ಕುಣಿಗಲ್: ಇಡೀ ಜಗತ್ತೆ ಮಹಿಳಾ ದಿನಾಚರಣೆ ಸಂಭ್ರಮದಲ್ಲಿದೆ.. ಆದರೆ, ಬೀಸೆಗೌಡನದೊಡ್ಡಿ ಸುತ್ತಮುತ್ತಲ ಗ್ರಾಮದ ಮಹಿಳೆಯರು ಕಲ್ಲುಗಣಿಗಾರಿಕೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದೆ, ತಾಲೂಕು ಅಡಳಿತಕ್ಕೆ ನಾಚಿಕೆ ಆಗಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಅನಂದಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರದಂದು ಹುಲಿಯೂರುದುರ್ಗ ಹೋಬಳಿಯ ಬೀಸೆಗೌಡನದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಐವತ್ತಕ್ಕು ಹೆಚ್ಚು ಮಹಿಳೆಯರು ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕಳೆದ ಎಂಟು ದಿನದಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲಸೂಚಿಸಿ ಮಹಿಳೆಯರಿಗೆ ಶುಭಕೋರಿ ಮಾತನಾಡಿ, ಮಹಿಳೆಯರು ಈ ಮಟ್ಟದಲ್ಲಿ ಹೋರಾಟ ಮಾಡುವುದು ವಿರಳ, ಹೀಗಿದ್ದು ಕಳೆದ ಎಂಟು ದಿನಗಳಿಂದ ಮಹಿಳೆಯರೆ ಪ್ರತಿಭಟನೆ ನಡೆಸುತ್ತಿದ್ದೂ ಜನಪ್ರತಿನಿಧಿಗಳು ಸಮಸ್ಯೆ ಆಲಿಸದೆ ಕೈಕಟ್ಟಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.
ಸಮಸ್ಯೆಯ ಅಳ, ಅಗಲ ಎಷ್ಟಿದೆ ಎಂದು ತಿಳಿಯುವ ಸೌಜನ್ಯತೆ ಇಲ್ಲದವರಾಗಿದ್ದಾರೆ. ಕಲ್ಲುಗಣಿಗಾರಿಕೆಯಿಂದ ಕೃಷಿಗೆ ಸಾಕಷ್ಟು ಹಿನ್ನೆಡೆಯಾಗಿದೆ. ಅವೈಜ್ಞಾನಿಕ ಗಣಿಗಾರಿಕೆ ಸ್ಪೋಟದಿಂದ ಅಂತರ್ಜಲ ಕುಸಿದಿದೆ. ಬೆಳೆ ನೆಚ್ಚಿಕೊಂಡ ರೈತರು ಸಂಕಷ್ಟದಲ್ಲಿದ್ದಾರೆ. ಧೂಳು ಆವರಿಸಿ ರೇಷ್ಮೆ ಬೆಳೆಗೂ ಕಂಟಕ ಎದುರಾಗಿದೆ. ಸ್ಪೋಟದ ತೀವ್ರತೆಗೆ ಮನೆಗಳು ಜಕಂ ಆಗಿವೆ. ಸುತ್ತಮುತ್ತಲ ಪ್ರದೇಶದಲ್ಲಿ ನಿವಾಸಿಗಳಿಗೆ ಅರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ, ತಾಲೂಕು ಅಡಳಿತಕ್ಕೆ ಮಹಿಳೆಯರು ಮನವಿ ಮಾಡಿದ್ದರೂ ತಾಲ್ಲೂಕು ಆಡಳಿತಕ ಕ್ಯಾರೆ ಎನ್ನುತ್ತಿಲ್ಲ ಎಂದು ಕಿಡಿಕಾರಿದರು.
ಗ್ರಾಮದ ಮಹಿಳೆಯರು ಕಳೆದೊಂದು ವಾರದಿಂದ ಬೀದಿಯಲ್ಲೆ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಆಡಳಿತ ಸಮಸ್ಯೆ ಅಲಿಸುವ ಸೌಜನ್ಯತೆ ತೋರಿಲ್ಲ. ಜನಪ್ರತಿನಿಧಿಗಳು, ಕೆಲ ಅಧಿಕಾರಿಗಳು ಕ್ರಷರ್ ಮಾಫೀಯದ ಕೃಪೆಗೆ ಒಳಗಾಗಿ ಗ್ರಾಮಸ್ಥರನ್ನು ಶೋಷಣೆ ಮಾಡುತ್ತಿದ್ದಾರೆ ಎಂದರು.
ಗ್ರಾಮದ ಮಹಿಳೆಯರು ತಮ್ಮ ಸಮಸ್ಯೆ ನಿವಾರಿಸಲು ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದ ತಾಲೂಕು ಅಡಳಿತಕ್ಕೆ, ತಾಲೂಕಿನ ಜನಪ್ರತಿನಿಧಿಗಳಿಗೆ ಧಿಕ್ಕಾರ ಇರಲಿ, ಇನ್ನಾದರೂ ತಾಲೂಕು ಅಡಳಿತ ಜಾಣ ನಿದ್ದೆಯಿಂದ ಎದ್ದು ಮಹಿಳೆಯರ ಸಮಸ್ಯೆ ಅಲಿಸಿ ಸೂಕ್ತ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲ್ಲಿ, ಇಲ್ಲವಾದಲ್ಲಿ ಮುಂದಾಗುವ ಯಾವುದೇ ಅನಾಹುತಕ್ಕೆ ತಾಲೂಕು ಆಡಳಿತವೇ ನೇರ ಹೊಣೆ ಎಂದರು.
ಗ್ರಾಮಸ್ಥೆ ನಾಗಮ್ಮ, ನಳಿನಾ, ಜಯಮ್ಮ, ಗೌರಮ್ಮ, ತಾಯಮ್ಮ ಇತರರು ತಾಲೂಕು ಆಡಳಿತದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯನ್ನು ತೀವ್ರವಾಗಿ ಖಂಡಿಸಿದರು.
Get real time updates directly on you device, subscribe now.
Prev Post
Comments are closed.