ಮಹಿಳೆಯರ ಬಗ್ಗೆ ಕೀಳರಿಮೆ ಸಲ್ಲದು: ಸಂಧ್ಯಾರೆಡ್ಡಿ

116

Get real time updates directly on you device, subscribe now.

ತುಮಕೂರು: ಮುಟ್ಟು, ಮೈಲಿಗೆ, ಸೂತಕದ ಹೆಸರಿನಲ್ಲಿ ಮಹಿಳೆಯರನ್ನು ಕಳಂಕಿತ ಪ್ರಜೆಯನ್ನಾಗಿಯೇ ನೋಡಲಾಗುತ್ತಿದೆ, ಈ ಕೀಳು ಮನೋಭಾವ ನಿವಾರಣೆಯಾಗದ ಹೊರತು ಸಮಾನತೆಗೆ ಅರ್ಥವಿಲ್ಲ ಎಂದು ಖ್ಯಾತ ಲೇಖಕಿ, ಜಾನಪದ ತಜ್ಞೆ ಡಾ.ಕೆ.ಆರ್‌.ಸಂಧ್ಯಾರೆಡ್ಡಿ ವಿಶ್ಲೇಷಿಸಿದರು.

ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸಬಲೀಕರಣ ಕೋಶ ಮತ್ತು ಐಕ್ಯೂಎಸಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮಹಿಳೆ ಮುಟ್ಟಾಗುವುದು ಒಂದು ನೈಸರ್ಗಿಕ ಸಹಜ ಕ್ರಿಯೆ. ಇದಕ್ಕೆಲ್ಲ ಅದರದ್ದೇ ಆದ ವೈಜ್ಞಾನಿಕ ಹಿನ್ನೆಲೆ ಇದೆ. ಇದೆಲ್ಲ ಇಲ್ಲದೆ ಹೋದರೆ ಸಮಾಜವೇ ವೃದ್ಧಿಸುವುದಿಲ್ಲ. ಹೀಗಿದ್ದರೂ ಮಹಿಳೆಯರ ಬಗ್ಗೆ ಅನಾರೋಗ್ಯಕರ ಚರ್ಚೆ ನಡೆಯುತ್ತದೆ. ಮಂದಿರಗಳಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಮಹಿಳೆಯರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಇಂದಿಗೂ ಮಹಿಳೆ ಎರಡನೇ ದರ್ಜೆಯ ಪ್ರಜೆಯಾಗಿಯೇ ಉಳಿದಿದ್ದಾಳೆ ಎಂದರು.
ಮಹಿಳೆ ಮನೆಯ ಒಳಗೆ ಮತ್ತು ಹೊರಗೆ ಕೆಲಸ ಮಾಡಿದರೂ ಆಕೆಗೆ ಕೆಲಸವಿಲ್ಲ ಎಂಬ ಬಿರುದುಗಳು ಸಾಮಾನ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನ ನಿರ್ವಹಣೆ ಮಹಿಳೆಯದ್ದಾಗಿದೆ. ಜಾಹೀರಾತು, ಸಿನಿಮಾ ಪ್ರಪಂಚದ ಜೊತೆಗೆ ಮಾಧ್ಯಮಗಳೂ ಸಹ ಮಹಿಳೆಯರ ಬಗ್ಗೆ ತಪ್ಪು ಕಲ್ಪನೆಗಳು ಬಿಂಬಿತವಾಗುತ್ತಿವೆ. ಯಾರೋ ಗರ್ಭಿಣಿಯಾಗುವುದನ್ನು ವೈಭವೀಕರಿಸುವ ಮಾಧ್ಯಮಗಳು ನಿಜವಾದ ಸಾಧಕರು ಮತ್ತು ಅವರ ಸಾಮಾಜಿಕ ಕಾಳಜಿಯನ್ನು ಗುರುತಿಸುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ಸಂಘಟಿತರಾಗಿ ಹೋರಾಡುತ್ತಾ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದರು.
ಆಶಯ ಭಾಷಣ ಮಾಡಿದ ಲೇಖಕಿ ಹಾಗೂ ಮಹಿಳಾ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕಿ ಬಾ.ಹ. ರಮಾಕುಮಾರಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ವಿಘಟನೆಯತ್ತ ಸಾಗುತ್ತಿವೆ. ಸಾಮಾಜಿಕ ಕಾಳಜಿ ಮತ್ತು ಮಹಿಳೆಯರ ಬಗೆಗಿನ ಗೌರವ ಕೇವಲ ಭಾಷಣಕ್ಕೆ ಸೀಮಿತವಾಗುತ್ತಿವೆ. ದೌರ್ಜನ್ಯಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಮಹಿಳಾ ದಿನಾಚರಣೆ ಆರಂಭವಾದದ್ದೇ ಶೋಷಿತ ಮಹಿಳೆಯರನ್ನು ಶೋಷಣೆ ಮುಕ್ತರನ್ನಾಗಿಸಲು. ಈ ನಿಟ್ಟಿನಲ್ಲಿ ಹೆಚ್ಚು ಚಿಂತನೆಗಳು ನಡೆಯಬೇಕಿದೆ ಎಂದರು.
