ತುಮಕೂರು: ಕಳೆದ ಒಂದು ತಿಂಗಳಿನಿಂದ ಗ್ರಾಮಕ್ಕೆ ನುಗ್ಗಿ ನಾಯಿ, ಮೇಕೆ, ಕರುಗಳ ಮೇಲೆ ದಾಳಿ ಮಾಡುತ್ತಿದ್ದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ರೈತರಪಾಳ್ಯದಲ್ಲಿ ನಡೆದಿದೆ.
ತಾಲ್ಲೂಕಿನ ಗೂಳೂರು ಹೋಬಳಿಯ ರೈತರಪಾಳ್ಯ, ಹರಳೂರು, ಜೋಲಮಾರನಹಳ್ಳಿ ಗ್ರಾಮದ ಸುತ್ತಮುತ್ತ ಸುಮಾರು 3 ರಿಂದ 4 ವರ್ಷದ ಚಿರತೆ ಓಡಾಡುತ್ತಾ ಜನರಲ್ಲಿ ತೀವ್ರ ಭಯ ಭೀತಿ ಮೂಡಿಸಿತ್ತು.
ರೈತರಪಾಳ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಈ ಚಿರತೆ ಓಡಾಡುತ್ತಾ ನಾಯಿ, ಕರು, ಮೇಕೆಗಳನ್ನು ಕೊಂದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು, ಇದರಿಂದ ಈ ಭಾಗದ ರೈತರು, ಸಾರ್ವಜನಿಕರು ಸಂಜೆ ವೇಳೆ ಮನೆಯಿಂದ ಹೊರ ಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಗ್ರಾಮದ ಜನತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಚಿರತೆಯನ್ನು ಶೀಘ್ರವೇ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಈ ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಮಾರ್ಗದರ್ಶನದಲ್ಲಿ ರೈತರ ಪಾಳ್ಯಕ್ಕೆ ತೆರಳಿ ಮೊದಲು ಗ್ರಾಮದ ಮನೆಯೊಂದರ ಹಿಂಭಾದ ಬಳಿ ಚಿರತೆ ಸೆರೆಗಾಗಿ ಬೋನ್ ಇಟ್ಟಿದ್ದರು, ಆದರೆ ಚಿರತೆ ಅಲ್ಲಿ ಇಟ್ಟಿದ್ದ ಬೋನಿಗೆ ಬೀಳದ ಕಾರಣ ಮತ್ತೆ ಬೋನ್‌ನನ್ನು ಅದೇ ಗ್ರಾಮದ ರೈತರೊಬ್ಬರ ಜಮೀನಿನ ಸಮೀಪ ಕಳೆದ ಒಂದು ವಾರದಿಂದ ಇಟ್ಟಿದ್ದರು.
ಮಧ್ಯರಾತ್ರಿ ಆಹಾರ ಅರಸಿ ಬಂದಿರುವ ಚಿರತೆ ಬೋನ್ ಒಳಗೆ ಹೋಗುತ್ತಿದ್ದಂತೆ ಬೋನ್ ನ ಬಾಗಿಲು ಲಾಕ್ ಆಗಿದ್ದು, ಚಿರತೆ ಸೆರೆಯಾಗುವ ಮೂಲಕ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಬೋನಿಗೆ ಬಿದ್ದಿರುವ ಚಿರತೆ ನೋಡಲು ರೈತರಪಾಳ್ಯ, ಹರಳೂರು, ಜೋಲಮಾರನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳ ಜನರು ತಂಡೋಪ ತಂಡವಾಗಿ ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು, ಜನಜಂಗುಳಿ ಕಂಡ ಬೋನ್ ಒಳಗಿದ್ದ ಚಿರತೆ ಗಾಬರಿಗೊಂಡು ಜನರತ್ತ ಘರ್ಜಿಸುತ್ತಿದ್ದ ದೃಶ್ಯ ಕಂಡು ಬಂತು. ಸೆರೆಯಾಗಿರುವ ಚಿರತೆಯನ್ನು ಅರಣ್ಯಕ್ಕೆ ಕೊಂಡೊಯ್ದು ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ನಟರಾಜು, ಉಪ ಅರಣ್ಯ ವಲಯಾಧಿಕಾರಿ ರಬ್ಬಾನಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಜನರನ್ನು ಕಾಡುತ್ತಿದ್ದ ಚಿರತೆ ಸೆರೆ
Get real time updates directly on you device, subscribe now.
Prev Post
Next Post
Comments are closed.