ಕುಣಿಗಲ್: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಲನಚಿತ್ರ ಪಟ್ಟಣದ ಆಕಾಶ್ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಬಿಡುಗಡೆ ಸಮಾರಂಭ್ರವನ್ನು ಹಬ್ಬದ ರೀತಿ ಆಚರಿಸಿ ಸಂಭ್ರಮಿಸುವ ಜೊತೆಯಲ್ಲಿ ಪುನೀತ್ ಅಗಲಿಕೆ ನೆನಸಿಕೊಂಡು ಕಣ್ಣೀರು ಹಾಕಿದರು.
ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರಮಂದಿರದ ಪ್ರವೇಶ ದ್ವಾರ ಸೇರಿದಂತೆ ಚಿತ್ರಮಂದಿರದಲ್ಲಿ ಅಪ್ಪು ಅಭಿನಯದ ಚಿತ್ರಗಳ ಫ್ಲೆಕ್ಸ್ ಅಳವಡಿಸಿ ಸಿಂಗರಿಸುವ ಕಾರ್ಯ ಎರಡು ದಿನದಿಂದ ಭರ್ಜರಿಯಾಗಿ ನಡೆಯಿತು. ಗುರುವಾರ ಇಪ್ಪತ್ತು ಅಡಿ ಅಪ್ಪು ಕಟೌಟ್ ನಿಲ್ಲಿಸಿದ ಅಭಿಮಾನಿಗಳು ವಿಶೇಷವಾಗಿ ಹೂವಿನಿಂದ ಸಿಂಗರಿಸಿ, ಚಿತ್ರ ಪ್ರದರ್ಶನದ ಆರಂಭದಲ್ಲಿ ಕಟೌಟ್ ಗೆ ಪೂಜೆ ಸಲ್ಲಿಸಿ ಹೂವಿನ ಅಭಿಷೇಕ ನೆರವೇರಿಸಿದರು. ಬೆಳಗಿನಿಂದಲೆ ಚಿತ್ರ ಮಂದಿರದ ಬಳಿ ಜಮಾವಣೆಗೊಂಡಿದ್ದ ಅಭಿಮಾನಿಗಳು ಜನಪದ ಕಲಾತಂಡಗಳ ಮೇಳ, ಪಟ ಕುಣಿತದೊಂದಿಗೆ ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರ ಪ್ರೇಮಿಗಳಿಗೆ ಸ್ವಾಗತ ಕೋರಿದರು. ದೇವರ ಪಟ ಕುಣಿತದ ಹಿಂಬದಿಯಲ್ಲಿ ಅಪ್ಪು ಭಾವಚಿತ್ರ ಅಳವಡಿಸಿದ್ದು ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರುವ ಜೊತೆ ನೆಚ್ಚಿನ ನಟ ಇಂದು ಇಲ್ಲವಾಗಿರುವುದು ದುಃಖಕ್ಕೆ ಕಾರಣವಾಯಿತು.
ಚಿತ್ರ ವೀಕ್ಷಣೆಗೆ ಆಗಮಿಸಿದ ಎಲ್ಲರಿಗೂ ಮೈಸೂರು ಪಾಕ್ ಸಿಹಿ ವಿತರಿಸಿದರು. ಮೊದಲ ಪ್ರದರ್ಶನ ವೀಕ್ಷಿಸಿ ತೆರಳಿದ ಪ್ರತಿಯೊಬ್ಬರಿಗೂ ಚಿಕನ್ ಬಿರ್ಯಾನಿ ಪಾಕೆಟ್ ಹಾಗೂ ನೀರಿನ ಬಾಟಲ್ ವಿತರಿಸಿದರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಬಾಬು ಮಹೇಂದರ್ ಮಾತನಾಡಿ, ಇಂದು ಯುವ ಜನತೆಯನ್ನು ಕಾಡುತ್ತಿರುವ ಮಾದಕ ವಸ್ತು ನಿಯಂತ್ರಣ, ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಒಳ್ಳೆಯ ಸಂದೇಶ ಸಾರುವ ಈ ಚಿತ್ರಕ್ಕೆ ಸರ್ಕಾರ ಶೇ.೧೦೦ ರಷ್ಟು ತೆರಿಗೆ ವಿನಾಯಿತಿ ನೀಡಬೇಕು, ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದರು.
ಅಪ್ಪು ಯೂತ್ ಬ್ರಿಗೇಡ್ ಅಧ್ಯಕ್ಷ ಪವನ್ ಮಾತನಾಡಿ, ಪುನೀತ್ ರಾಜಕುಮಾರ್ ಎಲ್ಲಾ ಕನ್ನಡಿಗರ ಹೃದಯದಲ್ಲಿದ್ದಾರೆ, ಅವರ ಸಾಮಾಜಿಕ ಸೇವೆ ಇಂದು ಎಲ್ಲರಿಗೂ ಮಾರ್ಗದರ್ಶಿಯಾಗಬೇಕು, ಅವರ ಅಗಲಿಕೆ ಅಭಿಮಾನಿಗಳಿಗೆ ತುಂಬಲಾರದ ನಷ್ಟ, ರಾಜ್ಯ ಸರ್ಕಾರ ಯುವ ನಟರನ್ನು ಪ್ರೋತ್ಸಾಹಿಸಲು ಅಪ್ಪು ಸರ್ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ನಾಗಣ್ಣ, ಆನಂದ್ ಕುಮಾರ್, ಕರವೇ ಅಧ್ಯಕ್ಷ ಮಂಜುನಾಥ, ಉದ್ಯಮಿ ಶಾಂತರಾಜು, ಶಿವರಾಜ್ ಕುಮಾರ್ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ ಸೇರಿದಂತೆ ಅಭಿಮಾನಿಗಳಾದ ಕಿಟ್ಟಿ, ಮಾರುತಿ, ಜಗದೀಶ, ಚಂದು, ರಾಘವೇಂದ್ರ, ಹೇಮಂತ, ಯೋಗೀಶ, ಶರತ್, ಸುನಿಲ್ ಇತರರು ಇದ್ದರು.
ಜೇಮ್ಸ್ ಚಿತ್ರ ಬಿಡುಗಡೆ- ಅಭಿಮಾನಿಗಳ ಸಂಭ್ರಮ
Get real time updates directly on you device, subscribe now.
Prev Post
Next Post
Comments are closed.