ತುಮಕೂರು: ತುಮಕೂರು ಸಹಕಾರಿ ಹಾಲು ಒಕ್ಕೂಟವು 1276 ಸಂಘಗಳಿಂದ 2021- 22ನೇ ಸಾಲಿನಲ್ಲಿ ದಿನವಹಿ ಸರಾಸರಿ (2022ರ ಫೆಬ್ರವರಿ ಅಂತ್ಯಕ್ಕೆ) 7,97,085 ಕೆ.ಜಿ. ಹಾಲನ್ನು ಶೇಖರಣೆ ಮಾಡಿದ್ದು, 2021ರ ಜೂನ್ 23ರಂದು 9,07,203 ಕೆಜಿ ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈಗಾಗಲೇ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಹಾಲು ಶೇಖರಣೆ ದಿನೇ ದಿನೆ ಕುಂಠಿತವಾಗುತ್ತಿದ್ದು, 2022ರ ಫೆಬ್ರವರಿ ಮಾಹೆ ಅಂತ್ಯಕ್ಕೆ ಸರಾಸರಿ 7,97,085 ಕೆಜಿ ಹಾಲು ಶೇಖರಣೆಯಾಗಿರುತ್ತದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 1276 ಸಂಘಗಳಲ್ಲಿ 2,84,411 ಜನ ಸದಸ್ಯರಿದ್ದು, ಇದರಲ್ಲಿ ಪ್ರತಿದಿನ 74,466 ಸಕ್ರಿಯ ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದಾರೆ.
ಒಕ್ಕೂಟದಲ್ಲಿ ಪ್ರಸ್ತುತ 2022ರ ಫೆಬ್ರುವರಿ ಮಾಹೆಯಲ್ಲಿ ದಿನವಹಿ ಸರಾಸರಿ 6.75 ಲಕ್ಷ ಕೆ.ಜಿ. ಹಾಲು ಶೇಖರಣೆಯಾಗಿದ್ದು, ಇದರಲ್ಲಿ ದಿನವಹಿ ಸರಾಸರಿ ಹಾಲು, ಮೊಸರು, ಯುಹೆಚ್.ಟಿ. ಹಾಗೂ ಅಂತರ ಡೇರಿ ಹಾಲಿನ ಮಾರಾಟ ಸೇರಿದಂತೆ ಒಟ್ಟು 5.06 ಲಕ್ಷ ಲೀಟರ್ ಗಳಷ್ಟು ಹಾಲು ದ್ರವ ರೂಪದಲ್ಲಿ ಮಾರಾಟವಾಗುತ್ತಿದ್ದು, ಉಳಿಕೆ 1.69 ಲಕ್ಷ ಲೀಟರ್ಗಳಷ್ಟು ಹಾಲು ಪರಿವರ್ತನೆಗೆ ರವಾನಿಸಲಾಗುತ್ತಿದೆ.
ಒಕ್ಕೂಟದಲ್ಲಿ ಮಾರ್ಚ್ 14ರ ಅಂತ್ಯಕ್ಕೆ ಅಂದಾಜು ದಾಸ್ತಾನು 32.68 ಕೋಟಿ ರೂ. ಮೌಲ್ಯದ 629.90 ಮೆಟ್ರಿಕ್ ಟನ್ ಬೆಣ್ಣೆ, 470.84 ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ಹಾಗೂ 74.05 ಮೆಟ್ರಿಕ್ ಟನ್ ಕೆನೆಭರಿತ ಹಾಲಿನ ಪುಡಿ ದಾಸ್ತಾನು ಇರುತ್ತದೆ.
ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ಸಹ ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2021- 22ನೇ ಸಾಲಿನಲ್ಲಿ ಸರಾಸರಿ 2,65,677 ಲೀಟರ್ ಮತ್ತು 2021ರ ಆಗಸ್ಟ್ 20ರಂದು 2,89,698 ಲೀಟರ್ ಹಾಲನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಲಾಗಿದೆ. ಮುಂಬೈ ಮಹಾನಗರದಲ್ಲಿ 2021-22ನೇ ಸಾಲಿನಲ್ಲಿ ಪ್ರಸ್ತುತ ದಿನವಹಿ ಸರಾಸರಿ 1,05,585 ಲೀಟರ್ ಹಾಲು ಮಾರಾಟವಾಗುತ್ತಿಿದ್ದು, 2021ರ ಆಗಸ್ಟ್ 17ರಂದು ಅತಿ ಹೆಚ್ಚು 1,58,070 ಲೀಟರ್ ಹಾಲಿನ ಮಾರಾಟ ಮಾಡಲಾಗಿದೆ.
ಒಕ್ಕೂಟವು 2021-22ನೇ ಸಾಲಿನಲ್ಲಿ ನಷ್ಟದಿಂದಲೇ ಬಂದಿರುತ್ತದೆ. ಆದರೂ ಸಹ ಹಾಲಿನ ದರವನ್ನು ರೈತರ ಹಿತದೃಷ್ಟಿಯಿಂದ ಕಡಿಮೆ ಮಾಡಿರುವುದಿಲ್ಲ, 2022ರ ಫೆಬ್ರವರಿ ಮಾಹೆಯಲ್ಲಿ ಲಾಭ- ನಷ್ಟದ ಪ್ರಕಾರ 4.59 ಕೋಟಿ ರೂ. ಲಾಭ ಹೊಂದಿರುತ್ತದೆ. ಫೆಬ್ರವರಿ ಅಂತ್ಯಕ್ಕೆ ಒಕ್ಕೂಟವು 2.19 ಕೋಟಿ ರೂ.ಗಳ ಕ್ರೋಢೀಕೃತ ನಿವ್ವಳ ಲಾಭ ಹೊಂದಿದೆ.
ಪ್ರಸ್ತುತ ಬೇಸಿಗೆಕಾಲ ಮತ್ತು ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆಯೂ ಸಹ ಕಡಿಮೆಯಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಆಡಳಿತ ಮಂಡಳಿಯು ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರವನ್ನು ಮಾರ್ಚ್ 16ರ ಬುಧವಾರದಿಂದ ಜಾರಿಗೆ ಬರುವಂತೆ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ 2.50 ರೂ. ನಂತೆ ಹೆಚ್ಚಿಸಲಾಗಿದ್ದರೂ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ.
ಹಾಲು ಉತ್ಪಾದಕರಿಗೆ 3.5 ಜಿಡ್ಡಿನಾಂಶ ಇರುವ ಹಾಲಿಗೆ 27.50 ರೂ., ಸಂಘಗಳಿಗೆ 28.43 ರೂ.ನಂತೆ ಹಾಗೂ ಹಾಲು ಉತ್ಪಾದಕರಿಗೆ 4.1 ಜಿಡ್ಡಿನಾಂಶ ಇರುವ ಹಾಲಿಗೆ 28.92 ರೂ., ಸಂಘಗಳಿಗೆ 29.85 ರೂ.ನಂತೆ ನೀಡಲಾಗುವುದು.
ಒಕ್ಕೂಟದಿಂದ ಫೆಬ್ರವರಿ2021ರಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ.ಗಳನ್ನು ಹೆಚ್ಚಿಸಿ ಉತ್ಪಾದಕರಿಗೆ 3.5 ಜಿಡ್ಡಿನಾಂಶ ಇರುವ ಹಾಲಿಗೆ 25 ರೂ. ನೀಡಲಾಗುತ್ತಿತ್ತು. 2021- 2022ನೇ ಸಾಲಿನ ಅಂತ್ಯದಲ್ಲಿ ಹಾಲಿನಪುಡಿ ಹಾಗೂ ಬೆಣ್ಣೆಗೆ ಉತ್ತಮ ಧಾರಣೆ ದೊರಕಿರುವ ಹಿನ್ನೆಲೆಯಲ್ಲಿ ಒಕ್ಕೂಟವು ಲಾಭಗಳಿಸಿರುವುದರಿದ ಒಕ್ಕೂಟದ ಬೆಳವಣಿಗೆಗೆ ಶ್ರಮಿಸಿ, ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡುವ ಧ್ಯೇಯದಿಂದ ಮಾರ್ಚ್ 16 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.50 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಒಕ್ಕೂಟದಿಂದ 2020-21ನೇ ಸಾಲಿನಲ್ಲಿ ಸಂಘಗಳಿಗೆ ಶೇರ್ ಡಿವಿಡೆಂಟ್ ಮೊತ್ತ 2,71,19,245.37 ರೂ. ಹಾಗೂ ಬೋನಸ್ ಮೊತ್ತ 49,30,771 ರೂ. ಸೇರಿದಂತೆ ಒಟ್ಟು 3,20,50,016.37 ರೂ. ಮೊತ್ತ ಪಾವತಿಸಲಾಗಿದೆ.
