ರೈತರನ್ನು ಒಕ್ಕಲೆಬ್ಬಿಸಿದ್ರೆ ಸುಮ್ಮನಿರಲ್ಲ

ಅರಣ್ಯ ಇಲಾಖೆ ವಿರುದ್ಧ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿ

145

Get real time updates directly on you device, subscribe now.

ಮಧುಗಿರಿ: ತಾಲೂಕಿನಲ್ಲಿ ಸಾಗುವಳಿ ಪತ್ರ ಮತ್ತು ಪಹಣಿ ಹೊಂದಿದ್ದರೂ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆಯ ಕಚೇರಿಗೆ ೨೫ ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದರು.

ಕಸಬಾ ವ್ಯಾಪ್ತಿಯ ಬಂದ್ರೆಹಳ್ಳಿಯ ತೇರಿನ ಬೀದಿ ಸಮೀಪದ ಬೆಳ್ಳೂರು ಕಟ್ಟೆ ಬಳಿ ಶನಿವಾರ ತಾಲೂಕಿನ ಕಸಬಾ, ಐಡಿ ಹಳ್ಳಿ ಹಾಗೂ ಮಿಡಿಗೇಶಿ ವ್ಯಾಪ್ತಿಯ ರೈತರನ್ನು ಉದ್ದೇಶಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿ ಅನುಭವಸ್ಥದಾರರಾಗಿದ್ದು, ಈಗ ಬಂದು ಜಮೀನುಗಳನ್ನು ಬಿಟ್ಟುಕೊಡಿ ಎಂದು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಯಾವ ನ್ಯಾಯ? ರೈತರೆ ಯಾವುದೇ ಕಾರಣಕ್ಕೂ ತಮ್ಮ ಜಮೀನು ಬಿಟ್ಟು ಕೊಡಬೇಡಿ, ಈ ಸಂಬಂಧ ಮುಖಂಡರೊಂದಿಗೆ ಗ್ರಾಮಗಳಲ್ಲಿ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಿದರು.
ತೋಟ, ಮನೆ, ಗದ್ದೆ ಇರುವ ರೈತರಿಗೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ತೊಂದರೆ ಕೊಡಬಾರದು, ಸಂಬಂಧಪಟ್ಟ ಇಲಾಖೆಯವರು ದಾಖಲಾತಿಗಳನ್ನು ಸರಿ ಪಡಿಸುವ ಕೆಲಸ ಮಾಡಿ, ಈ ಮೊದಲೇ ಸಮರ್ಪಕ ದಾಖಲಾತಿ ಹೊಂದಿಸುವ ಕೆಲಸ ಮಾಡಿದರೆ ಈಗ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಕಾನೂನಿಗಿಂತ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡುವ ಸಂದರ್ಭ ಬಂದಾಗ ಅಧಿಕಾರಿಗಳು ಮಾನವೀಯತೆ ಮೆರೆಯಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜುಗೆ ಬೆಂಬಲಿಸಿದ್ದೇನೆ ಹೊರತು ಬಿಜೆಪಿಗಲ್ಲ, ಅವರದು ಹಳೆಯ ಕಾಂಗ್ರೆಸ್ನ ಸಂಬಂಧ, ಜಿ.ಎಸ್.ಬಸವರಾಜು ಮತ್ತು ಆರ್.ರಾಜೇಂದ್ರ ಅವರನ್ನು ಗೆಲ್ಲಿಸಿದ ಕೀರ್ತಿ ನಿಮ್ಮದು, ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಒಂದು ಕಡೆ ಗೋ ಮಸೂದೆಗೆ ಬೆಂಬಲಿಸಿ ಇನ್ನೊಂದು ಕಡೆ ವಿರೋಧಿಸುತ್ತಿದೆ, ರಾಮನಗರ, ಚನ್ನಪಟ್ಟಣಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಇತ್ತೀಚೆಗೆ ೩ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿರುವುದನ್ನು ನೋಡಿದರೆ ಗೆಲ್ಲುವ ಕಡೆ ಟಿಕೆಟ್ ನೀಡದೆ, ಸೋಲುವ ಕಡೆ ಟಿಕೆಟ್ ನೀಡಿ ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಾವೂ ಸಹ ಹಿಂದುಗಳೇ, ನಾವು ಮಹಾತ್ಮ ಗಾಂಧಿ ಹಿಂದುತ್ವವನ್ನು ಅನುಕರಣೆ ಮಾಡಿದರೆ ಬಿಜೆಪಿಯವರು ನಾಥೂರಾಮ್ ಗೋಡ್ಸೆ ಹಿಂದುತ್ವ ಅನುಕರಣೆ ಮಾಡುತ್ತಾ, ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿಯನ್ನು ಕುಟುಕಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ ಅರಣ್ಯ ಇಲಾಖೆಯವರು ಈ ಭಾಗದ ರೈತರ ಮೇಲೆ ಏಕಾಏಕಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ, ಅನೇಕ ದಶಕಗಳಿಂದ ಈ ಜಮೀನುಗಳನ್ನು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ರಾಜ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಗ್ರಾಪಂ ಅಧ್ಯಕ್ಷ ಪಂಚಾಕ್ಷರಯ್ಯ, ಸಾವಿತ್ರಮ್ಮ ಡಿ.ಹೆಚ್.ನಾಗರಾಜು, ಭವ್ಯ ಕೇಶವ ಮೂರ್ತಿ, ಉಪಾಧ್ಯಕ್ಷೆ ಗೌರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಮುಖಂಡರಾದ ಫಾಜಿಲ್, ಆರ್ಯ ನಾರಾಯಣ್, ಮಧುಚಂದ್ರ, ಕಾಂತರಾಜು, ಸಿದ್ದಗಂಗಪ್ಪ, ಮೂಡ್ಲಗಿರೀಶ್, ಸಿದ್ದಾಪುರ ರಂಗಶ್ಯಾಮಣ್ಣ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!