ದೇವಸ್ಥಾನ ಜಾಗ ಮಂಜೂರಿಗಾಗಿ ಪ್ರತಿಭಟನೆ

248

Get real time updates directly on you device, subscribe now.

ತುಮಕೂರು: ನಗರದ ಎನ್‌.ಆರ್‌.ಕಾಲೋನಿಯ ಮಾದಿಗ ಜನಾಂಗದ ಕುಲ ದೇವತೆ ಶ್ರೀದುರ್ಗಮ್ಮ ದೇವಿಯ ಮೂಲ ನೆಲೆಯಾದ ತುಮಕೂರು ಕಸಬಾ ಸರ್ವೇ ನಂ. 170 ಮತ್ತು 171ರ 1.29 ಎಕರೆ ಭೂಮಿ ಮಂಜೂರಾತಿ ಮಾಡಿ ಮಾದಿಗ ಜನಾಂಗದ ಧಾರ್ಮಿಕ ನಂಬಿಕೆಯ ದೇವಸ್ಥಾನದ ಜಾಗಕ್ಕೆ ಮುಖ್ಯದ್ವಾರ ನಿರ್ಮಿಸಿ ಎನ್‌.ಆರ್‌.ಕಾಲೋನಿ, ಅಂಬೇಡ್ಕರ್ ನಗರ, ನಿರ್ವಾಣಿ ಲೇಔಟ್‌ ಹಕ್ಕು ಪತ್ರಗಳಿಲ್ಲದ ಕುಟುಂಬಗಳಿಗೆ ಸರಳಖಾತೆ ಮಾಡಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ನಗರ ಪಾಲಿಕೆ ವಿಶೇಷ ಅನುದಾನದಲ್ಲಿ ಫಲಾನುಭವಿ ಶುಲ್ಕ ಪಾವತಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶ್ರೀದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಮತ್ತು ಎನ್‌.ಆರ್‌.ಕಾಲೋನಿ ಅಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿತು.

