ತುಮಕೂರು: ರೈತರ ಏಳಿಗೆಗಾಗಿ ಹೆಚ್ಚಿನ ಸಾಲ ಒದಗಿಸುವ ಮೂಲಕ ಜಿಲ್ಲೆಯಲ್ಲಿರುವ ರೈತ ಉತ್ಪಾದಕ ಸಂಘಗಳನ್ನು ಬಲಿಷ್ಠಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಆತ್ಮನಿಭಾರ್ ಭಾರತ ಅಭಿಯಾನದಡಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಒಂದು ಜಿಲ್ಲೆ-ಒಂದು ಉತ್ಪನ್ನ ತೆಂಗು ಬೆಳೆ ಅವಲಂಬಿತ ಉತ್ಪನ್ನಗಳ, ಸಿರಿಧಾನ್ಯಗಳ ಮೌಲ್ಯವರ್ಧಿತ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ರೈತ ಉತ್ಪಾದಕರ ಸಂಘಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ನಬಾರ್ಡ್, ಬ್ಯಾಂಕ್ ನ ಅಧಿಕಾರಿಗಳು ಸಮನ್ವಯತೆಯಿಂದ ರೈತ ಉತ್ಪಾದಕರ ಸಂಘಗಳಿಗೆ ಸಾಲ ಒದಗಿಸುವ ಮೂಲಕ ಹೆಚ್ಚು ಬಲಿಷ್ಠಗೊಳಿಸಿ ಬೆನ್ನೆಲುಬಾಗಿ ನಿಂತಾಗ ಮಾತ್ರ ರೈತರು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರದಿಂದ ಕೃಷಿ ಉತ್ತೇಜಿಸಲು ಹಲವಾರು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಗಳ ಲಾಭ ಕಟ್ಟಕಡೆಯ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಆಯ್ಕೆಯಾಗಿರುವ ತೆಂಗು ಬೆಳೆ ಅವಲಂಬಿತ ಆಹಾರ ಕಿರು ಉದ್ದಿಮೆ, ಮಾರಾಟ ಮತ್ತು ಘಟಕಗಳನ್ನು ಸ್ಥಾಪಿಸುವ ಸಣ್ಣ ಉದ್ದಿಮೆದಾರರಿಗೆ ಸರ್ಕಾರದಿಂದ ನೀಡಲಾಗುವ ಸಹಾಯಧನ ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎಂದರು.
ಕೃಷಿಕರು ಉತ್ಪಾದಿಸಿದ ಬೆಳೆಯ ಸಂಸ್ಕರಣೆ, ಕೃಷಿಯಲ್ಲಿ ಹೊಸ ಸಂಶೋಧನೆಗಳ ಅಳವಡಿಕೆ ವಿಧಾನದ ಬಗ್ಗೆ ರೈತರಿಗೆ ಅರಿವು ಮೂಡಿಸಲು ಶ್ರಮಿಸುತ್ತಿರುವ ಸರ್ಕಾರ ಸ್ವಾಮ್ಯದ ಸಂಸ್ಥೆಯ ಲಾಭ ಪಡೆಯಬೇಕು, ದುಡಿಯುವ ರೈತನು ಹೊಸ ಸಂಶೋಧನೆ, ಸಂಸ್ಕರಣೆ ಹಾಗೂ ವ್ಯಾಪಾರದಿಂದ ಲಾಭ ಪಡೆಯಬೇಕೆನ್ನುವ ಸದುದ್ದೇಶದಿಂದ ಓಡಿಓಪಿ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ, ಓಡಿಓಪಿ ಕಾರ್ಯಕ್ರಮದಡಿ ಆಹಾರ ಸಂಸ್ಕರಣೆ ಉದ್ದಿಮೆಗಳನ್ನು ಪ್ರಾರಂಭಿಸಲು ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಘ ಹಾಗೂ ಸಹಕಾರ ಸಂಘಗಳಿಗೆ ಬಂಡವಾಳ ವೆಚ್ಚಕ್ಕಾಗಿ ಸಾಲ ಸೌಲಭ್ಯಯ ನೀಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆ, ಬ್ಯಾಂಕುಗಳು ಹಾಗೂ ರೈತರ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಅರ್ಹ ರೈತರಿಗೆ ಯೋಜನೆಯ ಲಾಭ ದೊರೆಯುತ್ತದೆ ಎಂದರಲ್ಲದೆ, ರೈತರು ತಾವು ಒಮ್ಮೆಲೆ ಹೆಚ್ಚಾಗಿ ಬೆಳೆ ಬೆಳೆದಾಗ ಸಂಸ್ಕರಣೆ ಮಾಡುವುದು ಯಕ್ಷ ಪ್ರಶ್ನೆಯಾಗುತ್ತದೆ, ಈ ನಿಟ್ಟಿನಲ್ಲಿ ಬೆಳೆ ಸಂಸ್ಕರಣೆ ಮಾಡಿ, ಸದರಿ ಬೆಳೆಯನ್ನು ಮತ್ತೊಂದು ಉತ್ಪನ್ನವಾಗಿ ಪರಿವರ್ತನೆ ಮಾಡುವ ರೈತ ಮಾತ್ರ ಅಭಿವೃದ್ಧಿ ಹೊಂದುತ್ತಾನೆ, ಸಂಸ್ಕರಣಾ ವಿಧಾನದ ಬಗ್ಗೆ ತಿಳಿದುಕೊಳ್ಳದಿದ್ದರೆ ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಹೊಂದುವ ಸಾಧ್ಯತೆ ಇರುತ್ತದೆ, ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ತೆಂಗು ಸಂಸ್ಕರಣಾ ಘಟಕಗಳನ್ನು ಹೊಸದಾಗಿ ಸ್ಥಾಪಿಸಲು, ಬ್ರಾಂಡಿಂಗ್ ಮಾರ್ಕೆಟಿಂಗ್ ಒದಗಿಸಲು, ಉನ್ನತೀಕರಣಗೊಳಿಸಲು, ವಿಸ್ತರಣೆ ಸಂಸ್ಥೆಗಳ ಬಲವರ್ದನೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕೆಪೆಕ್ ಸಂಸ್ಥೆಯ ಚಂದ್ರಕುಮಾರ್, ವಿಜ್ಞಾನಿ ಡಾ.ಹೃಷಿಕೇಶ್ ಎ. ತವನಂದಿ, ಮತ್ತಿತರ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ರಘು ಪ್ರಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ಕೃಷಿ ಸಹಾಯಕ ನಿರ್ದೇಶಕಿ ಲತಾ, ನಬಾರ್ಡ್ ವ್ಯವಸ್ಥಾಪಕಿ ಕೀರ್ತಿ, ದೀಪಕ್ ಸಿನ್ಹಾ ಸೇರಿದಂತೆ ಸ್ಟೆಪ್ಸ್, ಸಮೃದ್ಧಿ, ಜನರೇಷನ್, ರೀಸೋರ್ಸ್ ಇನ್ಸ್ಟಿಟ್ಯೂಷನ್ನ ಮುಖ್ಯಸ್ಥರು ಹಾಜರಿದ್ದರು.
ಸಾಲ ಒದಗಿಸಿ ರೈತ ಉತ್ಪಾದಕ ಸಂಘ ಬಲಿಷ್ಠಗೊಳಿಸಿ
ರೈತರಿಗೆ ಬೆನ್ನೆಲುಬಾಗಿ ಅಭಿವೃದ್ಧಿಗೆ ಸಹಕಾರ ನೀಡಿ: ಜಿಲ್ಲಾಧಿಕಾರಿ
Get real time updates directly on you device, subscribe now.
Prev Post
Comments are closed.