ಅಮಾಯಕರ ಜೀವ ತೆಗೆದ ಭಜರಂಗದಳ ಕಾರ್ಯಕರ್ತ!

ಪ್ರತಿ ಸಂಘಟನೆಯಲ್ಲೂ ಇದ್ದಾರೆ ಅಪಾಯಕಾರಿಗಳು - ಎಚ್ಚರ ವಹಿಸಬೇಕು ಸಾರ್ವಜನಿಕರು

2,096

Get real time updates directly on you device, subscribe now.

ತುಮಕೂರು: ಭಜರಂಗದಳ ಸಂಘಟನೆ ಭಾರತದ ಹಿಂದೂ ಹೋರಾಟದ ಒಂದು ಒಕ್ಕೂಟ, ವಿಶ್ವ ಹಿಂದೂ ಪರಿಷತ್ ನ ಒಂದು ತಂಡ ಆಗಿದೆ, ಹಿಂದುತ್ವದ ಸಿದ್ಧಾಂತದ ತಳಹದಿಯ ಮೇಲೆ ತನ್ನದೇ ರೂಪುರೇಷೆ ಹೊಂದಿದ್ದು, ಗೋ ಸಂರಕ್ಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ತನ್ನ ಅಸ್ತಿತ್ವ ರೂಪಿಸಿಕೊಂಡಿದೆ, ಧರ್ಮಕ್ಕೆ ಅಪಚಾರವೆಸಗಿದಾಗ, ದೇಶದ ವಿಚಾರದಲ್ಲಿ ಅಪಸ್ವರ ಎದ್ದಾಗ ಈ ಸಂಘಟನೆ ಹೋರಾಟದ ಮುಂಚೂಣಿಯಲ್ಲಿರುತ್ತೆ, ಇದಲ್ಲಾ ಓಕೆ.. ಫೈನ್!

