ತುಮಕೂರು: ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದು, 15-17 ವರ್ಷದೊಳಗಿನ ಮಕ್ಕಳ ಕೋವಿಡ್ ಲಸಿಕಾಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, 15-17 ವರ್ಷದೊಳಗಿನ ಮಕ್ಕಳ ಮೊದಲ ಡೋಸ್ ಲಸಿಕಾಕರಣವು ಶೇ.74 ಹಾಗೂ ಎರಡನೇ ಡೋಸ್ ಲಸಿಕಾಕರಾಣವು ಶೇ.51ರಷ್ಟು ಪೂರ್ಣಗೊಂಡಿದ್ದು, ಶೈಕ್ಷಣಿಕ ಅವಧಿ ಮುಗಿಯುವ ಹಂತದಲ್ಲಿರುವುದರಿಂದ ಆದಷ್ಟು ಬೇಗ ಶೇ.100ರಷ್ಟು ಲಸಿಕಾಕರಣವನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಹೊಸದಾಗಿ ಕಾರ್ಯಾರಂಭ ಮಾಡಿರುವ ಗ್ರಾಮ-ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ(ಎಬಿಎಆರ್‌ಕೆ) ಯೋಜನೆಯಡಿ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲು ಆಯಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ನಕಲಿ ಬಿಲ್ ಗಳನ್ನು ಮಾಡದಂತೆ ನಿಗಾ ವಹಿಸಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಪಿಎಂ ಕಿಸಾನ್ ಯೋಜನೆಯಡಿ ನೆರವನ್ನು ಪಡೆಯಲು ರೈತರು ಕಡ್ಡಾಯವಾಗಿ ನಿಗಧಿತ ಅವಧಿಯೊಳಗೆ ಇ-ಕೆವೈಸಿ ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ಹೆಚ್ಚಿನ ಪ್ರಚಾರವನ್ನು ನೀಡಲು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಅವರಿಗೆ ಸೂಚಿಸಿದರು.
ಕೆಸಿಪ್-3 ಪ್ಯಾಕೆಜ್-2ರ ಮಾಗಡಿ-ಸೋಮವಾರಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿ ಜಿಲ್ಲೆಯಲ್ಲಿ 23 ಕಿ.ಮೀ ಉದ್ದದಷ್ಟು ನಡೆಯಲಿದ್ದು, 13 ಕಿ.ಮೀ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ.6.ಕಿ.ಮೀ ಉದ್ದದಷ್ಟು ರಸ್ತೆ ಕಾಮಗಾರಿಗೆ ಭೂಮಿ ಅಗತ್ಯವಿದೆ ಎಂದು ಕೆಶಿಪ್ ಇಂಜಿನಿಯರ್ ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಸಂಬಂಧ ಶೀಘ್ರ ಕ್ರಮಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ವಿ.ಅಜಯ್ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ `ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’ (ಐಪಿಜಿಆರ್‌ಎಸ್)ಯಡಿ 55 ಪ್ರಕರಣಗಳು ಬಾಕಿಯಿದ್ದು, ಶೀಘ್ರ ಇತ್ಯರ್ಥಪಡಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಮುಜರಾಯಿ ಇಲಾಖೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಅನುದಾನ ಲಭ್ಯವಿದ್ದು, ಪರಿಶಿಷ್ಟಜಾತಿ, ಪಂಗಡಗಳ ಒಡೆತನದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಅನುದಾನವನ್ನು ನೀಡಲು ಅವಕಾಶವಿದೆ. ಈ ಸಂಬಂಧ ತಹಶೀಲ್ದಾರ್ ಗಳು ಯಾವುದೇ ಕಾರಣ ಹೇಳದೇ ಅರ್ಹ ಪರಿಶಿಷ್ಟರ ದೇವಾಲಯಗಳಿಗೆ ಅನುದಾನವನ್ನು ನೀಡಬೇಕು ಎಂದರಲ್ಲದೆ ಅನುದಾನ ವಾಪಸ್ಸಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಕೋವಿಡ್-19ನಿಂದಾಗಿ ಮೃತರಾದ ವಾರಸುದಾರರಿಂದ ಪರಿಹಾರಧನಕ್ಕಾಗಿ ಈವರೆಗೆ 1127 ಅರ್ಜಿಗಳು ಸ್ವಿಕೃತಗೊಂಡು, 927 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಉಳಿದ 200 ಅರ್ಜಿಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲದ ಕಾರಣಗಳಿಂದ ಕಚೇರಿ ಹಂತದಲ್ಲಿ ಬಾಕಿಯಿದೆ. ಮೃತರ ಎಸ್‌ಆರ್‌ಎಫ್‌ಐಡಿ, ಫಾರಂ-04, 04ಎ ಕಾಲಂಗಳಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕಳುಹಿಸುವ ಮೂಲಕ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ತಹಶಿಲ್ದಾರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಗಳು ಸ್ಥಳಕ್ಕೆ ಭೇಟಿ ನೀಡಬೇಕಲ್ಲದೆ ತಕ್ಷಣ ಮೃತರ ಪತ್ನಿಗೆ ವಿಧವಾ ವೇತನ, ಮಶಾಸನ ಮಂಜೂರು ಮಾಡಲು ಕ್ರಮಕೈಗೊಂಡು ವಾರದಲ್ಲೇ ಸಭೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ ವೀರಭದ್ರಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವ್‌ರಾಜ್, ಡಾ.ಮೋಹನ್‌ದಾಸ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ತಹಶೀಲ್ದಾರ್ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
1ನೇ ಡೋಸ್ ಶೇ.74, 2ನೇ ಡೋಸ್ ಶೇ.51 ಪೂರ್ಣ
15 ರಿಂದ 17 ವರ್ಷದೊಳಗಿನ ಮಕ್ಕಳ ಕೋವಿಡ್ ಲಸಿಕೆ ಪೂರ್ಣಗೊಳಿಸಿ
Get real time updates directly on you device, subscribe now.
Next Post
Comments are closed.