ಶಿರಾ: ಶಿರಾ ನಗರಸಭೆಯ ಅಧ್ಯಕ್ಷ ಗಾದಿಯನ್ನು ಯಾರು ಹಿಡಿಯಲಿದ್ದಾರೆ ಎಂಬ ಪ್ರಶ್ನೆ ಕಳೆದೊಂದು ವಾರದಿಂದ ಜನರ ಮನಸ್ಸಿನಲ್ಲಿ ಕಾಡುತ್ತಿತ್ತು, ಅದಕ್ಕೆ ಗುರುವಾರ ತೆರೆಬಿದ್ದಿದ್ದು, ಇದೇ ಪ್ರಥಮ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಗರಸಭೆ ಅಧ್ಯಕ್ಷ ಗಾದಿಗೆ ಮೈತ್ರಿಕೊಂಡು ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಬಿ.ಅಂಜಿನಪ್ಪ, ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಅಂಬುಜ ನಟರಾಜ್ ಆಯ್ಕೆಯಾಗಿದ್ದಾರೆ.
ಒಟ್ಟು 31 ಸ್ಥಾನಗಳಲ್ಲಿ ಒಂದು ವಾರ್ಡ್ನಲ್ಲಿ ಚುನಾವಣೆ ನಡೆಯಲಿಲ್ಲ, ಉಳಿದ 30 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 11, ಜೆಡಿಎಸ್ 7, ಬಿಜೆಪಿ 4 ಹಾಗೂ ಪಕ್ಷೇತರರು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.
ಗುರುವಾರ ನಗರಸಭಾ ಸಭಾಂಗಣದಲ್ಲಿ ನಡೆದ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಬಿ.ಅಂಜಿನಪ್ಪ, ಕಾಂಗ್ರೆಸ್ ಪಕ್ಷದಿಂದ ಪೂಜಾ ಪೆದ್ದರಾಜು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಸಮ್ರೀನ್ ಖಾನಂ, ಬಿಜೆಪಿ ಪಕ್ಷದಿಂದ ಅಂಬುಜಾ ನಟರಾಜ್, ಉಮಾ ವಿಜಯರಾಜ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಉಮಾ ವಿಜಯರಾಜ್ ನಾಮಪತ್ರ ವಾಪಸ್ ಪಡೆದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಬ್ಬಿಬ್ಬರು ಕಣದಲ್ಲಿ ಉಳಿದರು.
ಬಿಜೆಪಿ ಪಕ್ಷ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಮೂರು ಮತ ಸೇರಿ ಒಟ್ಟು 7 ಮತ, ಜೆಡಿಎಸ್ ಪಕ್ಷದ ಒಬ್ಬರು ವಿಧಾನ ಪರಿಷತ್ ಸದಸ್ಯರ ಮತ ಸೇರಿ 8 ಮತ, ಪಕ್ಷೇತರರು 3 ಜನ ಸೇರಿ ಒಟ್ಟು 18 ಮತಗಳನ್ನು ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ ಬಿ.ಅಂಜಿನಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಂಬುಜ ನಟರಾಜು ಪಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾ ಪೆದ್ದರಾಜು ಅವರು ಕಾಂಗ್ರೆಸ್ ಪಕ್ಷದ 11 ಹಾಗೂ ಪಕ್ಷೇತರರು 5 ಮಂದಿ ಸೇರಿ ಒಟ್ಟು 16 ಮತ ಪಡೆದು ಪರಾಭವಗೊಂಡರು. ಅದೇ ರೀತಿ ಪಕ್ಷೇತರ ಅಭ್ಯರ್ಥಿ ಸಮ್ರೀನ್ ಖಾನಂ ಅವರೂ ಕಾಂಗ್ರೆಸ್ ಪಕ್ಷದ 11 ಹಾಗೂ ಪಕ್ಷೇತರ 5 ಮತ ಸೇರಿ 16 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಕಾರ್ಯ ನಿರ್ವಹಿಸಿದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಿದ ಬಿಜೆಪಿ: ಶಿರಾ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮತ್ತೊಮ್ಮೆ ಚುನಾವಣೆ ಚಾಣಾಕ್ಷತನ ಮೆರೆದಿದ್ದು, ಆಡಳಿತರೂಡ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ ಅಧ್ಯಕ್ಷ ಗಾದಿಯನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ. ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಇಬ್ಬರು ಹಾಗೂ ಜೆಡಿಎಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ವಿಜಯ ಸಾಧಿಸಿದ್ದರು, ಆದರೆ ಶಿರಾದಲ್ಲಿ ಬಿಜೆಪಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೇಂದ್ರ ಸಚಿವರು ಇದ್ದರೂ ಬಿಜೆಪಿ ಪಕ್ಷ ನಗರಸಭೆ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ವಿಲವಾಗಿ, ಕೇವಲ ಉಪಾಧ್ಯಕ್ಷ ಸ್ಥಾನ ಪಡೆಯಲಷ್ಟೆ ಸಾಧ್ಯವಾಗಿದೆ. ಒಟ್ಟಾರೆ ಹೇಳುವುದಾದರೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಶ್ರಮ ಪಟ್ಟು ಜೆಡಿಎಸ್ ಪಕ್ಷವನ್ನು ಶಿರಾ ನಗರಸಭೆ ಅಧ್ಯಕ್ಷರನ್ನಾಗಿ ಮಾಡಲು ಶ್ರಮಿಸಿದ್ದಾರೆ.
Get real time updates directly on you device, subscribe now.
Prev Post
Comments are closed.