ವಾಯು ಮಾಲಿನ್ಯ ತಡೆಯದಿದ್ದರೆ ಅಪಾಯ ಗ್ಯಾರೆಂಟಿ

319

Get real time updates directly on you device, subscribe now.

ತುಮಕೂರು: ಪರಿಸರದಲ್ಲಿ ವಾಯು ಮಾಲಿನ್ಯವನ್ನು ಹತೋಟಿಗೆ ತರದಿದ್ದಲಿ ಜೀವ ಜಂತುಗಳ ಪ್ರಾಣಕ್ಕೆ ಅಪಾಯ ಉಂಟಾಗಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಜಾನಪದ ಜಾಗೃತಿ ಗೀತಗಾಯನದ ಮೂಲಕ ವಿನೂತನ ರೀತಿಯಲ್ಲಿ ವಾಯು ಮಾಲಿನ್ಯ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೂ ವಾಯು ಮಾಲಿನ್ಯದಿಂದಾಗುವ ಅಪಾಯಗಳ ಬಗ್ಗೆ ಅರಿವು ಮೂಡಬೇಕಿದೆ, ವಾಹನಗಳು ಹೊರ ಸೂಸುವ ವಿಷಕಾರಿ ಹೊಗೆಯಿಂದ ಪರಿಸರ ನಾಶವಾಗುತ್ತಿದೆ. ವಾಯು ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಅಧ್ಯಯನದ ಪ್ರಕಾರ ಭಾರತದಲ್ಲಿ ಶೇ.೨೭ ರಷ್ಟು ಪ್ರಮಾಣ ವಾಹನ, ಶೇ.೫೧ ರಷ್ಟು ಕಾರ್ಖಾನೆ, ಶೇ.೧೨ ರಷ್ಟು ಭೂಮಿ ಮೇಲೆ ಸುಡಲ್ಪಡುವ ವಸ್ತುಗಳಿಂದ ಹೊರಬರುವ ಕೆಟ್ಟ ಹೊಗೆ, ಶೇ.೫ ರಷ್ಟು ಇತರೆ ಕಾರಣಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯದ ಪ್ರಮಾಣ ಪ್ರತಿ ವರ್ಷಕ್ಕೆ ಶೇ.೬೦ ರಷ್ಟು ಏರಿಕೆಯಾಗುತ್ತಿದ್ದು, ವಾಹನ ಮಾಲೀಕರು ತಮ್ಮ ವಾಹನಗಳ ಹೊಗೆ ತಪಾಸಣೆ ಹಾಗೂ ಸಮಯಕ್ಕೆ ಸರಿಯಾಗಿ ವಾಹನದ ಇಂಜಿನ್ ಸರ್ವೀಸ್ ನ್ನು ಕಾಲಕಾಲಕ್ಕೆ ಮಾಡಿಸಬೇಕು ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಶೇ.೫ ರಷ್ಟು ವಾಹನಗಳು ತಯಾರಾಗುತ್ತಿವೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಖ್ಯೆ ಹಾಗೂ ಅನಗತ್ಯ ವಾಹನ ಬಳಕೆಯಿಂದ ಮನುಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ, ಮಿತವಾದ ವಾಹನ ಬಳಕೆ ಹಾಗೂ ಎಲೆಕ್ಟ್ರಿಕ್ ವಾಹನ ಬಳಕೆಯಿಂದ ಪರಿಸರ ಮಾಲಿನ್ಯದಿಂದ ರಕ್ಷಿಸಬಹುದು ಎಂದು ಹೇಳಿದರು.
ತುಮಕೂರನ್ನು ವಾಯು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲರೂ ಪಣ ತೊಡಬೇಕು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಬೇಕು, ಪರಿಸರದಿಂದ ಉತ್ಪತ್ತಿಯಾಗುವ ವಿಷಯುಕ್ತ ಗಾಳಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಇಂತಹ ಗಾಳಿಯನ್ನು ಉಸಿರಾಡುವುದರಿಂದ ಕ್ಯಾನ್ಸರ್, ಉಸಿರಾಟ ಸಂಬಂಧಿ ಅನಾರೋಗ್ಯ, ಅಸ್ತಮಾ, ದೃಷ್ಟಿಹೀನತೆ, ಮಧುಮೇಹ, ರಕ್ತದೊತ್ತಡ, ಹೃದಯ, ಶ್ವಾಸಕೋಶ, ಮತ್ತಿತರ ಮಾರಕ ರೋಗಗಳಿಗೆ ಕಾರಣವಾಗುತ್ತದೆಯಲ್ಲದೆ, ಪರಿಸರ ಹಾಗೂ ಪ್ರಾಣಿ- ಪಕ್ಷಿ ಸಂಕುಲದ ಮೇಲೂ ಅಗಾಧ ಪರಿಣಾಮ ಬೀರುತ್ತದೆ, ಈ ಹಿನ್ನೆಲೆಯಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ತಿಳಿಸಿದರು.
ಡ್ರೈವಿಂಗ್ ಶಾಲೆಯ ಪ್ರಿನ್ಸಿಪಾಲ್ ಸದಾಶಿವಯ್ಯ ಮಾತನಾಡಿ, ರಸ್ತೆ ನಿರ್ಮಾಣಕ್ಕೆ ಮರಗಳನ್ನು ಕಡಿಯುವುದರಿಂದ ಪರಿಸರ ನಾಶವಾಗುತ್ತಿದ್ದು, ಮರಗಳನ್ನು ಕಡಿದಾಗ ೧೦ ಗಿಡವನ್ನು ನೆಟ್ಟು ಪರಿಸರ ರಕ್ಷಿಸಬೇಕು, ವಾಹನ ಉಗುಳುವ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಮರಗಳು ಆಮ್ಲಜನಕ ಬಿಡುಗಡೆ ಮಾಡುತ್ತವೆ, ಇದರಿಂದ ನಮ್ಮ ಸ್ವಾಸ್ಥ್ಯ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದ ರಾಜಶೇಖರ್ ಮಾತನಾಡಿ, ವಾಯು ಮಾಲಿನ್ಯ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ, ಪರಸರ ಸ್ನೇಹಿ ವಾಹನಗಳನ್ನು ಬಳಸಿ ವಾಯು ಮಾಲಿನ್ಯ ತಡೆಯುವ ಮೂಲಕ ಪರಿಸರ ಉಳಿಸೋಣ ಎಂದು ತಿಳಿಸಿದರು.
ಜನಪದ ಜಾಗೃತಿ ಗೀತೆಯ ಮೂಲಕ ಜಾಗೃತಿ: ಬೆಂಗಳೂರಿನ ಗೋ.ನಾ.ಸ್ವಾಮಿ ಮತ್ತು ಕಲಾ ತಂಡದವರು ಸ್ನೇಹಿತರೇ, ಬಂಧುಗಳೇ ಕೈಮುಗಿವೆವು ನಿಮಗೇ, ವಾಹನ ಮಾಲಿನ್ಯದಿಂದ ಜಗವಾ ರಕ್ಷಿಸಬೇಕೂ, ಮುಂದಿನ ಪೀಳಿಗೆಗಾಗಿ ಇಂದೇ ಪಣತೊಡಬೇಕೂ, ವಾಯು ಎಂಬುದು ಅಣ್ಣಾ, ಅದು ನಮ್ಮ ನಿಮ್ಮ ಸ್ವತ್ತು, ಮಾಲಿನ್ಯ ಮಾಡಿ ಅದಕೆ ತರಬೇಡಿರಣ್ಣ ಕುತ್ತು, ಮುಂದೆ ಬರುವ ಮಂದಿ ಶಾಪ ಹಾಕುವರು ನಮಗೆ, ಉಳಿಸಬೇಕಿದೆ ಜಗವ ಪರಿಸರ ಮಾತೆಯ ನೋವಾ ಎಂಬ ಜನಪದ ಜಾಗೃತಿ ಗೀತೆ ಮೂಲಕ ವಾಯು ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕಲಾತಂಡದಲ್ಲಿ ಹರಿಕಥೆ ಮಂಜು, ಮಹಂತೇಶ್, ನೀಲ, ಚಿದಾನಂದ್, ಹುಲುಗಪ್ಪ ಬಂಡಿಹಳ್ಳಿ, ನಾಗರಾಜ್, ನಾಗಯ್ಯ ಸ್ವಾಮಿ ಹಿರೇಮಠ್, ಪುಷ್ಪ, ರೋಹಿಣಿ ಮತ್ತಿತರರಿದ್ದರು.
ನಂತರ ವಾಯು ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ರಾಜೇಶ್, ದೇವರಾಜ್, ನರಸಿಂಹಯ್ಯ, ನಾರಾಯಣ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!