ಭಜರಂಗದಳ ಕಾರ್ಯಕರ್ತರ ಮೇಲೆ ಈ ಹಿಂದೆ ತುಮಕೂರಿನಲ್ಲಿ ಹಲ್ಲೆ ನಡೆದಿತ್ತು, ಅನ್ಯ ಕೋಮಿನ ಯುವಕರು ನಗರದ ಗುಬ್ಬಿ ಗೇಟ್ ರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು, ಭಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಹಾಗೂ ಕಾರ್ಯಕರ್ತ ಕಿರಣ್ ತೀವ್ರವಾಗಿ ಗಾಯಗೊಂಡಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಶಾಸಕರು, ಹಿಂದೂಪರ ಸಂಘಟನೆಯ ಅನೇಕ ಕಾರ್ಯಕರ್ತರು ಭೇಟಿ ನೀಡಿ ಮಂಜು ಭಾರ್ಗವ್ ಹಾಗೂ ಮತ್ತೋರ್ವ ಕಾರ್ಯಕರ್ತನಿಗೆ ಧೈರ್ಯ ತುಂಬಿದರು.
ಇದು ಇಷ್ಟಕ್ಕೇ ಮುಗಿಯಲಿಲ್ಲ.. ಅನ್ಯ ಕೋಮಿನ ವಿರುದ್ಧ ಸೆಟೆದು ನಿಂತು ತುಮಕೂರು ಬಂದ್ ಕೂಡ ಮಾಡಲಾಯಿತು, ಬಂದ್ ಯಶಸ್ವಿನೂ ಆಯಿತು.
ಇದೆಲ್ಲಾ ಮುಗಿದು ಸ್ವಲ್ಪ ದಿನ ಕಳೆದಿದೆಯಷ್ಟೇ.. ಹೋರಾಟಗಾರ, ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಎಂಬಾತ ಮಾಡಬಾರದ ತಪ್ಪು ಮಾಡಿ ಅಮಾಯಕರಿಬ್ಬರ ಜೀವವನ್ನೇ ತೆಗೆದಿದ್ದಾನೆ.
ಮೊನ್ನೆ ನಾಮದಚಿಲುಮೆ ರಸ್ತೆಯ ಸಿದ್ದಗಂಗಾ ಕ್ರಾಸ್ ಬಳಿ ಒಂದು ಭೀಕರ ಅಪಘಾತವಾಯಿತು, ಈ ಅಪಘಾತದ ರೂವಾರಿಯೇ ಈ ಮಂಜು ಭಾರ್ಗವ್, ಕಾರಿನಲ್ಲಿ ಶರವೇಗದಲ್ಲಿ ಹೋಗುತ್ತಿದ್ದ ಮಂಜು ಭಾರ್ಗವ್ ಬೈಕ್ ನಲ್ಲಿ ಬರುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿದ್ದಾನೆ, ಡಿಕ್ಕಿಯ ರಬಸಕ್ಕೆ ನರಸಿಂಹರಾಜು, ನಾಗರತ್ನ ಎಂಬುವವರು ಸ್ಥಳದಲ್ಲೇ ಪ್ರಾಣ ಬಿಡುತ್ತಾರೆ, ಮೃತರು ಮೂಲತಃ ಕೊರಟಗೆರೆ ತಾಲ್ಲೂಕಿನ ಇರಕಸಂದ್ರದವರು.
ಮಂಜು ಭಾರ್ಗವ್ ನ ಕಾರು ಕೂಡ ಪಲ್ಟಿಯಾಗಿದ್ದು, ಈತನ ತಲೆಗೂ ಪೆಟ್ಟಾಗಿ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಷ್ಟಕ್ಕೂ ಈ ಭೀಕರ ಅಪಘಾತಕ್ಕೆ ಕಾರಣ ಹುಡುಕಿದರೆ ಹೋದರೆ ಮದ್ಯದ ಅಮಲು ಎನ್ನಲಾಗಿದೆ, ಮಂಜು ಭಾರ್ಗವ್ ಹೆಚ್ಚು ಮದ್ಯ ಸೇವಿಸಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಅಮಾಯಕ ದಂಪತಿಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ, ದಂಪತಿಯ ಮಕ್ಕಳು ಅನಾಥವಾಗಿದ್ದಾರೆ.
ಮಂಜು ಭಾರ್ಗವನ ಕಾರಿನಲ್ಲಿ ಮದ್ಯದ ಬಾಟಲಿಗಳು, ಚಿಕನ್, ಮಟನ್ ಇತ್ಯಾದಿ ಆಹಾರ ಇತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಪೊಲೀಸರೇನೋ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ಆದರೆ ಪ್ರಾಣ ತೆಗೆದವನಿಗೆ ಯಾವ ಶಿಕ್ಷೆ ಕೊಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಅಮಾಯಕರ ಸಾವಿಗೆ ಯಾರು ಹೊಣೆ?
ವೀಕೆಂಡ್ ಮೋಜು- ಮಸ್ತಿ, ಹೊರಗೆ ಸುತ್ತಾಟ, ಜೊತೆಗೆ ಬಾಡೂಟ, ಐಷರಾಮಿ ಜೀವನ.. ಸಂಘಟನೆಗಳ ಹೆಸರಲಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡ ಮೆರೆಯುವ ಯುವ ಪಡೆಗಳಿಗೆ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲ, ಸಂಘಟನೆಯ ನಾಯಕರು ಏಕೆ ತಿದ್ದಿ ತೀಡುತ್ತಿಲ್ಲಾ, ಗೋ ಸಂರಕ್ಷಣೆ ಮಾಡ್ತೀವಿ, ‘ರ್ಮ ಉಳಿಸುತ್ತೇವೆ ಎಂದು ಬೀಗುತ್ತಿದ್ದ ಕಾರ್ಯಕರ್ತ ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡು ಬಿಟ್ಟನಲ್ಲಾ, ಕುಡಿದು ಚಾಲನೆ ಮಾಡುವುದು ತಪ್ಪು ಎಂದು ಅವರಿಗೇಕೆ ಅನ್ನಿಸಲಿಲ್ಲಾ? ಸಂಘಟನೆಯಲ್ಲಿದ್ದೀನಿ, ನಾನು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎಂಬಂತೆ ವರ್ತಿಸಿ ಇಬ್ಬರ ಪ್ರಾಣಕ್ಕೆ ಎರವಾದ ಮಂಜು ಭಾರ್ಗವನಿಗೆ ಯಾವ ಶಿಕ್ಷೆ ಕೊಟ್ಟರು ಸಾಲದು ಎಂಬುದು ಭೀಕರ ಅಪಘಾತದ ದೃಶ್ಯ ನೋಡಿದವರ ಶಾಪದ ನುಡಿಯಾಗಿದೆ.

