ತುಮಕೂರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕು ಬಾಳೆಹೊನ್ನೂರು ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ತುಮಕೂರಿನ ಸಂಸದ ಜಿ.ಎಸ್.ಬಸವರಾಜು ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ರೋಲ್ ಮಾಡೆಲ್ ವ್ಯಕ್ತಿತ್ವ ಹೊಂದಿರುವ ತುಮಕೂರಿನ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರಿಗೆ ಕೊಡಮಾಡಿರುವ ಜಗದ್ಗುರು ರೇಣುಕಾ ಚಾರ್ಯರ ಪ್ರಶಸ್ತಿಯು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ, ಇಂದು ತುಮಕೂರಿನ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದು, ಇಳೀ ವಯಸ್ಸಿನಲ್ಲೂ ತಮ್ಮ ಕ್ಷೇತ್ರದ ಜನತೆಯ ಪರವಾಗಿ ಲೋಕಸಭೆಯಲ್ಲಿ ಹಲವಾರು ನೀರಾವರಿ ಯೋಜನೆ ಜಾರಿಗೆ ತಂದಂತಹ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿ ವಾಚನ ಮಾಡಿ ಮಾತನಾಡಿ, ಪ್ರಶಸ್ತಿಯನ್ನು ರಾಜಕೀಯ ಮುತ್ಸದ್ಧಿದ್ದಿಗಳಿಗಷ್ಟೇ ಕೊಡುತ್ತಿಲ್ಲ, ಹಲವಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವುದನ್ನು ಮನಗಂಡು ಈ ಪ್ರಶಸ್ತಿ ನೀಡಲಾಗುತ್ತಿದೆ, ೮೦ರ ಇಳಿ ವಯಸ್ಸಿನಲ್ಲೂ ಲೋಕಸಭಾ ಸದಸ್ಯರಾಗಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ, ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯವನ್ನು ೧೫ ಕೋಟಿ ರೂ. ಬಳಸಿ ಅಭಿವೃದ್ಧಿ ಮಾಡಿದ್ದಾರೆ, ಅದೇ ರೀತಿ ತುಮಕೂರಿನ ಶಿರಡಿ ಸಾಯಿಬಾಬಾ ಮಂದಿರ ಸೇರಿದಂತೆ ಹಲವಾರು ದೇವಾಲಯಗಳನ್ನು ಅಭಿವೃದ್ಧಿಪಡಿಸಿರುವುದರ ಜೊತೆಗೆ ನೀರಾವರಿಗೂ ಹೆಚ್ಚಿನ ಆದ್ಯತೆ ನೀಡಿ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಸ್ವೀಕರಿಸಿದ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಇಂದು ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುತ್ತಿದ್ದರೆ ಮೂರನೇ ಪ್ರಪಂಚ ಯುದ್ಧ ನಡೆಯುತ್ತದೆಯೇನೋ ಎಂಬಂತೆ ಭಾಸವಾಗುತ್ತಿದ್ದು, ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಅನ್ಯೋನ್ಯವಾಗಿ ಸಹೋದರರಂತೆ ಸಹಬಾಳ್ವೆಯ ಜೀವನ ನಡೆಸುತ್ತಿದ್ದು, ಮತ್ತೊಂದೆಡೆ ಜಗದ್ಗುರುಗಳು ಶಾಂತಿ ಸಂದೇಶ ಸಾರುವ ಮೂಲಕ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರನ್ನು ಹಲವಾರು ಬಾರಿ ಭೇಟಿ ಮಾಡಿ ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಯೋಜನೆಗಳ ಮಂಜೂರಿಗೆ ಶ್ರಮಿಸಿದ್ದಾನೆ, ಇದರಿಂದ ತುಮಕೂರು ಜಿಲ್ಲೆಯ ರೈತರು, ಅಡಿಕೆ, ತೆಂಗು ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಮೃದ್ಧರಾಗಿದ್ದಾರೆ, ಕೆಲ ರೈತರು ಕಷ್ಟಪಟ್ಟು ವ್ಯವಸಾಯ ಮಾಡಿ ಜೀವನ ಸಾಗಿಸಿದರೆ, ಇನ್ನೂ ಕೆಲವರು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನೇ ದುಸ್ಥಿತಿಗೆ ತಂದುಕೊಳ್ಳುತ್ತಾರೆ, ಆದ್ದರಿಂದ ರೈತರು ಸರ್ಕಾರದಿಂದ ಸಿಗುವ ಸವಲತ್ತು ಬಳಸಿಕೊಂಡು ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಮಾಡುವ ಮುಖೇನ ಆರ್ಥಿಕವಾಗಿ ಸದೃಢವಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ, ವಿಮಲ ರೇಣುಕ ವೀರಮುಕ್ತಿ ಶಿವಾಚಾರ್ಯ ಸ್ವಾಮೀಜಿ, ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಕಾಶ ಬೆಂಡಿಗೇರಿ, ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ.ಕೃಷ್ಣಾರೆಡ್ಡಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ. ಗುಂಗೆ, ಟಿಎಪಿಎಂಎಸ್ ಲಿ., ಹುಬ್ಬಳ್ಳಿ ಅಧ್ಯಕ್ಷ ಬಿ.ಡಿ.ನಾಗನಗೌಡ, ಸಂಗಮೇಶ ಉತ್ತಂಗಿ ಇನ್ನಿತರರು ಇದ್ದರು.
ಜಿ.ಎಸ್.ಬಿ ಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ
Get real time updates directly on you device, subscribe now.
Next Post
Comments are closed.