ಮಹಿಳೆಯರಿಂದ ಸುಸ್ಥಿರ ಸಮಾಜ ನಿರ್ಮಾಣ

ಪ್ರತಿಯೊಬ್ಬರೂ ಮಾತೃಮೂರ್ತಿಯನ್ನು ಗೌರವಿಸಿ: ವೈ.ಎಸ್‌.ಪಾಟೀಲ್

149

Get real time updates directly on you device, subscribe now.

ತುಮಕೂರು: ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅಗ್ರಗಣ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ತಿಳಿಸಿದರು.

ನಗರದ ಬಾಲಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ ಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯಗಳಡಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರಾಣಗಳಿಂದಲೂ ಹೆಣ್ಣು ಪ್ರಮುಖ ಸ್ಥಾನಮಾನ ಪಡೆಯುತ್ತ ಬಂದಿದ್ದಾಳೆ, ಆದರೆ ಇತ್ತೀಚಿಗೆ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯಂತಹ ಪಿಡುಗುಗಳ ಮೂಲಕ ಹೆಣ್ಣು ಕುಲವನ್ನು ನಾಶ ಮಾಡುವ ಕಾರ್ಯ ಅಮಾನುಷವಾಗಿದೆ ಎಂದರು.
ನಾವು ಹುಟ್ಟಿ ಬೆಳೆಯುವವರೆಗೂ ತಾಯಿಯ ಪಾತ್ರ ಮಹತ್ವತೆ ಪಡೆದುಕೊಂಡಿರುತ್ತದೆ, ನಾವು ಸಾಯುವವರೆಗೂ ತಾಯಿಯ ಆಶ್ರಯದ ಆಸರೆಯ ನೆರಳಲ್ಲೆ ನಮ್ಮ ಬದುಕು ನಿಂತಿರುತ್ತದೆ, ತಾನು ಕಷ್ಟ ಪಟ್ಟು ಮಾನವೀಯ ಮೌಲ್ಯ, ಸದ್ಗುಣಗಳ ಸದಾಚಾರ ಕಲಿಸುವ ಶಾಲೆ ಎಂದರೆ ಅದು ತಾಯಿ ಮಾತ್ರ, ದುರಂತವೆಂದರೆ ಮಕ್ಕಳು ಹೆತ್ತವಳನ್ನೇ ಶೋಷಿಸುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ, ಮಹಿಳಾ ರೂಪಿ ತಾಯಿ ದೇವರಿಗೆ ಸಮಾನಳು, ಪ್ರತಿಯೊಬ್ಬರೂ ಅವಳನ್ನು ಗೌರವಿಸಿ ಪೂಜಿಸಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಓ ಡಾ.ವಿದ್ಯಾಕುಮಾರಿ ಮಾತನಾಡಿ ಇಂದಿನ ದಿನಮಾನದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಹಗಲು ರಾತ್ರಿಯೆನ್ನದೆ ಕಷ್ಟ ಕಾರ್ಪಣ್ಯಗಳನ್ನ ಲೆಕ್ಕಿಸದೆ ಶ್ರಮ ವಹಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ, ಅಂತಹ ಮಹನೀಯ ಶ್ರಮಜೀವಿ ಹೆಣ್ಣು ಮಕ್ಕಳಿಗೆ ಎಂದು ಮೌಲ್ಯಯುತ ಗೌರವ ದೊರೆಯುತ್ತಿದೆಯೋ ಅಂದು ಮಹಿಳಾ ದಿನಾಚರಣೆಗಳಿಗೆ ನಿಜವಾದ ಅರ್ಥ, ಸಾರ್ಥಕಥೆ ಸಿಗುತ್ತದೆ ಎಂದರು.
