ಹೈನುಗಾರರ ಹಿತ ಕಾಯಲು ಹಾಲಿನ ದರ ಪರಿಷ್ಕರಣೆ

130

Get real time updates directly on you device, subscribe now.

ತುರುವೇಕೆರೆ: ಹಾಲಿನ ದರ ಪರಿಷ್ಕರಿಸುವ ಮೂಲಕ ಜಿಲ್ಲೆಯ ಹೈನುಗಾರರಿಗೆ ಯುಗಾದಿಗೂ ಮುನ್ನ ಸಿಹಿ ಸುದ್ದಿ ನೀಡಲಾಗುವುದು ಎಂದು ತುಮುಲ್‌ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.

ಪಟ್ಟಣದಲ್ಲಿ ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ವ್ಯಾಪ್ತಿಯ ಹೈನುಗಾರರಿಗೆ ರಾಸು ವಿಮೆ ಪರಿಹಾರದ ಚೆಕ್‌ ಹಾಗೂ ಕೋವಿಡ್‌ನಿಂದ ಮೃತಪಟ್ಟ ಹೈನುಗಾರರ ಕುಟುಂಬಕ್ಕೆ ಚೆಕ್‌ ವಿತರಿಸಿ ಮಾತನಾಡಿ, ದರ ಪರಿಷ್ಕರಣೆ ಮಾಡಬೇಕೆಂಬ ತುಮುಲ್‌ ಹೈನುಗಾರರ ಒತ್ತಾಸೆಯಾಗಿತ್ತು, ಈ ಹಿನ್ನಲೆಯಲ್ಲಿ ಇದೇ ತಿಂಗಳ 15 ರಂದು ಆಡಳಿತ ಮಂಡಳಿ ಸಭೆ ಕರೆಯಲಾಗಿದೆ, ಈ ಸಭೆಯಲ್ಲಿ ದರ ಪರಿಷ್ಕರಣೆ ಕುರಿತಂತೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು, ಮಾರ್ಚ್‌ 16 ರಂದು ದರ ಪರಿಷ್ಕರಣೆ ಕುರಿತಾದ ಅಧಿಕೃತ ಮಾಹಿತಿ ಪ್ರಕಟಿಸಲಾಗುವುದು ಎಂದರು.
ಈ ಹಿಂದಿನ ದಿನಗಳಲ್ಲಿ ತುಮುಲ್‌ ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿತ್ತು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಹೈನುಗಾರರಿಗೆ ಹಾಲಿನ ಬಾಬ್ತನ್ನು ಬಾಕಿ ಉಳಿಸದಂತೆ ಪಾವತಿಸಲಾಗಿತ್ತು, ಕೋವಿಡ್ ನಿಂದ ಮೃತಪಟ್ಟ ಹೈನುಗಾರರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ತಲಾ ಒಂದು ಕುಟುಂಬಕ್ಕೆ 1 ಲಕ್ಷ ರೂ. ನಂತೆ 123 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ, ರಾಸುಗಳು ಅಕಾಲಿಕ ಮರಣಕ್ಕೆ ತುತ್ತಾದಾಗ ಹೈನುಗಾರರು ನಷ್ಟ ಅನುಭವಿಸಬಾರದೆಂಬ ನಿಟ್ಟಿನಲ್ಲಿ ವಿಮೆ ಮಾಡಿಸಲು ತುಮುಲ್‌ ಮುಂದಾಗಿದೆ, ಇತ್ತೀಚೆಗೆ ಮರಣ ಹೊಂದಿದ ರಾಸುಗಳಿಗೆ ಪರಿಹಾರದ ಚೆಕ್‌ ವಿತರಿಸಿ ಕ್ರಮ ವಹಿಸಲಾಗಿದೆ, ಜಿಲ್ಲೆಯಾದ್ಯಂತ ಇರುವ ಹಾಲು ಉತ್ಪಾದಕರ ಸಂಘಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ವ್ಯಾಪ್ತಿಯ ವಿವಿಧ ಕಾರಣಗಳಿಂದ ಮರಣ ಹೊಂದಿದ್ದ 7 ಪಡ್ಡೆ ರಾಸುಗಳಿಗೆ ತಲಾ 10 ಸಾವಿರದಂತೆ, ರಾಸು ಮರಣಕ್ಕೆ 13,30,000 ರೂ. ಪರಿಹಾರದ ಚೆಕ್‌, ಕೋವಿಡ್‌ನಿಂದ ಮರಣ ಹೊಂದಿದ್ದ ಕಣಕೂರು ಸಂಘದ ವ್ಯಾಪ್ತಿಯ ಹೈನುಗಾರರ ಕುಟುಂಬದ ಸದಸ್ಯರಿಗೆ 1 ಲಕ್ಷ ರೂ. ಪರಿಹಾರದ ಚೆಕ್‌, ಲೋಕಮ್ಮನಹಳ್ಳಿ ನೂತನ ಕಟ್ಟಡಕ್ಕೆ 2ನೇ ಹಂತದ ಸಹಾಯಧನ 2 ಲಕ್ಷ ರೂ. ಹಾಗೂ ದ್ವಾರನಹಳ್ಳಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದ 2 ಲಕ್ಷ ರೂ. ಚೆಕ್‌ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ಮಂಜುನಾಥ್‌, ಕಿರಣ್‌ಕುಮಾರ್‌, ದಿವಾಕರ್‌, ನೌಕರರ ಒಕ್ಕೂಟದ ಅಧ್ಯಕ್ಷ ಪುಟ್ಟಯ್ಯ ಸೇರಿದಂತೆ ತಾಲೂಕಿನ ವಿವಿಧ ಸಂಘಗಳ ಹೈನುಗಾರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!