ರಂಗಕಲೆಗೆ ತುಮಕೂರು ಜಿಲ್ಲೆ ಕೊಡುಗೆ ಅಪಾರ

113

Get real time updates directly on you device, subscribe now.

ತುಮಕೂರು: ಕರ್ನಾಟಕ ರಂಗಕಲೆಗೆ ದೊಡ್ಡ ಕೊಡುಗೆ ನೀಡಿದ ಜಿಲ್ಲೆ ತುಮಕೂರು, ಡಾ.ಗುಬ್ಬಿ ವೀರಣ್ಣ, ಮಾಸ್ಟರ್ ಹಿರಿಣ್ಣಯ್ಯ, ಹಾಸ್ಯ ಚಕ್ರವರ್ತಿ ನರಸಿಂಹರಾಜು ಸೇರಿದಂತೆ ಅನೇಕ ಕಲಾವಿದರು ರಂಗಭೂಮಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಎಸ್ಐಟಿಯ ಬಿರ್ಲಾ ಆಡಿಟೋರಿಯಂ ನಲ್ಲಿ ಕರ್ನಾಟಕ ನಾಟಕ ಆಕಾಡೆಮಿ, ಶ್ರೀಬಸವೇಶ್ವರ ನಾಟಕ ಮಂಡಳಿ, ಸಿದ್ದಗಂಗಾಮಠ ತುಮಕೂರು, ರಂಗಸೊಗಡು ಕಲಾಟ್ರಸ್ಟ್, ಸ್ವಾಂದೇನಹಳ್ಳಿ ಹಾಗೂ ದವನಭೂಮಿಕೆ ಸಾಂಸ್ಕೃತಿಕ ಟ್ರಸ್ಟ್ ತುಮಕೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಅಮೃತ ರಂಗಮಹೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ರಾಜ್ ಕುಮಾರ್ ಸಹ ಗುಬ್ಬಿ ವೀರಣ್ಣ ಕಂಪನಿಯಿಂದ ಕಲಾವಿದರಾಗಿ ಹೊರಹೊಮ್ಮಿದವರು, ಹಾಗಾಗಿ ರಂಗಕಲೆ ಎಂದರೆ ತುಮಕೂರು ಎನ್ನುವಂತಾಗಿದೆ ಎಂದರು.
ಮನುಷ್ಯನಿಗೆ ಅಡವು, ಆಸ್ತಿಗಳಿಂದ ನೆಮ್ಮದಿ ಸಿಗುವುದು ಅಷ್ಟಕ್ಕಷ್ಟೆ, ಆದರೆ ಕಲೆ, ಸಂಗೀತ, ಸಾಹಿತ್ಯ, ಲಲಿತ ಕಲೆಗಳಿಂದ ಒಂದಷ್ಟು ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ, ಆದ್ದರಿಂದ ಪ್ರಾಚೀನ ಕಾಲದಿಂದಲೂ ನಾಟಕ, ಸಂಗೀತ, ನೃತ್ಯ ಕಲೆಗಳಿಗೆ ಹೆಚ್ಚಿನ ಪ್ರಾಧ್ಯನತೆ ನೀಡುತ್ತಾ ಬಂದಿದ್ದಾರೆ, ವಿವಿಧ ಕಲಾ ಪ್ರಕಾರಗಳು ಇಲ್ಲದಿದ್ದರೆ ಮನುಷ್ಯನಿಗೂ, ಪ್ರಾಣಿಗಳಿಗೂ ವ್ಯತ್ಯಾಸವೇ ಇರುತ್ತಿರಲಿಲ್ಲ ಎಂಬುದನ್ನು ಹಲವು ಹಿರಿಯರು ತಮ್ಮ ಬರಹಗಳಲ್ಲಿ ನಿರೂಪಿಸಿದ್ದಾರೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಜನ ಸಾಮಾನ್ಯರಿಗೂ ಶಿಕ್ಷಣ ಕೊಡುವ ಮಾಧ್ಯಮವೆಂದರೆ ಅದು ನಾಟಕ, ಹಾಗಾಗಿಯೇ ಸರಕಾರ ಕರ್ನಾಟಕ ನಾಟಕ ಆಕಾಡೆಮಿಯ ಮೂಲಕ ಗ್ರಾಮೀಣ ಭಾಗದಲ್ಲಿ ಇಂತಹ ನಾಟಕೋತ್ಸವ ಏರ್ಪಡಿಸುವ ಮೂಲಕ ಈ ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮುಂದಾಗಿದೆ, ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪೌರಾಣಿಕ ನಾಟಕಗಳು ನಡೆಯುತ್ತಿದ್ದು, ಕುಳಿತುಕೊಳ್ಳಲು ಜಾಗವಿಲ್ಲದಷ್ಟು ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿ ಆನಂದಿಸುತ್ತಾರೆ, ಇದಲ್ಲದೆ ಹಲವಾರು ಸಂಘ, ಸಂಸ್ಥೆಗಳು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸಿರುವ ಶ್ಲಾಘನೀಯ ಕಾರ್ಯ ಎಂದರು.
