ತುಮಕೂರು: ನಗರದ ಗಂಗೋತ್ರಿ ಬಡಾವಣೆಯ ಐ ಟ್ಯೂನ್ ಆಪ್ಟಿಕಲ್ಸ್ನಲ್ಲಿ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಚಕ್ರವರ್ತಿ ಗೆಳೆಯರ ಬಳಗ, ನೇತಾಜಿ ಬಳಗ ಹಾಗೂ ಕನ್ನಡ ಸೇನೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಸಾರ್ವಜನಿಕರಿಗೆ ಅನ್ನಸಂಪರ್ತಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಪುನೀತ್ ರಾಜಕುಮಾರ್ ತಮ್ಮ ವೈಯಕ್ತಿಕ ಜೀವನದಲ್ಲಾಗಲಿ, ಸಾರ್ವಜನಿಕ ಜೀವನದಲ್ಲಾಗಲಿ ಒಂದು ಸಣ್ಣ ಕಪ್ಪುಚುಕ್ಕಿ ಬರದಂತೆ ನಡೆದುಕೊಂಡವರು, ಡಾ.ರಾಜಕುಮಾರ್ ಅವರ ಪುತ್ರರಾಗಿ, ಮಾಡಿದ ದಾನ, ಧರ್ಮಗಳಿಗೆ ಎಣ್ಣೆಯಿಲ್ಲ, ಅನಾಥಾಲಯ, ವೃದ್ಧಾಶ್ರಮ, ಗೋಶಾಲೆಗಳು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಆಶಕ್ತರಿಗೆ ವೈದ್ಯಕೀಯ ನೆರವು ಇವೆಲ್ಲವನ್ನು ಎಲೆಮೆರೆಯ ಕಾಯಿಯಂತೆ ಇದ್ದು, ನಡೆಸಿಕೊಂಡು ಬಂದಿರುವುದಲ್ಲದೆ, ತಾನು ನಡೆಸುತ್ತಿದ್ದ ಸಂಸ್ಥೆಗಳು ಮುಂದೆ ಆರ್ಥಿಕ ಕೊರತೆ ಎದುರಿಸಬಾರದು ಎಂಬ ಕಾರಣಕ್ಕೆ ಅದಕ್ಕೆ ಬೇಕಾದ ಹಣ ಮೀಸಲಿರಿಸಿ ಹೋಗಿದ್ದಾರೆ. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೆ, ಜನಸಾಮಾನ್ಯರಿಗೆ ತುಂಬಲಾರದ ನಷ್ಟ ಉಂಟಾಗಿದೆ, ಅವರ ದಾರಿಯಲ್ಲಿ ನಾವೆಲ್ಲರೂ ನಡೆಯುವುದೇ ಅವರಿಗೆ ನೀಡುವ ನಿಜವಾದ ಕಾಣಿಕೆ ಎಂದರು.
ತುಮಕೂರು ನಗರದ ಕೋತಿ ತೋಪಿನಿಂದ ಆರಂಭವಾಗಿ ಬೆಳಗುಂಬಕ್ಕೆ ಸಾಗುವ ದೇವರಾಯನದುರ್ಗದ ರಸ್ತೆಗೆ ಪುನಿತ್ ರಾಜಕುಮಾರ್ ಅವರ ಹೆಸರಿಡಬೇಕೆಂಬುದು ಹಲವರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಆಡಳಿತ ಮಂಡಳಿ ಮತ್ತು ಜಿಲ್ಲಾಢಳಿತ ಸೂಕ್ತ ಕ್ರಮ ಕೈಗೊಂಡು, ಸದರಿ ರಸ್ತೆಗೆ ಪುನಿತ್ ರಾಜಕುಮಾರ ಅವರ ಹೆಸರಿಟ್ಟು, ಅವರ ಹೆಸರನ್ನು ಶಾಶ್ವತಗೊಳಿಸಬೇಕೆಂದು ಮನವಿ ಮಾಡುವುದಾಗಿ ಧನಿಯಕುಮಾರ್ ತಿಳಿಸಿದರು.
ನಗರಪಾಲಿಕೆ ೨೭ನೇ ವಾರ್ಡಿನ ಸದಸ್ಯೆ ಚಂದ್ರಕಲಾ ಪುಟ್ಟರಾಜು ಮಾತನಾಡಿ, ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಚಿಕ್ಕ ಮಗುವಿನ ರೀತಿ ಇರುತ್ತಾರೆ ಎಂಬುದಕ್ಕೆ ಡಾ.ರಾಜ್ಕುಮಾರ್ ಹಾಗೂ ಅವರ ಪುತ್ರ ಪುನಿತ್ ರಾಜಕುಮಾರ್ ಅವರೆ ಉದಾಹರಣೆ, ಪುನೀತ್ ರಾಜ್ಕುಮಾರ್ ಅವರು ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ಆವರು ಮಾಡಿದ ದಾನ, ಧರ್ಮ ಅವರ ಸಾವಿನ ನಂತರ ಪ್ರಪಂಚಕ್ಕೆ ಗೊತ್ತಾಯಿತು, ಅವರ ಆದರ್ಶನಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಪುನೀತ್ ಅವರ ದಾರಿಯಲ್ಲಿ ಸಾಗೋಣ ಎಂದರು.
ತುಮಕೂರು ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ನಾಡಿನಾದ್ಯಂತ ಹಲವಾರು ಜನಪರ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆ, ಇದು ಮತ್ತೊಬ್ಬರಿಗೆ ಸ್ಪೂರ್ತಿ ನೀಡುತ್ತದೆ ಎಂದರು.
ಐಟ್ಯೂನ್ ಆಪ್ಟಿಕಲ್ಸ್ನ ಭರತ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಣ್ಣಿನ ತಪಾಸಣಾ ಶಿಬಿರದಲ್ಲಿ ಐದು ನೂರು ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು, ಅಲ್ಲದೆ ಮುಂದಿನ ಒಂದು ತಿಂಗಳ ಕಾಲ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ, ರಾಕ್ಲೈನ್ ರವಿಕುಮಾರ್, ನೇತಾಜಿ ಗೆಳೆಯರ ಬಳಗದ ಶ್ರೀಧರ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್, ಐಟ್ಯೂನ್ ಆಪ್ಟಿಕಲ್ಸ್ನ ಭರತ್ ಮತ್ತಿತರರು ಇದ್ದರು.
ಪುನೀತ್ ರಾಜ್ ಕುಮಾರ್ ಮಾದರಿ ನಾಯಕ
Get real time updates directly on you device, subscribe now.
Next Post
Comments are closed.