ತಿಪಟೂರು: ಕಲ್ಪತರು ನಾಡಿಗ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರ ಶ್ರೀಕೆರೆಗೋಡಿ-ರಂಗಾಪುರ ಶ್ರೀಶಂಕರೇಶ್ವರ ಸ್ವಾಮಿ ರಥೋತ್ಸವ ಬುಧವಾರ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.
ವಿವಿಧ ಹೂವಿನ ಹಾರ, ಬಣ್ಣ ಬಣ್ಣದ ವಸ್ತುಗಳಿಂದ ರಥವನ್ನು ಶೃಂಗರಿಸಲಾಗಿತ್ತು. ವಿಶೇಷ ಪೂಜಾ ವಿಧಾನಗಳೊಂದಿಗೆ ಭಕ್ತರು ರಥವನ್ನು ಎಳೆದರು. ರಥೋತ್ಸವದ ಮೇಲೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳು ಲಭಿಸುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ರಥದ ಇತಿಹಾಸ: ೧೦೭ ವರ್ಷಗಳ ಹಿಂದೆ ನಾಲ್ಕನೆ ಗುರುಪರದೇಶಿಕೆಂದ್ರ ಸ್ವಾಮೀಜಿ ಕೆರೆಗೋಡಿ ಶಂಕರೇಶ್ವರ ಸ್ವಾಮೀಜಿಗೆ ಮಹಾರಥ ನಿರ್ಮಿಸಿ ಅರ್ಪಿಸಿದ್ದರು. ಆ ರಥಕ್ಕೆ ಪ್ರಸ್ತುತ ಇರುವ ಏಳನೆ ಶ್ರೀಗಳಾದ ಗುರುಪರದೇಶಿಕೇಂದ್ರ ಸ್ವಾಮೀಜಿ ಹೊಸ ಮೆರುಗು ನೀಡಿ ವಿಜೃಂಭಣೆಯಿಂದ ಪ್ರತಿವರ್ಷ ರಥೋತ್ಸವ ನಡೆಸುತ್ತಾ ಬರುತಿದ್ದಾರೆ.
ರಥೋತ್ಸವದ ವೇಳೆ ಸುಡು ಬಿಸಿಲಿದ್ದರೂ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು. ವಿವಿಧ ಘೋಷಣೆಗಳನ್ನು ಕೂಗುತ್ತ ಸ್ವಾಮಿಯವರ ರಥವನ್ನು ಒಟ್ಟಾಗಿ ಎಳೆಯುವ ಮೂಲಕ ವಿಜೃಂಭಣೆಯ ರಥೋತ್ಸವ ನೆರವೇರಿಸಿದರು.
ಭಕ್ತರಿಗೆ ತಾಲ್ಲೂಕಿನ ಅನಗೊಂಡನಹಳ್ಳಿ, ಕೆರೆಗೋಡಿ, ರಂಗಾಪುರ, ತಡಸೂರು, ಹೊಸಹಳ್ಳಿ ಗ್ರಾಮಸ್ಥರು ಪಾನಕ- ಫಲಹಾರ ನೀಡಿ ಬಿಸಿಲಿನ ತಾಪವನ್ನು ತಣಿಸಿದರು.
ರಥೋತ್ಸವದಲ್ಲಿ ಮುಖಂಡ ಕೆ.ಟಿ.ಶಾಂತಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಕೆರೆಗೋಡಿ ಶಂಕರೇಶ್ವರಸ್ವಾಮಿ ಅದ್ದೂರಿ ರಥೋತ್ಸವ
Get real time updates directly on you device, subscribe now.
Prev Post
Next Post
Comments are closed.