ಕಲ್ಲು ಗಣಿಗಾರಿಕೆ ವಿರುದ್ಧ ರೈತ ಸಂಘ ಆಕ್ರೋಶ

ಗಣಿಗಾರಿಕೆ ನಿಲ್ಲಿಸುವಂತೆ ಕುಣಿಗಲ್ ನಲ್ಲಿ ರಸ್ತೆ ತಡೆದು ಹೋರಾಟ

274

Get real time updates directly on you device, subscribe now.

ಕುಣಿಗಲ್: ತಾಲೂಕಿನ ಬೀಸೇಗೌಡನ ದೊಡ್ಡಿ ಸುತ್ತಮುತ್ತಲಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆ ತಡೆಯುವಂತೆ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ರಸ್ತೆತಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ತಾತ್ಕಾಲಿಕವಾಗಿ ಗಣಿಗಾರಿಕೆ ನಿಲ್ಲಿಸುವ ಭರವಸೆ ನೀಡಿದ ಘಟನೆ ನಡೆಯಿತು.

ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಬೀಸಗೌಡನದೊಡ್ಡಿ ಗ್ರಾಮದ ಸಮೀಪದಲ್ಲಿ ಶಾಸಕರು ಸೇರಿದಂತೆ ಕೆಲ ಪ್ರಭಾವಿಗಳು ಕಲ್ಲುಗಣಿಗಾರಿಕೆ ನಡೆಸುತ್ತಿದ್ದರಿಂದ ಗ್ರಾಮದಲ್ಲಿ ಮನೆ ಬಿರುಕು, ಕಲುಷಿತ ನೀರು, ರೇಷ್ಮೆ ಸೇರಿದಂತೆ ಇತರೆ ಬೆಳೆಹಾನಿ, ಜನಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದ್ದು ಗ್ರಾಮದ ಮಹಿಳೆಯರು ೧೫ ದಿನದಿಂದ ಹಗಲು ರಾತ್ರಿ ಎನ್ನದೆ ಪ್ರತಿಭಟನೆ ನಡೆಸಿದ್ದು, ಇದಕ್ಕೆ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಬೆಂಬಲಿಸಿ ಸೋಮವಾರ ಗ್ರಾಮದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ ದುಷ್ಪರಿಣಾಮದ ವರದಿ ನೀಡುವಂತೆ ಆಗ್ರಹಿಸಿದರು.
ರೇಷ್ಮೆ ಇಲಾಖಾಧಿಕಾರಿಗಳು ಗಣಿಗಾರಿಕೆಯಿಂದ ಬೆಳೆ ಹಾನಿಯಾಗಿದೆ ಎಂದು ಸ್ಥಳದಲ್ಲೆ ವರದಿ ನೀಡಿದರೆ, ತೋಟಗಾರಿಕೆ ಇಲಾಧಿಕಾರಿಗಳು ಸಹ ಅದೇ ವರದಿ ನೀಡಿದರು. ಲೋಕೋಪಯೋಗಿ ಇಲಾಖೆ ಎಇಇ ಗುರುಸಿದ್ದಪ್ಪ ಗಣಿಗಾರಿಕೆಯಿಂದ ಗ್ರಾಮದಲ್ಲಿನ ಮುಖ್ಯರಸ್ತೆ ಹಾಳಾಗಿದ್ದು ಇದಕ್ಕೆ ಗಣಿ ಮಾಲೀಕರೆ ಕಾರಣ ಎಂದಾಗ ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆಯಲ್ಲಿ ರಸ್ತೆ ಹಾಳು ಮಾಡಿದ ಗಣಿ ಪರವಾನಗಿದಾರರ ಮೇಲೆ ದೂರು ನೀಡಿದರು.
ಅರಣ್ಯಾಧಿಕಾರಿ ಮಹೇಶ್ ಸ್ಪೋಟಕದ ಬಳಕೆಯಿಂದ ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದರು. ಸ್ಪೋಟಕ ಬಳಕೆ ನಿಟ್ಟಿನಲ್ಲಿ ದುರ್ಗ ಪಿಎಸೈ, ಗಣಿ ಇಲಾಖೆ ಅಧಿಕಾರಿಗಳು ವಿಭಿನ್ನರೀತಿ ಹೇಳಿದ್ದು ರೈತರ ಅಸಮಾಧಾನಕ್ಕೆ ಕಾರಣವಾಗಿ ಗಣಿ ಅಧಿಕಾರಿ ಕೈಯಲ್ಲಿ ಕುಳಿಹಾಕಿ ಸ್ಪೋಟಕ ಬಳಸಬೇಕು, ರಿಗ್ ಲಾರಿ ಬಳಸಬಾರದು ಎಂದರು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಾವಚಿತ್ರ ಪ್ರದರ್ಶಿಸಿದ ಮೇರೆಗೆ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದರು. ಪರಿಸರ ಅಧಿಕಾರಿ ಸುರೇಶ್ ಸದರಿ ಗಣಿ ಗಾರಿಕೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಹಿಂದೆಯೇ ವರದಿ ನೀಡಿ ನಿಲ್ಲಿಸುವಂತೆ ಹೇಳಿದ್ದೇನೆ ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹಾಬಲೇಶ್ವರ್ ಮುಂದೆಯೆ ಗಣಿ ಅಧಿಕಾರಿಗಳು ರಾಜಧನ ಚೆಕ್ಪೋಸ್ಟ್ ಸ್ಥಾಪಿಸದ ಬಗ್ಗೆ ತೀವ್ರ ವಾಗ್ವಾದ ನಡೆಸಿದರು. ಸಾಮಾನ್ಯ ರೈತ ಮಣ್ಣು ತೆಗೆದುಕೊಂಡು ಹೋದರೆ ರಾಜಧನ ಪಾವತಿ ಮಾಡಿಲ್ಲ ಎಂದು ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ, ಆದರೆ ನೂರಾರು ಲಾರಿ ಲೋಡ್ ಕಲ್ಲುಗಣಿಗಾರಿಕೆಯ ಜಲ್ಲಿ, ಎಂ ಸ್ಯಾಂಡ್ ರಾಜರೋಷವಾಗಿ ಹೋಗುತ್ತದೆ, ಯಾರೂ ಕ್ರಮ ಜರುಗಿಸುವುದಿಲ್ಲ, ಶಾಸಕರ ಕ್ರಷರ್ ಎಂದು ಚೆಕ್ ಪೋಸ್ಟ್ ಮಾಡುತ್ತಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು. ರೈತ ಯೋಗೀಶ್ ತಮಗೆ ಅಡ್ಡಹಾಕಿ ಪರ್ಮಿಟ್ ಕೇಳಿದ್ದ ಗಣಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಗಣಿ ಇಲಾಖಾಧಿರಿಯ ವಿರುದ್ಧ ರೈತರು ಘೋಷಣೆ ಕೂಗಿದರು. ಕೊನೆಗೆ ಗಣಿ ಅಧಿಕಾರಿ ಪರ್ಮಿಟ್ ಪರಿಶೀಲನೆಗೆ ಚೆಕ್ಪೋಸ್ಟ್ ಸ್ಥಾಪಿಸುವುದಾಗಿಯೂ ಸದರಿ ಗಣಿಗಾರಿಕೆಯಲ್ಲಿ ನಿಯಮ ಉಲ್ಲಂಘನೆ ಅಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಭಟನಾಕಾರರು ಕೂಡಲೆ ಗಣಿಗಾರಿಕೆ ನಿಲ್ಲಿಸಿ, ನಿಷೇಧಿಸುವಂತೆ ಆಗ್ರಹಿಸಿದರು. ತಹಶೀಲ್ದಾರ್ ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಲ್ಲಿಸುವುದಾಗಿ ಹೇಳಿದಾಗ ತಹಶೀಲ್ದಾರ್ ರವರೊಂದಿಗೆ ವಾಗ್ವಾದ ನಡೆಸಿ ಕೂಡಲೆ ಕ್ರಮಕ್ಕೆ ಆಗ್ರಹಿಸಿ ಹೆದ್ದಾರಿ ೩೩ರಲ್ಲಿ ದಿಡೀರ್ ರಸ್ತೆತಡೆ ನಡೆಸಿದರು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯತು. ನಂತರ ತಹಶೀಲ್ದಾರ್, ಸದ್ಯಕ್ಕೆ ಗಣಿಗಾರಿಕೆ ನಿಲ್ಲಿಸಿ ಗ್ರಾಮಸ್ಥರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ತಂಡ ರಚಿಸಿ, ಅವರ ವರದಿ ಬಂದ ನಂತರ ಗಣಿಗಾರಿಕೆ ಆರಂಭಿಸುವ ಬಗ್ಗೆ ತೀರ್ಮಾನಿಸುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆತಡೆ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಎಪಿಎಂಸಿ ಅಧ್ಯಕ್ಷ ಹೇಮರಾಜು, ತಾಪಂ ಮಾಜಿ ಸದಸ್ಯ ಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಪ್ರಮುಖರಾದ ವೆಂಕಟೇಶ್, ಲಕ್ಷ್ಮಣ, ಮಾನವಹಕ್ಕು ಸಂಘಟನೆಯ ಅಧಕ್ಷ ಸತೀಶ್, ಕೆಆರ್ಎಸ್ ಪಕ್ಷದ ಪದಾಧಿಕಾರಿಗಳು, ಬೀಸೆಗೌಡನದೊಡ್ಡ ಗ್ರಾಮಸ್ಥರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!