ದೌರ್ಜನ್ಯ ನಡೆಸಿದ್ರೆ ಕಂಬಕ್ಕೆ ಕಟ್ತೇವೆ

ಅಧಿಕಾರಿಗಳು, ಪೊಲೀಸರು ನಿಯಮಕ್ಕೆ ಒಳಪಟ್ಟು ಕೆಲಸ ಮಾಡಲಿ: ನಾಗರಾಜಯ್ಯ

410

Get real time updates directly on you device, subscribe now.

ಕುಣಿಗಲ್: ತಾಲೂಕಿನ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ನಿಯಮಕ್ಕೆ ಒಳಪಟ್ಟು ಕೆಲಸ ಮಾಡಬೇಕು, ಅದು ಬಿಟ್ಟು ರಾಜಕೀಯ ಪ್ರಭಾವಕ್ಕೆ ಒಳಪಟ್ಟು ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡಿ, ದೌರ್ಜನ್ಯ ನಡೆಸಿದರೆ ಕಂಬಕ್ಕೆ ಕಟ್ಟಿ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ, ತಾಲೂಕು ಜೆಡಿಎಸ್ ವರಿಷ್ಠ ಡಿ.ನಾಗರಾಜಯ್ಯ ಹೇಳಿದರು.

ಶುಕ್ರವಾರ ತಾಲೂಕು ಜೆಡಿಎಸ್ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳ ಅಕ್ರಮಗಳ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಬದುಕಿರುವ ವ್ಯಕ್ತಿಗಳನ್ನು ಸಾಯಿಸಿ ಅವರ ಜಮೀನು ದಾಖಲೆ ಬೇರೆಯವರಿಗೆ ಮಾಡುತ್ತಾರೆ, ಬಡ ರೈತನ ಜಮೀನನ್ನು ಕಬಳಿಸಲು ಪರೋಕ್ಷ ದಾಖಲೆ ಸೃಷ್ಟಿಸುತ್ತಾರೆ, ರೈತರ ಹಸನು ಜಮೀನಿನಲ್ಲಿ ಪ್ರಭವಿಗೆ ರಸ್ತೆ ಮಾಡಿ ಕೊಡಲು ಪೊಲೀಸರು, ಕಂದಾಯಾಧಿಕಾರಿಗಳು ಕಾರ್ಯಾಚರಣೆ ಮಾಡುವುದಲ್ಲದೆ ಭಾದಿತ ರೈತನ ಮೇಲೆ ಕೇಸು ಹಾಕುತ್ತಾರೆ. ಸಾಗುವಳಿ ಭೂಮಿ ಮಂಜೂರು ಮಾಡಿದ್ದರೂ ಉಳುಮೆ ಚೀಟಿ ನೀಡಲು ಲಕ್ಷಾಂತರ ಲಂಚ ಕೇಳುತ್ತಾರೆ, ಕ್ರಷರ್ ಸಮಸ್ಯೆ ವಿರುದ್ಧ ಹೋರಾಡಲು ಹೋದ ೭೦ ವಯಸ್ಸಿನ ವೃದ್ಧನ ಮೇಲೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಾರೆ, ತಾಲೂಕಿನ ಆಡಳಿತ ಕುಸಿದಿದೆ, ಕಂದಾಯ, ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಬರಲು ಬಿಜೆಪಿ, ಕಾಂಗ್ರೆಸ್ ಮುಖಂಡರಿಗೆ ೨೦ ಲಕ್ಷಕ್ಕೂ ಹೆಚ್ಚಿನ ಲಂಚ ನೀಡಿ ಬಂದು ಆ ಹಣ ಲೂಟಿ ಮಾಡಲು ಇಲ್ಲಿನ ಬಡ ರೈತರಿಗೆ ಶೋಷಣೆ ಮಾಡುತ್ತಿದ್ದಾರೆ, ಭ್ರಷ್ಟಾಚಾರ ನಿಯಂತ್ರಿಸಿದರೆ ಸರಿ, ಇಲ್ಲವಾದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ, ನ್ಯಾಯ ಹೇಗೆ ಪಡೆಯಬೇಕೆನ್ನುವುದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.