ಎಲ್ಲಾ ಸಂಘಟನೆಗಳಲ್ಲು ಇದ್ದಾರೆ ಇಂಥವರು!
ಸಂಘಟನೆಗಳು ಸಮಾಜದ ಹಿತ ಕಾಯುವಂತಿರಬೇಕು, ಸಾರ್ವಜನಿಕರಿಗೆ ನ್ಯಾಯ ಕೊಡಿಸುವಂತಿರಬೇಕು, ಇಂಥ ಕೆಲಸವನ್ನು ಕೆಲ ಸಂಘನೆಗಳು ಮಾಡುತ್ತವೆ, ಆದರೆ ಹಲವು ಸಂಘಟನೆಗಳು ತತ್ವ ಸಿದ್ಧಾಂತವನ್ನೆ ಬದಿಗಿಟ್ಟು, ಬೇರೆ ದಾರಿಯಲ್ಲಿ ಸಾಗುತ್ತವೆ, ಸಂಘಟನೆಗಳಲ್ಲಿ ಹಲವು ಮಂದಿ ತಾವು ಮಾಡಿದ್ದೇ ಕೆಲಸ, ಹೋಗಿದ್ದೇ ದಾರಿ ಎಂಬಂತೆ ವರ್ತಿಸುತ್ತಾರೆ.
ಕನ್ನಡಪರ ಸಂಘಟನೆಗಳು, ಜಾತಿ ಸಂಘಟನೆಗಳು ಹೀಗೆ ಯಾವುದೇ ಸಂಘಟನೆ ನೋಡಿದರೂ ಒಂದೊಂದು ಸಂಘಟನೆಯಲ್ಲು ಒಬ್ಬನಲ್ಲ ಒಬ್ಬ ದರ್ಪ ತೋರುವ, ದೌರ್ಜನ್ಯ ಮಾಡುವವರು ಸಿಕ್ಕೇ ಸಿಗುತ್ತಾರೆ, ಇಂಥವರಿಂದ ಸಮಾಜಕ್ಕೆ ಉಪಯೋಗವಿಲ್ಲ, ಮಂಜು ಭಾರ್ಗವ ಪ್ರಾಣ ತೆಗೆದ ರೀತಿ ಇವರು ಕೂಡ ಅಮಾಯಕ ಜನರ ಪಾಲಿಗೆ ಅಪಾಯಕಾರಿಯಾಗುತ್ತಾರೆ, ಇಂಥವರಿಗೆ ಬೆಂಬಲ ಕೊಡುವ, ಇವರು ತಪ್ಪು ಮಾಡಿದಾಗ ರಕ್ಷಣೆಗೆ ನಿಲ್ಲುವ ಜನಪ್ರತಿನಿಧಿಗಳು, ಪ್ರಭಾವಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಇಂಥವರನ್ನು ದೂರ ಇಡುವುದು ಒಳಿತು, ಇಲ್ಲವಾದಲ್ಲಿ ಮತ್ತಷ್ಟು ಜೀವಗಳಿಗೆ ಇವರು ಮಾರಕವಾಗುವುದರಲ್ಲಿ ಅನುಮಾನವಿಲ್ಲ.

Get real time updates directly on you device, subscribe now.

Comments are closed.

error: Content is protected !!