ಜೇಮ್ಸ್ ನೋಡಲು ಅಭಿಮಾನಿಗಳ ಸಾಗರ

ಚಿತ್ರಮಂದಿರಗಳಲ್ಲಿ ರಾರಾಜಿಸಿದ ಪುನೀತ್ ಕಟೌಟ್- ಅಪ್ಪು ಅಬ್ಬರಕ್ಕೆ ಪ್ಯಾನ್ಸ್ ಫಿದಾ

198

Get real time updates directly on you device, subscribe now.

ತುಮಕೂರು: ಕನ್ನಡ ಚಲನಚಿತ್ರ ರಂಗದ ಮೇರುನಟ, ಅಭಿಮಾನಿಗಳ ಪಾಲಿನ ನೆಚ್ಚಿನ ಅಪ್ಪು, ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ೪೭ನೇ ಹುಟ್ಟುಹಬ್ಬ ಹಾಗೂ ಅವರು ಅಭಿನಯಿಸಿರುವ ಕೊನೆಯ ಸಿನಿಮಾ ಜೇಮ್ಸ್ ಚಿತ್ರ ಬಿಡುಗಡೆಯ ಸಂಮ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ ಮಾಡಿದ್ದು, ಕಲ್ಪತರು ನಾಡಿನಲ್ಲೂ ಜೇಮ್ಸ್ ಚಿತ್ರದ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿತ್ತು.