ಈ ವೇಳೆ ಜನಾಂಗದ ಹಿರಿಯ ಮುಖಂಡ ಪ್ರೊ.ಕೆ.ದೊರೈರಾಜ್‌ ಮಾತನಾಡಿ, ತುಮಕೂರು ನಗರದ ಅಸ್ತಿತ್ವಕ್ಕೆ ಹಾಗೂ ದಲಿತ ಚಳಿವಳಿಗೆ ತನ್ನದೆ ಕೊಡುಗೆ ನೀಡಿರುವ ಎನ್‌.ಆರ್‌.ಕಾಲೋನಿಯ ಮಾದಿಗರ ಧಾರ್ಮಿಕ ಅಸ್ಮಿತೆಯ ಭಾಗವಾದ ದುರ್ಗಮ್ಮ ದೇವಸ್ಥಾನದ ಜಾಗವನ್ನು ಜಿಲ್ಲಾಡಳಿತ ಮಂಜೂರು ಮಾಡದೆ 1999 ರಿಂದ ನಿರ್ಲಕ್ಷಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ 1.29 ಎಕರೆ ಭೂಮಿ ಮಂಜೂರು ಮಾಡಿ ಮಾದಿಗ ಜನಾಂಗದ ಧಾರ್ಮಿಕ ನಂಬಿಕೆಗಳು ಹಾಗೂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಹಾಗೂ ಕೋತಿ ತೋಪಿನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾಂಸ್ಥಿಕವಾಗಿ ವರ್ಗಾಯಿಸಿ ಖಾಯಂ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಬೇಕು ಎಂದರು.
ಹಲವಾರು ಮೇಲ್ವರ್ಗದ ದೇವಸ್ಥಾನಗಳಿಗೆ ಮತ್ತು ಜನಾಂಗಕ್ಕೆ ಎಲ್ಲಾ ಕಾನೂನು ತೊಡಕು ಮೀರಿ ಸರ್ಕಾರಿ ಭೂಮಿ ಮಂಜೂರಾತಿ ಮಾಡುತ್ತಿದ್ದು ಅಸ್ಪಶ್ಯ ಜನಾಂಗದ ದುರ್ಗಮ್ಮ ದೇವಸ್ಥಾನದ ಜಾಗ ಮಂಜೂರು ಮಾಡದೆ ತಾರತಮ್ಯ ಎಸಗುತ್ತಿರುವುದು ಜಿಲ್ಲಾಡಳಿತಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಶೋಭೆ ತರುವ ವಿಚಾರವಲ್ಲ, ಹಾಗಾಗಿ ಈ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತಕ್ಕೆ 45 ದಿನಗಳ ಗಡುವು ನೀಡಿದ್ದು ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಇಡೀ ಜಿಲ್ಲೆಯ ಮಾದಿಗ ಸಮುದಾಯ ಸಂಘಟಿಸಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಹಕ್ಕುಪತ್ರ ಮತ್ತು ವಸತಿ ಸಬ್ಸಿಡಿ ಹಂಚಿಕೆ ಮಾಡಲು ನಗರಪಾಲಿಕೆ ಸದಸ್ಯರಿಂದ ಆಗ್ರಹ 19 ಮತ್ತು 20ನೇ ವಾರ್ಡ್‌ನ್ನು ಪ್ರತಿನಿಧಿಸುವ ಎನ್‌.ಆರ್‌.ಕಾಲೋನಿ ಮತ್ತು ಅಂಬೇಡ್ಕರ್‌ ನಗರದ ನಗರಪಾಲಿಕೆ ಸದಸ್ಯರಾದ ರೂಪಶ್ರೀ ಶೆಟ್ಟಾಳಯ್ಯ ಮತ್ತು ಎ.ಶ್ರೀನಿವಾಸ್‌ ಮಾತನಾಡಿ, ಬಹುತೇಕ ಬಡಜನರು ವಾಸಿಸುವ ಈ ಎರಡು ವಾರ್ಡ್‌ಗಳಲ್ಲಿ ಅವರ ತಾತ ಮುತ್ತಾತಂದಿರ ಹೆಸರುಗಳಲ್ಲಿ ಖಾತೆಗಳಿದ್ದು ವಾರಸುದಾರರಿಗೆ ಹಕ್ಕು ವರ್ಗಾವಣೆಯಾಗಿರುವುದಿಲ್ಲ, ಆದ್ದರಿಂದ ನಗರಪಾಲಿಕೆ ಮತ್ತು ಸ್ಲಂ ಬೋರ್ಡ್‌ ಜೊತೆ ಸೇರಿ ಸ್ಥಳ ಪರಿಶೀಲನೆ ಮಾಡಿ ವಾಸಸ್ಥಳ, ವಂಶವೃಕ್ಷ ಇತರೆ ದಾಖಲೆಗಳ ಆಧಾರದಲ್ಲಿ ಖಾತೆ ಮಾಡಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಶುಲ್ಕವನ್ನು ಪಾವತಿಸುವ ಜೊತೆಗೆ ಅಂಬೇಡ್ಕರ್‌ ನಗರವನ್ನು ಸ್ಲಂ ಕಾಯಿದೆ 17ರ ಪ್ರಕಾರ ಭೂ ಸ್ವಾಧೀನಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ತುಮಕೂರು ಕಸಬಾ ಗ್ರಾಮ ಸರ್ವೇ ನಂ. 170 ಮತ್ತು 171 ರಲ್ಲಿರುವ ಸರ್ಕಾರಿ ಪಡಾದ ಭೂಮಿಯ ಲಭ್ಯತೆಯನ್ನು ಸರ್ವೇ ಮಾಡಿಸಿ ದೇವಸ್ಥಾನಕ್ಕೆ ಮಂಜೂರು ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದೆಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ನಾನು ಹಲವಾರು ಬಾರಿ ಎನ್‌.ಆರ್‌.ಕಾಲೋನಿ ಮತ್ತು ಅಂಬೇಡ್ಕರ್‌ ನಗರಕ್ಕೆ ಭೇಟಿ ನೀಡಿದ್ದು ಮನೆಗಳಿಗೆ ದಾಖಲೆಗಳಿಲ್ಲದಿರುವುದರಿಂದ ಖಾತೆ ಮಾಡಲು ಸಾಧ್ಯವಾಗುತ್ತಿಲ್ಲ, ಈ ಎರಡು ಪ್ರದೇಶಗಳು ಸ್ಲಂ ಎಂದು ಘೋಷಣೆ ಆಗಿರುವುದರಿಂದ ಹಕ್ಕುಪತ್ರ ನೀಡುವ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಾತೆ ಮಾಡಿಕೊಡಲಾಗುವುದು, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಗೆ ನಗರ ಪಾಲಿಕೆಯಿಂದ ಫಲಾನುಭವಿ ಶುಲ್ಕ ಪಾವತಿಸಲು ಈಗಾಗಲೇ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕ್ರಮ ಕೈಗೊಳ್ಳಲಾಗುವುದೆಂದರು.
ಪ್ರತಿಭಟನಾ ನೇತೃತ್ವವನ್ನು ಎನ್‌.ಆರ್‌.ಕಾಲೋನಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಎ.ನರಸಿಂಹಮೂರ್ತಿ, ವಾಲೇಚಂದ್ರಯ್ಯ, ಕೆ.ನರಸಿಂಹಮೂರ್ತಿ, ಶಾಂತಕುಮಾರ್‌, ಜೈಮೂರ್ತಿ, ಲಕ್ಷ್ಮೀನಾರಾಯಣ್‌, ಕಿರಣ್‌, ಸುನಿಲ್‌, ಅರುಣ್‌, ಮೋಹನ್‌, ತಿರುಮಲಯ್ಯ, ಚಂದ್ರು, ತೇಜಸ್‌ಕುಮಾರ್‌, ಅಂಬೇಡ್ಕರ್‌ ನಗರ ಮುಖಂಡರಾದ ವಿ.ಗೋಪಾಲ್‌, ಅನ್ನಪೂರ್ಣ, ನಿರ್ವಾಣಿ ಲೇಔಟ್‌ ಮುಖಂಡರಾದ ಟಿ.ಎನ್‌.ರಾಮು. ಲಕ್ಷ್ಮೀಪುತ್ರ, ನಂಜಮ್ಮ, ಭಾಗ್ಯಮ್ಮ, ಮಹಾದೇವಮ್ಮ, ಪಲ್ಟಿಕುಮಾರ್‌ ವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!