ಪಿಎಸೈ ಲಕ್ಷ್ಮಣ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವರು, ಜನರ ರಕ್ಷಣೆಗೆ ಇರುವ ಪೊಲೀಸ್ ಜೀಪುಗಳು ಜನರ ಶೋಷಣೆಗೆ ಬಳಸಲಾಗುತ್ತಿದೆ, ಹೆದ್ದಾರಿ, ಗಲ್ಲಿ ಎಲ್ಲೆಂದರಲ್ಲಿ ವಿನಾಕಾರಣ ರೈತರ, ಗ್ರಾಮಸ್ಥರ ವಾಹನ ತಪಾಸಣೆ ನೆಪದಲ್ಲಿ ಶೋಷಣೆ ಮಾಡಲಾಗುತ್ತಿದೆ, ರಸ್ತೆಯಲ್ಲೆ ಅಷ್ಟೋ ಇಷ್ಟೋ ಪಡೆದು ತೀರ್ಮಾನ ಮಾಡಿಕೊಂಡು ಕಳಿಸುವ ಮೂಲಕ ಜನತೆಗೆ ಪೊಲೀಸ್ ಇಲಾಖೆ ಮೇಲೆ ಇದ್ದ ನಂಬಿಕೆ, ಗೌರವ ಇಲ್ಲದಂತೆ ಮಾಡುತ್ತಿದ್ದೀರಾ, ಜಮೀನು ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ರೈತರ ಜಮೀನಿಗೆ ಹೋಗಿ ಆತನನ್ನು ಖುಲ್ಲಾ ಪಡಿಸುವ ಕೆಲಸ ಮಾಡುತ್ತೀರಾ, ನೀವುಗಳು ನ್ಯಾಯಾಲಯಕ್ಕಿಂತ ದೊಡ್ಡವರ, ಯಾರ ಪ್ರಭಾವದಡಿ ಕೆಲಸ ಮಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿದ್ದ ಕೆಲ ರೈತರು ಹದ್ದು ಬಸ್ತಿಗೆ ದುಡ್ಡುಕಟ್ಟಿ ಮೂರು ವರ್ಷವಾದರೂ ಸರ್ವೇಯರ್ ಹದ್ದು ಬಸ್ತಿಗೆ ಬರೊಲ್ಲ, ಪ್ರಭಾವಿಗಳಾದ್ದಾದರೆ ತಕ್ಷಣವಾಗುತ್ತದೆ, ಪೋಡಿ ಮಾಡಲು ಸಾವಿರಾರು ರೂ. ಲಂಚ ಕೇಳುತ್ತಾರೆ, ಕೊಡದೆ ಇದ್ದರೆ ದಾಖಲು ಅಲ್ಲಿಯೆ ಇರುತ್ತದೆ, ರೆಕಾರ್ಡ್ ರೂಂಗಳಲ್ಲಂತೂ ಹಣ ನೀಡದೆ ಯಾವುದೇ ದಾಖಲೆ ನೀಡೊಲ್ಲ, ಹಣ ನೀಡದೆ ಇದ್ದರೆ ದಾಖಲೆ ಇಲ್ಲ ಎಂದು ಲಿಖಿತ ಉತ್ತರ ನೀಡುತ್ತಾರೆ, ಹಣ ನೀಡಿದರೆ ಸರಿಯಾದ ಉತ್ತರ ನೀಡುತ್ತಾರೆ. ಕಂಪ್ಯೂಟರ್ ಸೆಕ್ಷನ್ ನಲ್ಲಿ ಅಕ್ರಮ ಮಾಡಿದ ಸಿಬ್ಬಂದಿಯನ್ನೆ ಪುನಹ ಕರ್ತವ್ಯಕ್ಕೆ ನಿಯೋಜಿಸಿದ್ದು ಮಾಡಬಾರದ್ದು ಮಾಡುತ್ತಿದ್ದಾರೆ ಎಂದರು.
ಈವೇಳೆ ಗ್ರೇಡ್-೨ ತಹಶೀಲ್ದಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವರು, ನೀವು ಇಲ್ಲಿಗೆ ಬರಲು ಕಾಂಗ್ರೆಸ್ ಎಂಎಲ್ಎಗೋ, ಬಿಜೆಪಿ ಲೀಡರ್ ದೋ ದುಡ್ಡುಕೊಟ್ಟು ಬಂದು ಇಲ್ಲಿ ರೈತರ ಮನೆ ಹಾಳು ಮಾಡುವುದು ಬೇಡ, ನೀವು ಹಾಕಿದ ಬಂಡವಾಳ ನಿಮಗೆ ಬರಬೇಕಾದರೆ ನಿಮ್ಮವರನ್ನೆ ಯಾರಾನ್ನಾದರೂ ಇಟ್ಟುಕೊಂಡು ಮನೆಯಲ್ಲಿ ವ್ಯವಹಾರ ಮಾಡಿಕೊಳ್ಳಿ ಬಡ ರೈತನನ್ನು ಯಾಕೆ ಗೋಳು ಹೊಯ್ಕೊತ್ತೀರಾ, ಹೀಗೆ ಮಾಡುತ್ತಿದ್ದರೆ ಜನರೆ ಕಾನೂನು ಕೈಗೆ ತಗೊಳ್ಳೋ ದಿನ ದೂರ ಇಲ್ಲ ಎಚ್ಚರಿಕೆ ಇರಲಿ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ತಾಲೂಕಿನ ಶಾಸಕರಿಗೆ ಅನುಭವ ಇಲ್ಲ, ರಾಜಕಾರಣದಲ್ಲಿ ಮಗು ಎಂದು ಸಂಸದರು