ಮಧುಗಿರಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳು ಜೀವನ ನಿರ್ವಹಣೆಗೆ ತತ್ತರಿಸುತ್ತಿದ್ದು, ಲಾಕ್‌ಡೌನ್ ಅವಧಿ ಮುಗಿಯುವವರೆಗೂ ತುಮುಲ್ ವತಿಯಿಂದ ಬಡ ಕುಟುಂಬಗಳಿಗೆ ಉಚಿತ ಹಾಲು ವಿತರಿಸಲಾಗುವುದು ಎಂದು ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಶುಕ್ರವಾರ ಉಚಿತ ಹಾಲು ವಿತರಿಸಿ ಮಾತನಾಡಿ, ಕೊರೋನಾ ಭೀತಿಗೆ ಇಡೀ ವಿಶ್ವವೇ ತತ್ತರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಏ.14 ರ ವರೆಗೆ ಲಾಕ್‌ಡೌನ್ ಘೋಷಿಸಿದ್ದಾರೆ. ಇದರಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಬಡ ಜನತೆಗೆ ತೊಂದರೆಯಾಗುತ್ತಿದೆ. ಇದನ್ನು ಮನಗಂಡು ತುಮುಲ್ ವತಿಯಿಂದ ಬಡವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಉಚಿತ ಹಾಲು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ನಿಂದಾಗಿ ಟ್ಯಾಂಕರ್ ಡ್ರೈವರ್ ಗಳ ಸಮಸ್ಯೆಯಿಂದ ಹೆಚ್ಚುವರಿ ಹಾಲನ್ನು ಹೊರ ರಾಜ್ಯಗಳಿಗೆ ಸಾಗಿಸಲು ಮತ್ತು ಹಾಲಿನ ಪೌಡರ್ ಆಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆಎಂಎಫ್‌ನಲ್ಲಿ ಪ್ರತಿ ದಿನ 9 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಆದರೆ ರೈತರಿಂದ ಹಾಲು ಪಡೆಯುವುದನ್ನು ಸ್ಥಗಿತಗೊಳಿಸಿದಲ್ಲಿ ರೈತರಿಗೆ ತೊಂದರೆಯಾಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತಂದಾಗ ಯಾವುದೇ ಕಾರಣಕ್ಕೂ ರೈತರಿಂದ ಪಡೆಯುವ ಹಾಲಿಗೆ ರಜೆ ನೀಡದೆ ಬಡಜನತೆಗೆ ಉಚಿತವಾಗಿ ನೀಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಕೆಎಂಎಫ್ ವತಿಯಿಂದ ಬೆಂಗಳೂರಿನಲ್ಲಿ 80 ಸಾವಿರ ಲೀಟರ್, ತುಮುಲ್ ವತಿಯಿಂದ 25 ಸಾವಿರ ಲೀಟರ್ ಹೆಚ್ಚುವರಿ ಹಾಲನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದ್ದು, ಮೊದಲ ಬಾರಿಗೆ ಮಧುಗಿರಿಯಲ್ಲಿ 1147 ಲೀಟರ್ ಹಾಲನ್ನು ಬಡ ಕುಟುಂಬಗಳಿಗೆ ವಿತರಿಸಲಾಗಿದೆ. ಲಾಕ್‌ಡೌನ್ ಅಂತ್ಯವಾಗುವವರೆಗೂ ಉಚಿತವಾಗಿ ಹಾಲನ್ನು ವಿತರಿಸಲಾಗುತ್ತದೆ ಎಂದರು.
ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್ ಮಾತನಾಡಿ ಸರ್ಕಾರ 1996 ರಲ್ಲಿ ಸ್ಲಂಗಳನ್ನು ಘೋಷಿಸಿದ್ದು, ಅಂದು ಕಡಿಮೆ ಸಂಖ್ಯೆಯಲ್ಲಿ ಮನೆಗಳಿದ್ದು, ಆ ಸಂಖ್ಯೆಗನುಗುಣವಾಗಿ ಹಾಲು ಪೂರೈಸಲಾಗುತ್ತಿದೆ. ಆದರೆ ಈಗ ಸ್ಲಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕುಟುಂಬಗಳಿದ್ದು, ಇನ್ನೂ ಹೆಚ್ಚಿನ ಹಾಲನ್ನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಮರ್ ನಾರಾಯಣ್, ಹಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ, ಸಮುದಾಯ ಸಂಘಟಕಿ ವರಲಕ್ಷ್ಮೀ, ಪುರಸಭೆ ಮಾಜಿ ಅಧ್ಯಕ್ಷ ಗೋವಿಂದರಾಜು, ಸದಸ್ಯರಾದ ಚಂದ್ರಶೇಖರ್ ಬಾಬು, ಎಂ.ವಿ.ಮಂಜುನಾಥ್ ಆಚಾರ್, ನರಸಿಂಹಮೂರ್ತಿ, ಮುಖಂಡರಾದ ಉಮೇಶ್, ಲತಾ ನಾರಾಯಣ್, ಸುರೇಶ್, ತುಮುಲ್ ವಿಸ್ತರಣಾಧಿಕಾರಿ ಶಂಕರ್ ನಾಗ್, ಡಾ.ದೀಕ್ಷಿತ್ ಇತರರಿದ್ದರು.
ಬಡ ಕುಟುಂಬಗಳಿಗೆ ತುಮುಲ್‌ನಿಂದ ಹಾಲು ವಿತರಣೆ
Get real time updates directly on you device, subscribe now.
Next Post
Comments are closed.