ಶ್ರೀಮಠ ಹೆಚ್ಚು ಜನರನ್ನು ತಲುಪಬೇಕು ಎಂಬ ಆಶಯ ಇಟ್ಟುಕೊಂಡಂತಹ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಗಳು ಶ್ರೀಬಸವೇಶ್ವರ ನಾಟಕ ಮಂಡಳಿ ಸ್ಥಾಪಿಸಿ, ಶ್ರೀಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶಿಸುವ ಮೂಲಕ ಜನರಲ್ಲಿ ಶಕ್ತಿ, ಭಾವ ಬೆಳೆಸಿದ್ದಾರೆ, ಇಂದು ಬಿರ್ಲಾ ಆಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ೧೧೫೪ ನೇ ಪ್ರದರ್ಶನವಾಗಿದೆ, ಇದು ಶ್ರೀಮಠಕ್ಕೆ ಹಾಗೂ ತುಮಕೂರು ಜಿಲ್ಲೆಗೆ ಹೆಮ್ಮೆ ತರುವ ವಿಚಾರ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಎಸ್.ಗುಣಶೀಲನ್ ಮಾತನಾಡಿ, ರಾಜ್ಯದಲ್ಲಿ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಅಮೃತ ರಂಗ ಮಹೋತ್ಸವ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ, ಕೊರೊನದಿಂದಾಗಿ ನಾಟಕ ಸೇರಿದಂತೆ ಎಲ್ಲಾ ರೀತಿಯ ಕಲಾವಿದರು ಸಂಕಷ್ಟಕ್ಕೆ ಸಿಲುಕಿ ದ್ದಾರೆ, ಅಕಾಡೆಮಿಗೆ ಈ ಹಿಂದಿನ ವರ್ಷಗಳಿಗೆ ಹೊಲಿಕೆ ಮಾಡಿದರೆ ಅ`Àðದಷ್ಟು ಅನುದಾನ ಮಾತ್ರ ಬಂದಿದೆ, ಹೀಗಾಗಿ ಹೆಚ್ಚಿನ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದರು ನಾಟಕಗಳ ಪ್ರದರ್ಶನ, ವಿಚಾರ ಸಂಕಿರಣ, ಕಮ್ಮಟಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಜಗಜ್ಯೋತಿ ಬಸವೇಶ್ವರ ನಾಟಕವನ್ನು ದೆಹಲಿಯಲ್ಲಿ ಪ್ರದರ್ಶಿಸಬೇಕೆಂಬುದು ಅಕಾಡೆಮಿ ಇಚ್ಚೆಯಾಗಿದೆ ಎಂದರು.
ನಾಟಕ ಆಕಾಡೆಮಿ ಮತ್ತೋರ್ವ ಸದಸ್ಯ ಟಿ.ಎಸ್.ಸದಾಶಿವಯ್ಯ ಮಾತನಾಡಿ, ಯುವ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ನಾಟಕ ಅಕಾಡೆಮಿ ಇಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ, ಮುಂದಿನ ದಿನಗಳಲ್ಲಿ ಶ್ರೀಜಗಜ್ಯೋತಿ ಬಸವೇಶ್ವರ ನಾಟಕವನ್ನು ದೆಹಲಿಯಲ್ಲಿ ಪ್ರದರ್ಶನ ಮಾಡುವ ಮೂಲಕ ಬಸವೇಶ್ವರರನ್ನು ಇಡೀ ಜಗತ್ತಿಗೆ ಪರಿಚಯಿಸುವ ಇಚ್ಚೆ ಹೊಂದಿರುವುದಾಗಿ ನುಡಿದರು.
ಕಾರ್ಯಕ್ರಮದ ನಂತರ ಸಿದ್ದಗಂಗಾ ಮಠದ ಕಲಾವಿದರಿಂದ ಶ್ರೀಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನಗೊಂಡಿತು.

Get real time updates directly on you device, subscribe now.

Comments are closed.

error: Content is protected !!