ಹೇಳುತ್ತಾರೆ, ಆದರೆ ಶಾಸಕ ಮಗುವಿಗೆ ಬೇನಾಮಿ ಹೆಸರಲ್ಲಿ ಕಲ್ಲುಗಣಿಗಾರಿಕೆ ಮಾಡಿ ಖನಿಜ ಸಂಪತ್ತು ಲೂಟಿ ಮಾಡುವುದು ಗೊತ್ತಿದೆ, ತಮ್ಮ ಕೆಲಸಕ್ಕೆ ಅಡ್ಡ ಬಂದವರಿಗೆ ಠಾಣೆಗೆ ಕರೆಸಿ ಕೊಲೆ ಕೇಸ್, ರೇಪ್ ಕೇಸ್ ಹಾಕಿಸುವುದು ಗೊತ್ತಿದೆ, ಕನಕಪುರದಿಂದ ಜನರನ್ನು ಕರೆಸಿ ತಾಲೂಕಿನ ಬಡ ರೈತರ ಜಮೀನು ಕಬ್ಜಾ ಮಾಡುವುದು ಗೊತ್ತಿದೆ, ಇಂತಹ ಮಗುವಿಗೆ ಅಭಿವೃದ್ಧಿ ವಿಷಯ ಮಾತ್ರ ಗೊತ್ತಿಲ್ಲ, ತಾಲೂಕಿನ ಜನತೆ ಎಚ್ಚರಗೊಳ್ಳದೆ ಇದ್ದಲ್ಲಿ ಮುಂದೆ ಕನಕಪುರದ ಗೊಂಡಾಗಳು ತಾಲೂಕಿನ ರೈತರ ಜಮೀನುಗಳನ್ನು, ಬಂಡೆಗಳನ್ನು ನುಂಗಿ ನೀರು ಕುಡಿಯುವುದರಲ್ಲಿ ಅನುಮಾನ ಇಲ್ಲ ಎಂದು ಕನಕಪುರದ ಕೆಲವರು ತಾಲೂಕಿನ ರೈತರ ಭೂಮಿ ಕಬಳಿಕೆ ಮಾಡಲು ಮುಂದಾಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
ಅಧಿಕಾರಿಗಳು ಶಾಸಕರು, ಬಿಜೆಪಿ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿದು ನಿಯಮ ಬಾಹಿರ ಕೆಲಸ ಮಾಡಿದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಮಾತನಾಡಿ, ಕಾಂಗ್ರೆಸ್ ಶಾಸಕರು ಬೇನಾಮಿ ಹೆಸರಲ್ಲಿ ತಾಲೂಕಿನ ವಿವಿಧೆಡೆ ಕಲ್ಲು ಗಣಿಗಾರಿಕೆ ಮಾಡುತ್ತಾ, ತಾಲೂಕಿನ ಖಣಿಜ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ಪ್ರಶ್ನಿಸಲು ಹೋದವರ ಮೇಲೆ ಪೊಲೀಸರನ್ನು ಬಳಸಿಕೊಂಡು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ, ತಾಲೂಕಿನ ಜನರು ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಪೊಲೀಸ್, ಕಂದಾಯ ಇಲಾಖಾಧಿಕಾರಿಗಳ ಅಕ್ರಮದಿಂದ ನೊಂದವರು ಸಭೆಯಲ್ಲಿ ಪಾಲ್ಗೊಂಡು ಅಳಲು ತೊಂಡಿಕೊಂಡರು. ತಾಪಂ ಮಾಜಿ ಅಧ್ಯಕ್ಷ ಹರೀಶ್ ನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಹರೀಶ್, ಮುಖಂಡರಾದ ಅನ್ಸರ್ ಪಾಶ, ಯೋಗೀಶ, ಕೃಷ್ಣೇಗೌಡ, ಕುಮಾರ, ದೀಪು ಜಗದೀಶ, ಮಾರುತಿ, ಮನೋಜ, ಅಪ್ಪು, ಸೂರಿ, ಕೃಷ್ಣ ಇತರರು ಇದ್ದರು. ಕಂದಾಯ ಇಲಾಖೆ ಪರವಾಗಿ ಗ್ರೇಡ್-೨ ತಹಶೀಲ್ದಾರ್ ಗೋವಿಂದ ರಾಜು, ಪೊಲೀಸ್ ಇಲಾಖೆ ಪರವಾಗಿ ಎಸ್ಸೆ ಲಕ್ಷ್ಮಣ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಹದಿನೈದು ದಿನದೊಳಗೆ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!