ಸ್ವಚ್ಛ, ಸ್ವಸ್ಥ ಸಮಾಜಕ್ಕೆ ಮಹಿಳೆ ರಾಯಭಾರಿ: ರೇಣುಕಾ

191

Get real time updates directly on you device, subscribe now.

ತುಮಕೂರು: ಸ್ವಚ್ಛ ಪರಿಸರ ಹಾಗೂ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದ್ದು, ಎಲ್ಲಾ ರಂಗದಲ್ಲಿಯೂ ತನ್ನ ಛಾಪು ಮೂಡಿಸಿರುವ ಮಹಿಳೆ ಸ್ವಚ್ಛ ಹಾಗೂ ಸ್ವಸ್ಥ ಸಮಾಜಕ್ಕೆ ರಾಯಭಾರಿ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅಭಿಪ್ರಾಯಪಟ್ಟರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಆರೋಗ್ಯ ಕಾರ್ಯಕರ್ತೆಯರಿಗೆ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಮಕೂರು ಮಹಾನಗರ ಪಾಲಿಕೆ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗೆದ್ದಿದೆ, ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ, ತೆರಿಗೆ ಸಂಗ್ರಹ, ವೇಗವಾದ ಕಾಮಗಾರಿ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ ದಾಖಲಾರ್ಹ ಪ್ರಗತಿ ಸಾಧಿಸಿದ್ದು, ತುಮಕೂರಿನ ಎಲ್ಲಾ ಮಹಿಳೆಯರು ಸ್ವಚ್ಛ ತುಮಕೂರು ಕಟ್ಟುವಲ್ಲಿ ಭಾಗಿಯಾಗಬೇಕು ಎಂದರು.
ಎಸ್‌ಎಂಸಿಆರ್‌ಐ ಪ್ರಾಂಶುಪಾಲರಾದ ಡಾ.ಶಾಲಿನಿ ಎಂ. ಮಾತನಾಡಿ ಮಹಿಳೆಯ ಬಗ್ಗೆ ಧ್ವನಿ ಎತ್ತಲಿಕ್ಕೆ ಮಹಿಳೆಯರೇ ಸೇರಿಕೊಂಡು ಮಹಿಳಾ ದಿನಾಚರಣೆ ಪ್ರಾರಂಭಿಸಲಾಯಿತು, ನಂತರ ಮಹಿಳೆಯರ ಸಂಘಟನಾ ಶಕ್ತಿ ನೋಡಿ ನಂತರ ಮಹಿಳಾ ದಿನಾಚರಣೆಗೆ ವಿಶ್ವಮಾನ್ಯತೆ ದೊರೆಯಿತು, ನಾವು ಕೂಡ ಇಂದು ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಯನ್ನಾಗಿಸದೆ ಸಮುದಾಯದ ಆರೋಗ್ಯಕ್ಕೆ ದುಡಿಯುವ ಆರೋಗ್ಯ ಕಾರ್ಯಕರ್ತೆಯರಿಗೆ ಅರಿವು ಮೂಡಿಸುವುದೇ ನಮ್ಮ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಿದ್ಧಗಂಗಾ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ ಮಹಿಳೆ ಕುಟುಂಬದಲ್ಲಿ ಶಿಕ್ಷಕಿ, ಆರೋಗ್ಯ ಅಧೀಕ್ಷಕಿ, ಗೃಹ ನಿರ್ಮಾಣದಲ್ಲಿ ಅಭಿಯಂತರೆ, ಸೋತಾಗ ಆತ್ಮವಿಶ್ವಾಸ ತುಂಬುವ ಸ್ನೇಹಿತೆ, ತಾಯಿಯಾಗಿ ಹೀಗೆ ಪ್ರತಿಯೊಂದು ಪಾತ್ರವನ್ನು ನಿಭಾಯಿಸುತ್ತಾಳೆ, ಇದಲ್ಲದೆ ಪುರುಷನಷ್ಟೇ ಸಮಾನವಾಗಿ ದುಡಿದು ಸಮಾಜ ನಿರ್ಮಾಣದಲ್ಲಿ ತನ್ನ ಅಮೂಲ್ಯ ಕೊಡುಗೆ ನೀಡುತ್ತಿದ್ದಾಳೆ ಎಂದರು.
ಎಸ್‌ಎಂಸಿಆರ್‌ಐ ನಿರ್ದೇಶಕ ಡಾ.ಎಸ್‌.ಪರಮೇಶ್‌ ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಮಹಿಳೆಯರ ಆರೋಗ್ಯಕ್ಕೆ ವಿಶೇಷ ಹೆಲ್ತ್ ಪ್ಯಾಕೇಜ್‌ ಪ್ರತಿವರ್ಷ ನೀಡುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಆದ್ಯತೆ ಕೊಡದೆ ಕುಟುಂಬದ ಕಾಳಜಿ ಮಾಡುವ ಹೆಣ್ಣು ಇಂತಹ ಸೌಲಭ್ಯ ಪಡೆದುಕೊಳ್ಳುವ ಮೂಲಕ ತನ್ನ ಕಾಳಜಿಯೂ ಮಾಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಅರಿವು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗಾಗಿ ವಿಶೇಷ ಚಟುವಟಿಕೆ ನಡೆದವು.
ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್‌ ಮಾತನಾಡಿದರು. ಮೆಡಿಕಲ್‌ ಸೂಪರಿಂಡೆಂಟ್‌ ಡಾ.ನಿರಂಜನ ಮೂರ್ತಿ, ಸಿಇಓ ಡಾ.ಸಂಜೀವ್‌ ಕುಮಾರ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!