ಕೇಂದ್ರ ಸರ್ಕಾರದ ದುಡಿಯುವ ಬಂಡವಾಳ ಯೋಜನೆಯಡಿ ಒಕ್ಕೂಟವು 90 ಕೋಟಿ ರೂ. ಮೊತ್ತವನ್ನು ಶೇ. 5.7ರ ಬಡ್ಡಿ ದರದಲ್ಲಿ ಸಾಲ ಪಡೆದಿದ್ದು, ರೈತರಿಗೆ ಕಾಲ ಕಾಲಕ್ಕೆ ಬಟವಾಡೆ ಪಾವತಿಸಲಾಗಿದ್ದು, ಏಪ್ರಿಲ್ 2021ರಲ್ಲಿ ಪ್ರಾರಂಭಿಕ ಸಾಲ 5.85 ಕೋಟಿ ರೂ., 2021-22ನೇ ಸಾಲಿನಲ್ಲಿ ಮಾರ್ಚ್ 22 ರಲ್ಲಿ 143.55 ಕೋಟಿ ರೂ.ಗಳ ಸಾಲ ಪಡೆದಿದೆ. ಒಟ್ಟು 150.65 ಕೋಟಿ ರೂ. ಸಾಲ ಪಡೆದು, 2021-22ನೇ ಸಾಲಿನಲ್ಲಿ 148.94 ಕೋಟಿ ರೂ.ಗಳ ಸಾಲ ತೀರಿಸಲಾಗಿದ್ದು, 1.71 ಕೋಟಿ ರೂ. ಗಳ ಸಾಲ ಬಾಕಿ ಉಳಿದಿದೆ.
ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿಕೊಂಡು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿರುವುದಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜೊತೆಗೆ ಕರ್ನಾಟಕ ಘನ ಸರ್ಕಾರದ 5.00 ರೂ. ಪ್ರೋತ್ಸಾಹ ಧನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚು ಹೆಚ್ಚಿನ ಹಾಲಿನ ಉತ್ಪಾದನೆ ಮಾಡಲು, ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ಸಮಸ್ತ ರೈತರಲ್ಲಿ ಮನವಿ ಮಾಡಿದರು.
ಆಡಳಿತ ಮಂಡಳಿ ಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಎಂ.ಕೆ ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್, ಹೆಚ್.ಬಿ.ಶಿವನಂಜಪ್ಪ, ಜಿ.ಚಂದ್ರಶೇಖರ್, ಡಿ.ಕೃಷ್ಣಕುಮಾರ್, ಹೆಚ್.ಕೆ.ರೇಣುಕಾಪ್ರಸಾದ್, ಎಸ್.ಆರ್.ಗೌಡ, ಈಶ್ವರಯ್ಯ, ಚನ್ನಮಲ್ಲಪ್ಪ, ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕ ಎಸ್.ಆರ್. ಜಗದೀಶ್ ಹಾಜರಿದ್ದರು.
9.07 ಲಕ್ಷ ಕೆಜಿ ಹಾಲು ಶೇಖರಿಸಿ ದಾಖಲೆ ನಿರ್ಮಿಸಿದ ಒಕ್ಕೂಟ
Get real time updates directly on you device, subscribe now.
Next Post
Comments are closed.