾಪಂಗೆ ಒಂದು ಮದ್ಯದ ಅಂಗಡಿ ನೀಡಿ ಎಂದು ಕೇಳಿಕೊಳ್ಳುವ ಮೂಲಕ ತಾಲೂಕು ಆಭಿವೃದ್ದಿಯನ್ನೆ ಕಡೆಗಣಿಸಿದ್ದಾರೆ, ಹಾಲು ಉತ್ಪಾದಕರ ಸಹಕಾರ ಸಂಘದಲ್ಲೂ ಶಾಸಕರು ರಾಜಕಾರಣ ಮಾಡ್ತಿದ್ದಾರೆ. ತಾಲೂಕಿನಲ್ಲಿ ಇನ್ನು 20 ಸಂಘಗಳಿಗೆ ಕಟ್ಟಡಕ್ಕೆ ನಿವೇಶನ ಬೇಕಿದೆ ಅದರೆ, ಶಾಸಕರ ಕಾರ್ಯವೈಖರಿಯಿಂದ ನಿವೇಶನ ಸಿಗದೆ ಸಂಘದ ಬೆಳವಣಿಗೆ ಕುಂಠಿತ ಕಾಣುತ್ತಿದೆ.
। ಡಿ.ಕೃಷ್ಣಕುಮಾರ್, ರಾಜ್ಯಾಧ್ಯಕ್ಷ, ಪಿಎಲ್ಡಿ ಬ್ಯಾಂಕ್
Comments are closed.