21ನೇ ಶತಮಾನದಲ್ಲೂ ಹೆಣ್ಣಿನ ಮೇಲೆ ಮಾನಸಿಕ, ದೈಹಿಕ ದೌರ್ಜನ್ಯ ಮರುಕಳಿಸುತ್ತಲೇ ಇವೆ, ವರದಕ್ಷಿಣೆ ಕಿರುಕುಳ, ಭ್ರೂಣ ಹತ್ಯೆ, ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳಿಗೆ ಹೆಣ್ಣು ಸಿಲುಕಿ ನರಳುವಂತಹ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ, ಮಹಿಳೆರಯರು ಶೈಕ್ಷಣಿಕವಾಗಿ 18 ರಷ್ಟು , ರಾಜಕೀಯವಾಗಿ 3 ರಷ್ಟು ಮಾತ್ರ ಪ್ರಾತಿನಿಧ್ಯ ಸಾಧಿಸಿದ್ದಾಳೆ, ಇಪ್ಪತ್ತು ಪುರುಷರಲ್ಲಿ ಓರ್ವ ಮಹಿಳೆ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಳಷ್ಟೆ, ಆ ಹಿನ್ನೆಲೆ ನಿರಾಶರಾಗದೆ ಮಹಿಳಾ ಶಕ್ತಿ ತಮ್ಮ ಆಲೋಚನಾ ಶಕ್ತಿಯನ್ನು ಬದಲಾಯಿಸಿಕೊಂಡು ಸಮಾನತೆ ಸಾರುವ ಪ್ರಯತ್ನ ಮಾಡಬೇಕಿದೆ, ಲಿಂಗ ಸಮಾನತೆ ಸಾಧಿಸುತ್ತೆವೆಯೋ ಅಂದು ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಇಲಾಖಾ ಉಪ ನಿರ್ದೇಶಕ ಶ್ರೀಧರ್‌ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ, ಪ್ರತಿಯೊಬ್ಬ ಪುರುಷರ ಹಿಂದೆ ಮಹಿಳೆಯ ಪಾತ್ರ ಅಗ್ರಗಣ್ಯ ಎಂದು ತಿಳಿಸಿದರು.
ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ್‌ ಮಾತನಾಡಿ, ಪುರುಷ ಮಹಿಳೆಯೆನ್ನುವ ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ತಾಯ್ತನದ ಭಾವನೆಗಳನ್ನ ತೋರಬೇಕು, ಕ್ರೀಯಾಶೀಲ ಚಟುವಟಿಕೆಗಳ ಕಟ್ಟುವಿಕೆಯ ಪಾತ್ರದಲ್ಲಿ ತಾಯಿಂದಿಯರು, ಸಹೋದರಿಯರು, ಆಶಾ ಕಾರ್ಯಕರ್ತೆಯರು ಹಲವರು ಕಾಣ ಸಿಗುತ್ತಾರೆ, ಸ್ತ್ರೀ ಸಮುದಾಯ ಸಮಾಜಕ್ಕೆ ಕೊಡುಗೆ ಏನು ಕೊಡಬೇಕು ಎಂದು ಮನನ ಮಾಡಿಕೊಳ್ಳಬೇಕು, ಜೊತೆಗೆ ರಾಜಕೀಯ ಪ್ರವೇಶ ಮಾಡುವ ಮೂಲಕ ಹೆಣ್ಣಿನ ಸ್ಥಿರತೆ ಕಾಪಾಡಬೇಕು ಎಂದರು.
ಜಂಟಿ ಕೃಷಿ ಉಪನಿರ್ದೇಶಕಿ ರಾಜ ಸುಲೋಚನಾ ಮಾತನಾಡಿ, ಮನೆಗಳಲ್ಲಿ ಪ್ರತಿದಿನ ನಿರ್ವಹಣೆಯ ಸ್ಥಾನ ತುಂಬಾ ಶಿಸ್ತುಬದ್ಧವಾಗಿ ನಿರ್ವಹಿಸುವ ಸಹನಾಶೀಲಳು ಹೆಣ್ಣು, ಅಂತಹ ಸೌಮ್ಯ ಸ್ವಭಾವದ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ತಾಲ್ಲೂಕಿನಿಂದ ತಲಾ ಒಬ್ಬೊಬ್ಬರಂತೆ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸಲಾಯಿತು.
ಸ್ವ ಸಹಾಯ ಸಂಘಗಳು ಉತ್ಪಾದಿಸಿದ ವಸ್ತುಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿ ವಸ್ತುಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಡಿಐಸಿಎಲ್‌ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌, ಮಹಿಳಾ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ್‌, ಡಿಡಿ ಶಿವಕುರ್ಮಾ, ಕೊರಟಗೆರೆ ಸಿಡಿಪಿಒ ಅಂಬಿಕಾ, ಮಧುಗಿರಿ ಸಿಡಿಪಿಒ ಅನಿತ, ಅಧಿಕಾರಿಗಳಾದ ರಮೇಶ್‌, ಅನುಷಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!