ಜಿಲ್ಲಾ ಗೃಹರಕ್ಷಕ ದಳದಿಂದ ಸ್ವಚ್ಛತಾ ಆಂದೋಲನ

156

Get real time updates directly on you device, subscribe now.

ತುಮಕೂರು: ಇತಿಹಾಸ ಪ್ರಸಿದ್ದ ಶ್ರೀಸಿದ್ದಗಂಗಾ ಮಠದಲ್ಲಿ ಜಿಲ್ಲಾ ಗೃಹರಕ್ಷದ ದಳ ತುಮಕೂರು ಘಟಕ ಹಾಗೂ ಊರ್ಡಿಗೆರೆ ಘಟಕದ ವತಿಯಿಂದ ಶ್ರಮದಾನ ಮತ್ತು ಸ್ವಚ್ಛತಾ ಆಂದೋಲನ ನಡೆಸಲಾಯಿತು.

ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಅನುಮತಿ ಮೇರೆಗೆ ಹಾಗೂ ಜಿಲ್ಲಾ ಗೃಹರಕ್ಷದ ದಳದ ಸಮಾದೇಷ್ಟರ ಆದೇಶದ ಮೇರೆಗೆ ಇಡೀ ಶ್ರೀಮಠದ ಆವರಣದಲ್ಲಿ ಸ್ಪಚ್ಛತಾ ಕಾರ್ಯ ನಡೆಸಲಾಯಿತು.
ಸಿದ್ದಗಂಗೆಯಲ್ಲಿ ನಡೆದ ಜಾತ್ರೆ ಹಾಗೂ ಮಹಾಶಿವರಾತ್ರಿ ಸಂದರ್ಭದಲ್ಲಿ ಶ್ರೀಮಠದ ಆವರಣದಲ್ಲಿ ಕಂಡು ಬಂದಿದ್ದ ಪ್ಲಾಸ್ಟಿಕ್, ತಟ್ಟೆ, ಲೋಟ ಸೇರಿದಂತೆ ಇನ್ನಿತರೆ ಅನೈರ್ಮಲ್ಯತೆ ಹಾಗೂ ಪರಿಸರವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಗೃಹರಕ್ಷಕ ದಳದ ಸಮಾದೇಷ್ಟ ಪಾತಣ್ಣ ನೇತೃತ್ವದಲ್ಲಿ ಸಿಬ್ಬಂದಿ ಮಾಡಿದರು.
ಶ್ರೀಮಠದ ಆವರಣದಾದ್ಯಂತ ಬಿದ್ದಿದ್ದ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ ಮಠದ ಆವರಣವನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರಮದಾನದ ಮೂಲಕ ಸಂಪೂರ್ಣ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ರಕ್ಷಕ ದಳದ ಸಮಾದೇಷ್ಟ ಪಾತಣ್ಣ, ಸಿದ್ದಗಂಗಾ ಮಠಾಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಅನುಮತಿ ಪಡೆದು ಶ್ರೀಮಠದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು, ಇಂತಹ ಪುಣ್ಯಭೂಮಿಯ ಸ್ವಚ್ಛತೆ ಕಾಪಾಡುವುದು ನಮಗೆ ದೊರೆತಿರುವ ಪುಣ್ಯದ ಕೆಲಸ ಎಂದರು.
ಮಹಾಶಿವರಾತ್ರಿ ಮತ್ತು ಜಾತ್ರೆ ಸಂದರ್ಭದಲ್ಲಿ ಭಕ್ತರು, ಜನಸಾಮಾನ್ಯರು ಶ್ರೀಮಠದ ಆವರಣದಲ್ಲಿ ಬಿಸಾಡಿ ಹೋಗಿದ್ದ ಪ್ಲಾಸ್ಟಿಕ್, ತಟ್ಟೆ, ಲೋಟ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ನಮ್ಮ ಗೃಹ ರಕ್ಷಕ ಸಿಬ್ಬಂದಿ ಶ್ರಮದಾನದ ಮೂಲಕ ಸ್ವಚ್ಛಗೊಳಿದ್ದಾರೆ. ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಲು ಮುಂದಾಗಬೇಕು, ನಾವಿರುವ ಸ್ಥಳವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ನಡೆದಾಡುವ ದೇವರು ಸಂಚರಿಸಿದ ಜಾಗದಲ್ಲಿ, ತ್ರಿವಿಧ ದಾಸೋಹದ ಪುಣ್ಯ ನೆಲದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಮಾಡಲು ಅವಕಾಶ ದೊರೆತಿರುವುದು ಗೃಹ ರಕ್ಷಕ ದಳದ ಸಿಬ್ಬಂದಿಯ ಭಾಗ್ಯ, ಇದೊಂದು ಸಾರ್ಥಕ ಕೆಲಸವಾಗಿದೆ, ನಮಗೆ ಸ್ವಚ್ಛತಾ ಅಭಿಯಾನ ನಡೆಸಲು ಅನುಮತಿ ನೀಡಿದ ಶ್ರೀಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಶ್ರೀಮಠದ ಕಾರ್ಯಕ್ರಮಗಳಿಗೆ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಹೋಂಗಾರ್ಡ್ಸ್ ಸಿಬ್ಬಂದಿ ಶ್ರೀಗಳು ಊಟ, ವಸತಿ ನೀಡಿ ಹರಸುತ್ತಾರೆ, ಇಂತಹ ಪುಣ್ಯ ಭೂಮಿಯನ್ನು ಕಸಮುಕ್ತ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಅನ್ನ ದಾಸೋಹ, ವಿದ್ಯಾ ದಾಸೋಹ, ವಸತಿ ದಾಸೋಹಕ್ಕೆ ಹೆಸರಾಗಿರುವ ಶ್ರೀಮಠದಲ್ಲಿ ಗೃಹ ರಕ್ಷಕ ದಳದ ವತಿಯಿಂದ ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ, ಇದೇ ರೀತಿ ಅಗತ್ಯವಿದ್ದಾಗ ಬಂದು ಸ್ವಚ್ಛತೆ ಮಾಡುವಂತೆ ಶ್ರೀಮಠದ ವತಿಯಿಂದ ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!