ಹೊನ್ನ ಮಾಚನಹಳ್ಳಿಯಲ್ಲಿ ಕಲ್ಲುಗಣಿಗಾರಿಕೆ ನಿಲ್ಲಿಸಿ

ಶಾಸಕ ಡಾ.ರಂಗನಾಥ್‌ ಹೆಸರಿನಲ್ಲಿರುವ ಕ್ರಷರ್ ಗೆ ಕಡಿವಾಣ ಹಾಕಿ

1,208

Get real time updates directly on you device, subscribe now.

ತುಮಕೂರು: ಕುಣಿಗಲ್‌ ತಾಲೂಕು ಹುಲಿಯೂರು ದುರ್ಗ ಪಿ.ಹೊನ್ನಮಾಚನಹಳ್ಳಿ ಸರ್ವೆ ನಂ. 82ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲ ಗ್ರಾಮಗಳ ಜನರ ಬದುಕು ಮೂರಾಬಟ್ಟೆಯಾಗಿದ್ದು, ಜಿಲ್ಲಾಡಳಿತ ಕೂಡಲೇ ಕ್ರಷರ್ ಗೆ ನೀಡಿರುವ ಅನುಮತಿ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ನೇತೃತ್ವದಲ್ಲಿ ಕ್ರಷರ್‌ ನಡೆಯುತ್ತಿರುವ ಪಿ.ಹೊನ್ನಮಾಚನಹಳ್ಳಿಯ ಸುತ್ತಮುತ್ತಲ ಗ್ರಾಮಗಳಾದ ಬೀಸೆಗೌಡನದೊಡ್ಡಿ, ರಾಜಪ್ಪನದೊಡ್ಡಿ, ಮಠದದೊಡ್ಡಿ, ಕಾಮಿದೊಡ್ಡಿ, ಕೆಬ್ಬಳ್ಳಿ, ಉಜ್ಜಯಿನಿ, ಹಿತ್ತಲಪುರ, ನಿಡಶಾಲೆ ಹಾಗೂ ಇತರೆ ಗ್ರಾಮಗಳ ಮಹಿಳೆಯರು ಮತ್ತು ಗ್ರಾಮದ ಹಿರಿಯರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್ ಗೆ ಮನವಿ ನೀಡಿದರು.
ಈ ವೇಳೆ ಮಾತನಾಡಿದ ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್‌, ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಡಾ.ರಂಗನಾಥ್‌ ಮತ್ತು ಇತರರ ಹೆಸರಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕೊಳವೆ ಬಾವಿ ಕೊರೆಯುವ ಯಂತ್ರದಿಂದ 20-25 ಅಡಿ ಅಳದ ಗುಂಡಿ ತೋಡಿ, ಬ್ಲಾಸ್ಟಿಂಟ್‌ ನಡೆಸುವುದರಿಂದ ಕ್ರಷರ್‌ಗೆ ಕೇವಲ 80- 90 ಮೀಟರ್‌ ದೂರದಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಅಲ್ಲದೆ ನೀರಿನ ಸೆಲೆಗಳು ಚದುರಿ, ಶೇ.80 ರಷ್ಟು ನೀರಾವರಿ ಕೊಳವೆ ಬಾವಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಇದೆ, ಕ್ರಷರ್ ನಿಂದ ಬರುವ ಧೂಳು, ಈ ಭಾಗದ ಪ್ರಮುಖ ಬೆಳೆಯಾಗಿರುವ ರೇಷ್ಮೆ ಹುಳುಗಳಿಗೆ ಆಹಾರವಾದ ಹಿಪ್ಪುನೇರಳೆ ಗಿಡದ ಮೇಲಿದ್ದ ಕಲ್ಲಿನ ಕಣಗಳನ್ನು ತಿಂದು ರೇಷ್ಮೆ ಬೆಳೆ ಕೈಹತ್ತದಂತಾಗಿದೆ, ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.
ಈ ಭಾಗದ ಸುಮಾರು ಹತ್ತು ಹದಿನೈದು ಹಳ್ಳಿಗಳಿಗೆ ಇರುವುದು ಒಂದೇ ಕೆರೆ, ಆ ಕೆರೆಗೆ ಹೊಂದಿಕೊಂಡಂತೆಯೇ ಗಣಿಗಾರಿಕೆ ನಡೆಯುತ್ತಿರುವುದರಿಂದ ಧೂಳು ಕೆರೆಗೆ ತುಂಬಿ, ಇದರ ನೀರು ಕುಡಿದ ಸೀಮೆ ಹಸುಗಳು ಸಾವನ್ನಪ್ಪಿವೆ, ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದು ನೂರಾರು ಕುಟುಂಬಗಳು ಬೀದಿ ಪಾಲಾಗಿವೆ, ಈ ಬಗ್ಗೆ ಹಲವಾರು ಬಾರಿ ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ, ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಿದರೆ ದೂರದಾರರ ವಿರುದ್ಧವೇ ಇಲ್ಲ ಸಲ್ಲದ ಕೇಸು ಹಾಕುವ ಬೆದರಿಕೆಯೊಡ್ಡಿ ಕ್ರಷರ್‌ ತಂಟೆಗೆ ಹೋಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ, ಇದರ ವಿರುದ್ಧ ಹತ್ತಾರು ಗ್ರಾಮಗಳ ಮಹಿಳೆಯರು ಕಳೆದ 8 ದಿನಗಳಿಂದ ಪಿ.ಹೊನ್ನಮಾಚನಹಳ್ಳಿಯ ಕ್ರಷರ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗೂ ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರ ಅಹವಾಲು ಆಲಿಸಿಲ್ಲ, ಆದ್ದರಿಂದ ಮಾರ್ಚ್‌ 14 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಸ್ಥಳದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಆನಂದ ಪಟೇಲ್‌ ನುಡಿದರು.
ಬೀಸೆಗೌಡನದೊಡ್ಡಿ ಗ್ರಾಮದ ಗೀತಮ್ಮ, ನಾಗಮ್ಮ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕ್ರಷರ್‌ನಿಂದಾಗುತ್ತಿರುವ ತೊಂದರೆಗಳ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ, ಕ್ರಷರ್‌ ಧೂಳಿನಿಂದ ನಮ್ಮ ಬದುಕೆ ಹಾಳಾಗಿದೆ, ಕೃಷಿ, ಹೈನುಗಾರಿಕೆ ಕೈಗೆ ಬರುತ್ತಿಲ್ಲ, ಆದ್ದರಿಂದ ಮಾರ್ಚ್‌ 14 ರಂದು ಎಲ್ಲಾ ಜನರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುತ್ತೇವೆ, ನಮ್ಮ ಸಾವಿಗೆ ಗಣಿಗಾರಿಕೆ ಮತ್ತು ಜಿಲ್ಲಾಡಳಿತವೇ ಹೊಣೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಿ.ಹೊನ್ನಮಾಚನಹಳ್ಳಿ ಸುತ್ತಮುತ್ತಲ ಗ್ರಾಮಗಳ ಎನ್‌.ಎಂ.ಯೋಗೀಶ್‌, ಜಯಮ್ಮ, ಲೋಕೇಶ್‌.ಹೆಚ್‌.ಎ., ರಾಜು, ಗಂಗಮ್ಮ, ಜಯಲಕ್ಷ್ಮಿ, ಮಂಜಣ್ಣ ಹಾಗೂ ರೈತ ಸಂಘದ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!