ಕುಣಿಗಲ್: ಬಿಜೆಪಿ ಸರ್ಕಾರ ನೀಡಿದ ಅನುದಾನದಡಿಯಲ್ಲಿ ಕಾಮಗಾರಿಗೆ ಪೂಜೆ ಮಾಡುವಾಗ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಪುರಸಭೆ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ಪುರಸಭೆ ವಿಶೇಷ ಸಭೆಯಲ್ಲಿ ನಡೆಯಿತು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪುರಸಭೆ ಬಿಜೆಪಿ ಸದಸ್ಯರಾದ ಕೃಷ್ಣ, ನಾಗಣ್ಣ, ಆನಂದಕುಮಾರ್, ಗೋಪಿ, ಕುಮಾರ್, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಸಚಿವ ಅಶ್ವಥನಾರಾಯಣ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಹೆದ್ದಾರಿ ಅಭಿವೃದ್ಧಿಗೆ 2.84 ಕೋಟಿ ರೂ. ಅನುದಾನ ಬಿಜೆಪಿ ಸರ್ಕಾರ ನೀಡಿದೆ, ಆದರೆ ಕಾಮಗಾರಿ ಗುದ್ದಲಿ ಪೂಜೆಗೆ ಉಸ್ತುವಾರಿ ಸಚಿವರನ್ನು ಕರೆಯುವ ಸೌಜನ್ಯತೋರದೆ, ಅನುದಾನ ತರುವಲ್ಲಿ ಯಾವುದೇ ಕ್ರಮ ವಹಿಸದ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಕರೆಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆ ಮಾಡಿರುವುದು ಖಂಡನೀಯ ಎಂದರು. ಕಾಂಗ್ರೆಸ್ ಸದಸ್ಯರಾದ ರಾಮು, ನಾಗೇಂದ್ರ, ಅರುಣಕುಮಾರ್ ಇತರರು ಇದಕ್ಕೆ ಆಕ್ಷೇಪಿಸಿ ವಾಗ್ವಾದಕ್ಕೆ ಇಳಿದರು, ವಾಗ್ವಾದ ಜೋರಾಗಿ ನಡೆದು ಗೊಂದಲಮಯ ವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಲೋಕೋಪಯೋಗಿ ಇಲಾಖೆ ಮಾಡಿದ್ದು ಅಲ್ಲಿನ ಅಧಿಕಾರಿಗಳನ್ನು ಕೇಳಿ ಎಂದು ಸಮಜಾಯಿಷಿ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.
ಸಭೆಯಲ್ಲಿ ಸದಸ್ಯರೊಬ್ಬರು ಪುರಸಭೆ ಮಹಿಳಾ ಅಭಿಯಂತರನ್ನು ಏಕ ವಚನದಲ್ಲಿ ಕರೆದಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಹಿಳಾ ಅಧಿಕಾರಿ, ಸದಸ್ಯನನ್ನು ತರಾಟೆಗೆ ತೆಗೆದುಕೊಂಡು ವಾಗ್ವಾದ ನಡೆಸಿದರು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರೋದಿಲ್ಲ ಎಂದು ಕೆಲಸಕ್ಕೆ ರಜೆ ಹಾಕಿ ಹೋಗುವುದಾಗಿ ಹೇಳಿ ಸಭೆಯಿಂದ ಹೊರ ನಡೆಯಲು ಮುಂದಾದರು. ಇತರೆ ಸಿಬ್ಬಂದಿ, ಸದಸ್ಯರು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ, ಅದರ ಬಗ್ಗೆ ವಿಶೇಷ ಸಭೆ ಕರೆಯಬೇಕಿತ್ತು, ಆದರೆ ಅಗತ್ಯವಲ್ಲದ ವಿಷಯಗಳನ್ನು ಇಟ್ಟು ಸಭೆ ಕರೆದಿರುವುದು ಅವೈಜ್ಞಾನಿಕ ಎಂದು ಸದಸ್ಯರಾಮು ಆಕ್ಷೇಪಿಸಿದರು. ಸದಸ್ಯ ಮಲ್ಲಿಪಾಳ್ಯಶ್ರೀನಿವಾಸ್, ಪುರಸಭೆಯಲ್ಲಿ ಕಸ ಸಂಗ್ರಹಣೆ ಡಬ್ಬಗಳ ಸ್ಥಾಪನೆ ಕಾಮಗಾರಿ ಬೇಡವೆಂದು ನಿರ್ಣಯ ಕೈಗೊಂಡಿದ್ದರೂ ಸಭೆಗೆ ಮನ್ನಣೆ ನೀಡದೆ ಅಧಿಕಾರಿಗಳು ಸದರಿ ಕಾಮಗಾರಿ ಕೈಗೊಂಡು ಹಣ ಪೋಲು ಮಾಡುತ್ತಿರುವುದು ಖಂಡನೀಯ ಎಂದಾಗ ಇದಕ್ಕೆ ಬಿಜೆಪಿ ಸದಸ್ಯ ಕೃಷ್ಣ ಬೆಂಬಲಿಸಿದರು, ಆದರೆ ಈಗಾಗಲೆ ಕ್ರಿಯಾ ಯೋಜನೆ ನೀಡಿ ಸಲಕರಣೆ ತರಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದಾಗ ತೀವ್ರ ಆಕೇಪಕ್ಕೆ ಕಾರಣ ವಾಯಿತು.
ದೊಡ್ಡಕೆರೆ ಏರಿಯ ಮೇಲಿನ ಪಾರ್ಕ್ ಪುರಸಭೆ ವಶಕ್ಕೆ ಪಡೆಯುವ ಬಗ್ಗೆ, ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಕುದುರೆ ಪ್ರತಿಮೆ ನಿಲ್ಲಿಸುವ ಬಗ್ಗೆ ನಿರ್ಣಯ ಅಂಗೀಕರಿಸಿದ್ದು 15ನೇ ಹಣಕಾಸು ಯೋಜನೆಯ ಕೆಲ ಟೆಂಡರ್ಗಳ ಬಗ್ಗೆ ಅಂತಿಮವಾಗಿ ಚರ್ಚೆ ನಡೆಯದೆ ಸಾಮಾನ್ಯ ಸಭೆಗೆ ತರುವಂತೆ ಸೂಚಿಸಲಾಯಿತು. ಪ್ರಭಾರ ಮುಖ್ಯಾಧಿಕಾರಿ ದೇವರಾಜು, ಉಪಾಧ್ಯಕ್ಷೆ ತಬಸುಮ್ ಇತರರು ಇದ್ದರು.
ಕಾಂಗ್ರೆಸ್ ನಿಂದ ಕಾಮಗಾರಿಗೆ ಪೂಜೆ – ಬಿಜೆಪಿ ಕಾರ್ಯಕರ್ತರ ಕಿಡಿ
Get real time updates directly on you device, subscribe now.
Prev Post
Next Post
Comments are closed.