ಜಿಲ್ಲೆಯ ೧೦ ತಾಲ್ಲೂಕುಗಳಲ್ಲೂ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅವರ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಆಚರಿಸಿದರು. ಹಾಗೆಯೇ ಜೇಮ್ಸ್ ಚಿತ್ರ ಕೂಡಾ ಎಲ್ಲೆಡೆ ಬಿಡುಗಡೆಯಾಗಿದ್ದು, ಚಿತ್ರ ವೀಕ್ಷಿಸಿದ ಅಭಿಮಾನಿಗಳು ಹರ್ಷೋದ್ಘಾರ, ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಕಂಡು ಬಂದವು.
ನಗರದ ಗಾಯತ್ರಿ ಚಿತ್ರಮಂದಿರ, ಮಾರುತಿ ಚಿತ್ರಮಂದಿರ ಹಾಗೂ ಎಸ್ ಮಾಲ್ ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ಬೆಳಗ್ಗೆ ೫.೩೦ ರಿಂದಲೇ ಚಿತ್ರ ಪ್ರದರ್ಶನ ಆರಂಭವಾಯಿತು. ಮುಂಜಾನೆಯ ಚಿತ್ರಪ್ರದರ್ಶನಕ್ಕೆ ಮೂರೂ ಚಿತ್ರಮಂದಿರಗಳೂ ಹೌಸ್ ಫುಲ್ ಆಗಿದ್ದು, ತೆರೆಯ ಮೇಲೆ ತಮ್ಮ ನೆಚ್ಚಿನ ಅಪ್ಪು ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ತೆರೆಗೆ ಪುಷ್ಪವೃಷ್ಠಿ ಸುರಿಸಿ ಅಪ್ಪುಗೆ ಜೈಕಾರದ ಸುರಿಮಳೆ ಸುರಿಸಿ ಸಂಭ್ರಮಿಸಿದರು.
ಗಾಯತ್ರಿ ಚಿತ್ರಮಂದಿರದಲ್ಲಿ ಬೆಳಗ್ಗೆ ೫.೩೦ಕ್ಕೆ ಮೊದಲನೇ ಶೋ, ೮.೪೫, ಮದ್ಯಾಹ್ನ ೧೨ ಗಂಟೆ, ೩.೧೩ ಗಂಟೆ, ಸಂಜೆ ೬.೩೦ ಮತ್ತು ರಾತ್ರಿ ೯.೪೫ ಗಂಟೆಗೆ ಸೇರಿದಂತೆ ಒಟ್ಟು ೬ ಪ್ರದರ್ಶನ ನಡೆದವು, ಹಾಗೆಯೇ ಮಾರುತಿ ಚಿತ್ರಮಂದಿರದಲ್ಲೂ ೫ ಪ್ರದರ್ಶನ ಏರ್ಪಡಿಸಲಾಗಿತ್ತು. ಎಸ್ ಮಾಲ್ ನಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ೧೬ ರಿಂದ ೧೭ ಬಾರಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಈ ಎಲ್ಲಾ ಚಿತ್ರಮಂದಿರಗಳಲ್ಲೂ ಟಿಕೆಟ್ ಈಗಾಗಲೇ ಶೋಲ್ಡ್ ಔಟ್ ಆಗಿದ್ದು, ಮದ್ಯಾಹ್ನ, ಸಂಜೆಯ ಪ್ರದರ್ಶನಗಳಿಗೂ ಟಿಕೆಟ್ ಸಿಗದೆ ಪ್ರೇಕ್ಷಕರು, ಅಭಿಮಾನಿಗಳು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ಜೇಮ್ಸ್ ಚಿತ್ರ ಪ್ರದರ್ಶನಗೊಳ್ಳುತ್ತಿರುವ ೩ ಚಿತ್ರಮಂದಿರಗಳು ಸೇರಿದಂತೆ ನಗರದಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಫ್ಲೆಕ್ಸ್ಗಳು, ಆಳೆತ್ತರ ಕಟೌಟ್ ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳಿಂದ ಪುನೀತ್ ಕಟೌಟ್ ಗಳಿಗೆ ಪುಷ್ಪನಮನ, ಹಾಲಿನ ಅಭಿಷೇಕ ನಡೆಯಿತು.
ನಗರದ ಗಾಯತ್ರಿ ಚಿತ್ರಮಂದಿರದಲ್ಲಿ ಪಾಲುದಾರರಾದ ರುದ್ರಪ್ಪನವರ ನೇತೃತ್ವದಲ್ಲಿ ಬೆಳಗ್ಗೆಯೇ ಪುನೀತ್ ರಾಜ್ ಕುಮಾರ್ ಅವರ ೪೭ನೇ ಹುಟ್ಟುಹಬ್ಬ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ನೆರೆದಿದ್ದ ಅಭಿಮಾನಿಗಳು ಸಿಹಿ ತಿಂದು ಚಿತ್ರ ವೀಕ್ಷಣೆಗೆ ಮುನ್ನ ಅಪ್ಪು ನೆನೆದು ಕಣ್ಣೀರಧರೆ ಹರಿಸಿ ಭಾವುಕರಾದ ಪ್ರಸಂಗವೂ ನಗರದೆಲ್ಲೆಡೆ ಕಂಡು ಬಂದವು.
ನಗರದ ಬಿ.ಹೆಚ್.ರಸ್ತೆ, ಎಸ್.ಎಸ್.ಪುರಂ ರಸ್ತೆ, ಎಂ.ಜಿ.ರಸ್ತೆ, ಮಂಡಿಪೇಟೆ ರಸ್ತೆ, ಎಸ್ಎಸ್ಐಟಿ ರಸ್ತೆ, ಎಸ್ಐಟಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲೂ ಪುನೀತ್ ರಾಜ್ ಕುಮಾರ್ ಅವರ ಫ್ಲೆಕ್ಸ್ಗಳು, ಕಟೌಟ್ ಗಳು ರಾರಾಜಿಸುತ್ತಿದ್ದು, ಗಲ್ಲಿಗಲ್ಲಿಯಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ಅಪ್ಪುವಿನ ಹುಟ್ಟುಹಬ್ಬ ಆಚರಿಸಿ, ಅಪ್ಪುಗೆ ಜೈಕಾರಗಳ ಸುರಿಮಳೆಗೈದರು.
ಮತ್ತೆ ಹುಟ್ಟಿ ಬಾ ಅಪ್ಪು.. ಎಂಬ ಘೋಷಣೆಗಳು ಅಭಿಮಾನಿಗಳಿಂದ ಮೊಳಗಿದ್ದು ವಿಶೇಷವಾಗಿತ್ತು, ಅಪ್ಪು ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳು ಅನ್ನ ದಾಸೋಹ ನಡೆಸುವ ಮೂಲಕ ಪುನೀತ್ ರಾಜ್ ಕುಮಾರ್ ಅವರ ಸಾರ್ಥಕ ಸಮಾಜ ಸೇವೆಗೆ ಸಾಕ್ಷಿಯಾದರು.
ಜೇಮ್ಸ್ ಚಿತ್ರ ಪ್ರದರ್ಶನ ಬಿಡುಗಡೆ ಮತ್ತು ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದು ಒಂದೆಡೆಯಾದರೆ ಇಂದು ಅಪ್ಪು ನಮ್ಮೊಂದಿಗಿಲ್ಲ ಎನ್ನುವ ದುಃಖ ಸಹ ಅಭಿಮಾನಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಪುನೀತ್ ರಾಜ್ ಕುಮಾರ್ ಅವರ ಮೊದಲ ಚಿತ್ರ ಅಪ್ಪು ಮತ್ತು ಕೊನೆಯ ಚಿತ್ರ ಜೇಮ್ಸ್ ಸಿನಿಮಾ ಪ್ರದರ್ಶನವನ್ನು ನಮ್ಮ ಚಿತ್ರಮಂದಿರದಲ್ಲೇ ನಡೆಸುತ್ತಿರುವುದು ನಮಗೆ ಸಂತಸ ತಂದಿದೆ, ಆದರೆ ಅಪ್ಪು ಅವರು ನಮ್ಮನ್ನು ಅಗಲಿರುವ ದುಃಖ ಎಂದೆಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಯುವರತ್ನ ಚಿತ್ರ ಸಹ ನಮ್ಮ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಆದರೆ ಲಾಕ್ ಡೌನ್ ಆದ ಕಾರಣ ಒಂದೇ ವಾರಕ್ಕೆ ಪ್ರದರ್ಶನ ಸ್ಥಗಿತಗೊಂಡಿತು ಎಂದು ಗಾಯತ್ರಿ ಚಿತ್ರಮಂದಿರದ ಪಾಲುದಾರ ರುದ್ರಪ್ಪ ನೆನಪುಗಳನ್ನು ಮೆಲುಕು ಹಾಕಿದರು.

Get real time updates directly on you device, subscribe now.

Comments are closed.

error: Content is protected !!