ತುಮಕೂರು: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೇಳುವ ಮಾಹಿತಿಗೆ ಸಮರ್ಪಕ ಉತ್ತರ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, ಆರ್ಟಿಐ ಯಡಿ ಸ್ವೀಕೃತವಾಗುವ ಅರ್ಜಿಗಳಿಗೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸಬೇಕೆಂದು ಎಲ್ಲಾ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಶಿಷ್ಟರ ಶ್ರೇಯೋಭಿವೃದ್ಧಿಗಾಗಿ ಪರಿಶಿಷ್ಟ ಜಾತಿ, ಪಂಗಡದ ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸಮರ್ಪಕವಾಗಿ ವಿನಿಯೋಗಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಲಸಿಕಾಕರಣವು ಶೇ.೯೫ ರಷ್ಟು ಪೂರ್ಣಗೊಂಡಿದ್ದು ಬಾಕಿ ಲಸಿಕಾಕರಣ ಪೂರ್ಣಗೊಳಿಸಿ ಶೇ.೧೦೦ ರಷ್ಟು ಗುರಿ ಸಾಧಿಸಬೇಕೆಂದು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಅಲೆಮಾರಿ, ಅರೆ ಅಲೆಮಾರಿಗಳಿಗೆ ವಸತಿ ಕಲ್ಪಿಸುವ ಸಂಬಂಧ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಸೂಚಿಸಿದರು.
ಆರ್ಥಿಕ ವರ್ಷ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ, ಟ್ರೇಡ್ ಲೈಸನ್ಸ್ ಗಳ ಮೇಲೆ ತೆರಿಗೆ ಸಂಗ್ರಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾತ್ರೆ, ಉತ್ಸವ ನಡೆಸಲು ಯಾವುದೇ ನಿರ್ಬಂಧವಿರುವುದಿಲ್ಲವಾದರೂ ಜನರು ಕೋವಿಡ್ ಮಾರ್ಗಸೂಚಿ ಪಾಲಿಸುವುದು ಅಗತ್ಯ ಎಂದು ಹೇಳಿದರು.
ಇತ್ತೀಚಿಗೆ ಪಾವಗಡದಲ್ಲಿ ವಾಹನದಲ್ಲೇ ಹೆರಿಗೆಯಾದ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಗರ್ಭಿಣಿ ಸೇರಿ ಯಾವುದೇ ರೋಗಿಯನ್ನು ಸಕಾಲಕ್ಕೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಬೇಕು, ಅನಗತ್ಯ ವಿಳಂಬ ಕಂಡು ಬಂದರೆ ಆರೋಗ್ಯಾಧಿಕಾರಿಗಳು ಆ್ಯಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕಂದಾಯ ದಾಖಲೆಗಳನ್ನು ನೀಡಿ ರೈತನ ಅಲೆದಾಟ ತಪ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ ಗ್ರಾಮ ಠಾಣಾಗಳಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಕ್ರಮಕೈಗೊಳ್ಳಬೇಕೆಂದು ಡಿಡಿಪಿಐ ಸಿ.ನಂಜಯ್ಯ ಅವರಿಗೆ ಸೂಚಿಸಿದರು.
ಪೈಕಿ ಪಹಣಿ ಒಟ್ಟುಗೂಡಿಸುವಿಕೆ, ಪಹಣಿ ಕಾಲಂ, ೩/೯ ಮಿಸ್ ಮ್ಯಾಚ್, ಭೂಮಿ ಪೆಂಡೆನ್ಸಿ, ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಜಮೀನು ಕಾಯ್ದಿದಿರಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಉಪ ವಿಭಾಗಾಧಿಕಾರಿ ವಿ.ಅಜಯ್, ತಹಶೀಲ್ದಾರ್ ಗಳಾದ ಮೋಹನ್ ಕುಮಾರ್, ಮಮತಾ ಎಂ., ಮಹಾಬಲೇಶ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.