ತುರುವೇಕೆರೆ: ಮಹಿಳೆಗೆ ಸ್ವಾತಂತ್ರ್ಯ ಹಾಗೂ ಸಮಾನತೆ ದೊರಕುವುದರಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾನಾಯಕ್ ಅಭಿಪ್ರಾಯಪಟ್ಟರು.
ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಕಸಾಪ, ನಾಗರಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ತುಮಕೂರಿನ ವೀರ ವನಿತೆಯರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸ್ತ್ರೀ ಪುರುಷ ಬೇರೆಯಲ್ಲ, ಇಬ್ಬರೂ ಸಮಾನರು ಎಂಬ ಭಾವನೆ ಮೊಳೆಯಬೇಕಿದೆ, ಮಹಿಳೆಯ ಕಣ್ಣೀರನ್ನು ಒರೆಸಲು ಪುರುಷ ಸಮಾಜ ನಿಲ್ಲುವಂತಾಗಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಮಕೂರು ಜಿಲ್ಲೆಯ ಹೋರಾಟಗಾರ್ತಿಯರನ್ನು ಸ್ಮರಿಸುವ ಸಲುವಾಗಿ ತುಮಕೂರು ಜಿಲ್ಲೆಯ ವೀರ ವನಿತೆಯರು ಹೆಸರಿನ ಕೃತಿ ಹೊರ ತಂದಿರುವ ಪ್ರೊ.ಪುಟ್ಟರಂಗಪ್ಪನವರ ಕಾರ್ಯ ಶ್ಲಾಘನೀಯ ಎಂದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಿಕಾರಂಗ ಖಡ್ಗವಾಗಬೇಕಿದೆ, ಇತ್ತೀಚೆಗೆ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಮುಲಾಜಿಗೊಳಗಾಗುತ್ತಿವೆ ಎಂಬ ಕಳಂಕದ ಮಾತುಗಳು ಕೇಳಿ ಬರುತ್ತಿವೆ, ಬಲಿಷ್ಠ ಸಮಾಜ ನಿರ್ಮಾಣ ಮಾಡುವ ಕಾಯಕದಲ್ಲಿ ಪತ್ರಿಕಾರಂಗ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ, ಶೋಷಿತರ ಅಸಹಾಯಕರ ಧ್ವನಿಯಾಗಲಿ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಶೋಷಣೆಯ ವಿರುದ್ಧ ಪ್ರತಿಭಟಿಸುವ ಗುಣ ವಚನಕಾರರ ಕಾಲದಲ್ಲಿ ಅಕ್ಕನಿಂದ ಆರಂಭವಾಗಿತ್ತು, ಒಂಟಿ ಮಹಿಳೆಯ ಮನೆಗೆಲಸ ಮಾಡುವ, ಕೂಲಿ ಮಹಿಳೆಯ ಸಂವೇದನೆಗೆ ಧ್ವನಿಯಾಗುವ ಸಂಘಟನೆಗಳ ಅಗತ್ಯವಿದೆ, ಗ್ರಾಮೀಣ ಮಹಿಳೆಯರಲ್ಲಿ ಆತ್ಮಸೈರ್ಯ ತುಂಬುವ ಕೆಲಸವಾಗಬೇಕಿದೆ ಎಂದರು.
ತುಮಕೂರಿನ ವೀರವನಿತೆಯರು ಕೃತಿಕಾರ ಪ್ರೊ.ಪುಟ್ಟರಂಗಪ್ಪ ಮಾತನಾಡಿ, ಸುಸ್ಥಿರ ನಾಳೆಗಾಗಿ ಮಹಿಳಾ ದಿನಾಚರಣೆಗಳು ಆಚರಣೆಗೊಂಡರಷ್ಟೇ ಸಾಲದು, ಲಿಂಗಭೇದ ತಾರತಮ್ಯ, ಮಹಿಳೆ ನಿರ್ಭಯವಾಗಿ ಬದುಕುವ ದಿನಗಳು ಬರುವಂತಾಗಬೇಕು, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಅಂತಹ ಮಹಿಳೆಯರನ್ನು ಗುರುತಿಸಿ ಶ್ಲಾಘಿಸುವ ಕೆಲಸವಾಗಬೇಕಿದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜಿಲ್ಲೆಯ ಮಹಿಳೆಯರ ತ್ಯಾಗ ಸ್ಮರಿಬೇಕೆಂಬ ನಿಟ್ಟಿನಲ್ಲಿ ತುಮಕೂರಿನ ವೀರ ವನಿತೆಯರು ಕೃತಿ ರಚಿಸಿದ್ದಾಗಿ ಹೇಳಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ರಂಗೋಲಿ, ದೇಶಭಕ್ತಿ ಗೀತೆ, ಚರ್ಚಾ ಸ್ಪರ್ಧೆ ವಿಜೇತ ಮಹಿಳೆಯರಿಗೆ ಸಮಾಜ ಸೇವಕ ಎಂ.ನಾರಾಯಣಗೌಡ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಮಹಿಳೆಯರನ್ನು ಕವಯತ್ರಿ ಕಲಾಶ್ರೀ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ವಹಿಸಿದ್ದರು. ಸಂಚಾಲಕರಾದ ಉಷಾ ಶ್ರೀನಿವಾಸ್, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಹೆಚ್.ಧನಪಾಲ್, ಕಸಾಪ ಗೌರವಾಧ್ಯಕ್ಷ ಪಿ.ಹೆಚ್.ಧನಪಾಲ್, ಪ್ರಾಂಶುಪಾಲ ಕಾಂತರಾಜ್, ಡಾ.ನವೀನ್, ಜಿಲ್ಲಾ ಕಸಾಪ ಸಲಹೆಗಾರ ಪ್ರೊ.ಗಂಗಾಧರ ದೇವರಮನೆ, ರಂಗಕರ್ಮಿ ಅಮಾನಿಕೆರೆ ಮಂಜುನಾಥ್, ಕೆಂಪರಾಜು, ಕಾರ್ಯದರ್ಶಿ ದಿನೇಶ್, ಷಣ್ಮುಖಪ್ಪ, ಸಿಐಟಿಯು ಕಾರ್ಯದರ್ಶಿ ಸತೀಶ್ ಮತ್ತಿತರಿದ್ದರು.
ಮಹಿಳಾ ಸ್ವಾತಂತ್ರ್ಯದಿಂದ ದೇಶದ ಅಭಿವೃದ್ಧಿ: ಲಲಿತಾನಾಯಕ್
Get real time updates directly on you device, subscribe now.
Prev Post
Next Post
Comments are closed.