ತುಮಕೂರು: ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಿದ್ದರೂ ಪುರುಷರ ಸಂಖ್ಯೆಯೊಂದಿಗೆ ತುಲನೆ ಮಾಡಿದಾಗ ಗಣನೀಯವಾಗಿ ಕಡಿಮೆ ಇರುವುದು ಕಂಡು ಬರುತ್ತಿದೆ, ದೇಶದ ಪ್ರತಿಯೊಬ್ಬ ಪ್ರಜೆಗಳ ಆಲೋಚನೆಗಳು ಪುರುಷ- ಸ್ತ್ರೀ ಸಮಾನತೆ ಬೆಳೆಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದರು.
ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ತಾಂತ್ರಿಕ ವಸ್ತು ಪ್ರದರ್ಶನ ವಿ ಕಾನ್‌ಎಕ್ಸ್ಪೋ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯಲ್ಲಿ ತಾಯಿಯ ಕಾರ್ಯ ವೇತನ ರಹಿತ ನಿರಂತರ ಕೆಲಸವಾಗಿದ್ದು ಮಹತ್ವ ಪೂರ್ಣವಾಗಿದೆ, ಹಾಗಾಗಿ ತಾಯಿಗೆ ಮೊದಲು ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಬೇಕು ಎಂದರು.
ಅಂಕಿತ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಖಾ ಬಾಬು ಮಾತನಾಡಿ, ಲಿಂಗ ಸಮಾನತೆಯಂತಹ ಮಹತ್ ಉದ್ದೇಶಗಳು ನಮ್ಮಗಳ ಕುಟುಂಬದಿಂದಲೇ ಪ್ರಾರಂಭವಾಗಬೇಕು, ಮಹಿಳೆಯರು ಸಾಧನೆ ಮಾಡದೇ ಇರುವ ಕ್ಷೇತ್ರವೇ ಇಲ್ಲ, ಹಾಗಾಗಿ ಯುವತಿಯರು ಯಾವ ಸಂದರ್ಭದಲ್ಲಿಯೂ ಅಂಜದೆ, ಧೃಡ ನಿರ್ಧಾರದೊಂದಿಗೆ ಮುನ್ನುಗ್ಗಬೇಕೆಂದು ತಿಳಿಸಿದರು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರತಿಯೊಂದು ಹಂತಗಳಲ್ಲಿಯೂ ಬಹಳ ಪ್ರಮುಖವಾದುದು, ಹಾಗಾಗಿ ಅವರನ್ನು ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆ ಸಮಾಜದಲ್ಲಿ ಮರೆಯಾಗಬೇಕು, ಮುಂದುವರಿದ ರಾಷ್ಟ್ರಗಳಲ್ಲಿ ಇರುವಂತೆ ಲಿಂಗ ಸಮಾನತೆಯ ಭಾವನೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಭೀಷ್ಮ ಕೆ.ಬಿ.ಜಯಣ್ಣ ಮಾತನಾಡಿ, ನಮ್ಮ ದೇಶದ ಮಹಿಳೆಯರು ಪ್ರಾಚೀನ ಕಾಲದಿಂದಲೂ ಅಪ್ರತಿಮ ಧೈರ್ಯ, ಸ್ಥೈರ್ಯ ಹೊಂದಿದವವರಾಗಿದ್ದಾರೆ, ರಾಷ್ಟ್ರದ ಸ್ವಾತಂತ್ರ್ಯ ಪಡೆಯುವಲ್ಲಿಯೂ ಮಹಿಳೆಯರ ಪಾತ್ರ ಅಗ್ರಮಾನ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಸಿಎ ಪದವಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಸಂಸ್ಥೆಯ ವಿದ್ಯಾರ್ಥಿನಿ ಚೈತ್ರ ಅವರನ್ನು 10 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ನಾಣ್ಯ ನೀಡಿ ಪುರಸ್ಕರಿಸಲಾಯಿತು. ಇವರೊಂದಿಗೆ ಬಿಸಿಎ ಪದವಿ ಹಾಗೂ ಎಂಕಾಂ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಗಳಿಸಿರುವ ಇತರೇ ವಿದ್ಯಾರ್ಥಿಗಳನ್ನು ಸಹ ಪುರಸ್ಕರಿಸಲಾಯಿತು. ಜೊತೆಗೆ ಪ್ರತಿ ಸೆಮಿಸ್ಟರ್ ಗಳಲ್ಲಿಯೂ ಅತಿ ಹೆಚ್ಚು ಅಂಕ ಗಳಿಸಿದ ಬಿಕಾಂ ಮತ್ತು ಬಿಸಿಎ ಪದವಿಯ ಒಟ್ಟು 6 ವಿದ್ಯಾರ್ಥಿಗಳಿಗೆ ತಲಾ 25000 ರೂಪಾಯಿ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ವಿಜ್ಞಾನ, ವಾಣಿಜ್ಯ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಹಾಗೂ ಮಹಿಳಾ ದಿನಾಚರಣೆ ಕುರಿತಾದ ಪೋಸ್ಟರ್ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಕೆ.ಪಿ.ನವೀನ್ ಕುಮಾರ್, ಸಂಯೋಜಕ ಸಿದ್ದೇಶ್ವರಸ್ವಾಮಿ, ಉಪ ಪ್ರಾಂಶುಪಾಲ ಎ.ಪಿ.ಪ್ರಶಾಂತ್ ಕುಮಾರ್, ಬೋಧಕ ಹಾಗು ಬೋಧಕೇತರ ವರ್ಗದವರು ಹಾಜರಿದ್ದರು.
ಸ್ತ್ರೀ, ಪುರುಷ ಸಮಾನತೆಯಿಂದ ಸಮ ಸಮಾಜ ಸಾಧ್ಯ
Get real time updates directly on you device, subscribe now.
Prev Post
Comments are closed.