ಕಳೆದ 30 ವರ್ಷಗಳಿಂದ ತುಮಕೂರಿನಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ ಕಾನೂನು ವಿದ್ಯಾರ್ಥಿಗಳಿಂದ ಜನ್ಮತಾಳಿ ಹಲವು ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದೆ. ಇದರ ಅಡಿಯಲ್ಲಿ ಸಾಂತ್ವನ ಕೇಂದ್ರ ನಿರ್ವಹಿಸುತ್ತಿದ್ದು, ಸಾವಿರಾರು ಮಹಿಳೆಯರು ನ್ಯಾಯ ದೊರಕಿಸಿಕೊಂಡಿದ್ದಾರೆ. ಪ್ರತಿವರ್ಷ ಮಹಿಳಾ ದಿನಾಚರಣೆಯಂದು ಮೂವರು ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಾ ಬರಲಾಗಿದೆ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಮುಖ್ಯವಾಗಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಮಹಿಳಾ ದಿನಾಚರಣೆಗಳು ಮಹಿಳೆಯರ ಆತ್ಮಶಕ್ತಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಹೊಸ ಆಲೋಚನೆಗಳಿಗೆ ನಾಂದಿ ಹಾಡುತ್ತಿರುವುದು ಸ್ವಾಗತಾರ್ಹ. ಇಂತಹ ದಿನಾಚರಣೆಗಳ ಮೂಲಕ ಮಹಿಳಾ ಶಕ್ತಿ ಮತ್ತು ಸಾಧಕರನ್ನು ತಿಳಿದುಕೊಳ್ಳುವ ಪ್ರಯತ್ನಗಳಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಟಿ.ಆರ್‌.ಲೀಲಾವತಿ ಮಾತನಾಡಿ ಬಹಳಷ್ಟು ಹೆಣ್ಣು ಮಕ್ಕಳು ಕಷ್ಟಪಟ್ಟು ತಮ್ಮ ಬಡತನದ ನಡುವೆಯೂ ಸಾಧನೆ ಮಾಡುತ್ತಿದ್ದಾರೆ. ಅಂತಹವರ ಸಾಧನೆಗಳು ಇತರರಿಗೆ ಮಾದರಿಯಾಗಲಿ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆಯಿಂದ ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಮೈದಾಳ ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ಅಧ್ಯಕ್ಷೆ ದ್ರಾಕ್ಷಾಯಣಮ್ಮ ಅವರಿಗೆ, ಚನ್ನಮ್ಮ ಚನ್ನರಾಯಪ್ಪ ನೆನಪಿನ ಮಹಿಳಾ ಚೇತನ ಪ್ರಶಸ್ತಿಯನ್ನು ಮಧುಗಿರಿಯ ಗಾಯತ್ರಿ ನಾರಾಯಣ್‌ ಅವರಿಗೆ, ಸರೋಜ ಟಿ.ಆರ್‌.ರೇವಣ್ಣ ಅವರ ಶ್ರಮಜ್ಯೋತಿ ಪ್ರಶಸ್ತಿಯನ್ನು ತುಮಕೂರಿನ ನೀಲಾವತಿ ಅವರಿಗೆ ನೀಡಿ ತಲಾ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪತ್ರಿಕಾ ವಿತರಕಿಯಾಗಿ ವ್ಯಾಸಂಗ ಮಾಡುತ್ತಿರುವ ಲಾವಣ್ಯ ಅವರನ್ನು ಗೌರವಿಸಲಾಯಿತು.
ಮಹಿಳಾ ಸಬಲೀಕರಣ ಕೋಶದ ಸಂಚಾಲಕಿ ರೇಣುಕ ಡಿ.ಆರ್‌., ಐಕ್ಯೂಎಸಿ ಸಂಚಾಲಕಿ ಡಾ.ಅನಸೂಯ ಕೆ.ವಿ., ಸಮಾಜ ಸೇವಕಿ ಎಂ.ಬಿ.ಜೀವರತ್ನ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಪದಾಧಿಕಾರಿಗಳಾದ ಸಿ.ಎಲ್‌.ಸುನಂದಮ್ಮ, ಟಿ.ಆರ್‌.ಅನಸೂಯ, ರಾಜೇಶ್ವರಿ, ಲಲಿತ ಮಲ್ಲಪ್ಪ, ಗೀತಾ ನಾಗೇಶ್‌, ಎನ್‌.ಅಕ್ಕಮ್ಮ, ಸರ್ವಮಂಗಳ ಧಾರುಕಾರಾಧ್ಯ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಪಾರ್ವತಮ್ಮ ರಾಜಕುಮಾರ, ಗಂಗಲಕ್ಷ್ಮಿ, ಅಕ್ಕಮ್ಮ ಸಂಗಡಿಗರಿಂದ ಮಹಿಳಾ ಹೋರಾಟದ ಗೀತೆಗಳು ಮೂಡಿಬಂದವು.

Get real time updates directly on you device, subscribe now.

Comments are closed.

error: Content is protected !!